Friday, 16th November 2018  

Vijayavani

Breaking News

ನಡುಗಿದ ವಸುಂಧರೆ, ಗುಡುಗಿದ ವರುಣ

Tuesday, 10.07.2018, 3:03 AM       No Comments

ಬೆಂಗಳೂರು: ಕರಾವಳಿ-ಮಲೆನಾಡಿನಲ್ಲಿ ಸೋಮವಾರ ಮಳೆಯಬ್ಬರ ಮುಂದುವರಿದಿದ್ದು, ವಿದ್ಯಾರ್ಥಿನಿಯೊಬ್ಬಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾಳೆ. ಕರಾವಳಿ-ಮಲೆನಾಡಿನ ಹಲವೆಡೆ ಗುಡುಗುಸಹಿತ ಭಾರಿ ಮಳೆಯಾಗಿದ್ದು, ಕೊಡಗು-ಸುಬ್ರಹ್ಮಣ್ಯದಲ್ಲಿ ಲಘು ಭೂಕಂಪವೂ ಸಂಭವಿಸಿದೆ.

ತೀರ್ಥಹಳ್ಳಿ ತಾಲೂಕಿನ ಕೆಂದಾಳುಬೈಲು ಸಮೀಪದ ದೊಡ್ಲಿಮನೆಯಲ್ಲಿ ಸೋಮವಾರ ಬೆಳಗ್ಗೆ ಕಾಲು ಸಂಕ ದಾಟುವಾಗ ಗುಡ್ಡೇಕೇರಿ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಆಶಿಕಾ(15) ಕಾಲು ಜಾರಿ ಬಿದ್ದು ತಾಯಿಯ ಎದುರಲ್ಲೇ ಕೊಚ್ಚಿಕೊಂಡು ಹೋಗಿದ್ದಾಳೆ. ಶಾಲೆಗೆ ರಜೆ ಘೊಷಿಸಿದ್ದು ತಿಳಿಯದೆ ತಾಯಿಯ ಜತೆ ಶಾಲೆಗೆ ಬಂದು ಮನೆಗೆ ಮರಳುವಾಗ ಈ ದುರ್ಘಟನೆ ಸಂಭವಿಸಿದೆ.

ಮಳೆಯಿಂದಾಗಿ ಮಡಿಕೇರಿಯ ಮಹದೇವಪೇಟೆಯಲ್ಲಿ ಸೋಮವಾರ ಮುಂಜಾನೆ ಮನೆಯೊಂದು ಕುಸಿದಿದೆ. ಮನೆಯಲ್ಲಿ ಯಾರೂ ಇಲ್ಲದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಡಿಕೇರಿ ತಾಲೂಕಿನ ಮದೆನಾಡು ಮುಖ್ಯ ರಸ್ತೆಯಲ್ಲಿ ಸಣ್ಣಮಟ್ಟದಲ್ಲಿ ಬರೆ ಕುಸಿತವಾಗಿತ್ತು. ಜೆಸಿಬಿಯಿಂದ ಮಣ್ಣು ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಕಾರವಾರ, ಶಿರಸಿ, ಸಿದ್ಧಾಪುರ, ಯಲ್ಲಾಪುರಗಳಲ್ಲೂ ಉತ್ತಮ ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮಳೆಯಾಗಿರುವ ಕಾರಣ ವರದಾ ನದಿಯಲ್ಲಿ ನೀರಿನ ಮಟ್ಟ ಸೋಮವಾರ ಜಾಸ್ತಿಯಾಗಿದೆ. ಸಕಲೇಶಪುರ ತಾಲೂಕಿನಾದ್ಯಂತ ಸೋಮವಾರ ಸುರಿದ ಭಾರಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಯಿತು.

ಮಡಿಕೇರಿಯಲ್ಲಿ 14 ಸೆಂ.ಮೀ. ಭಾರಿ ಮಳೆ ದಾಖಲಾಗಿದೆ. ಆಗುಂಬೆ, ಶೃಂಗೇರಿ, ಬಂಟ್ವಾಳದಲ್ಲಿ ತಲಾ 13, ಭಾಗಮಂಡಲ, ಜಯಪುರದಲ್ಲಿ ತಲಾ 11, ಸುಳ್ಯ, ಮಂಕಿಯಲ್ಲಿ ತಲಾ 10, ಲಿಂಗನಮಕ್ಕಿಯಲ್ಲಿ 9, ಸುಬ್ರಹ್ಮಣ್ಯ, ಸಿದ್ದಾಪುರ, ಕದ್ರಾ, ಕೊಲ್ಲೂರು, ತಾಳಗುಪ್ಪದಲ್ಲಿ ತಲಾ 7 ಸೆಂ.ಮೀ. ಮಳೆ ದಾಖಲಾಗಿದೆ. ಮುಂಗಾರು ಮತ್ತಷ್ಟು ಚುರುಕಾಗಲಿದೆ. ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಜು.14ರವರೆಗೂ ಭಾರಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಂಪಿಸಿದರೂ ದಾಖಲಾಗದ ಭೂಕಂಪನ !

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ಹಾಗೂ ಕೊಡಗು ಜಿಲ್ಲೆಯ ಗಡಿಪ್ರದೇಶ ಪುಷ್ಪಗಿರಿ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ 12.55ರ ವೇಳೆ ಲಘು ಭೂಕಂಪದ ಅನುಭವವಾಗಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ವ್ಯಾಪ್ತಿಯ ಪುಷ್ಪಗಿರಿ ತಪ್ಪಲಲ್ಲಿ ಭೂಕಂಪನದ ಕೇಂದ್ರಸ್ಥಾನ ಎಂದು ಅಂದಾಜಿಸಲಾಗಿದೆ. ಮಡಿಕೇರಿ, ಸೋಮವಾರಪೇಟೆ, ಚೆಂಬು, ಕುಕ್ಕೆ ಸುಬ್ರಹ್ಮಣ್ಯ ಸುತ್ತಲಿನ ಪರಿಸರದಲ್ಲಿ ಮಧ್ಯಾಹ್ನ 12.50ರಿಂದ 1.10ರ ನಡುವೆ ಅಂದಾಜು 3 ಸೆಕಂಡುಗಳ ಕಾಲ ಭೂಮಿ ಲಘುವಾಗಿ ಕಂಪಿಸಿದ್ದು, ಪಾತ್ರೆ-ಗೃಹೋಪಯೋಗಿ ವಸ್ತುಗಳು ಅಲುಗಾಡಿವೆ ಎಂದು ಜನರು ತಿಳಿಸಿದ್ದಾರೆ. ಅಚ್ಚರಿ ಎಂದರೆ ಹಾರಂಗಿಯಲ್ಲಿರುವ ಭೂಕಂಪನ ಮಾಪನ ಕೇಂದ್ರದಲ್ಲಿ ಭೂಕಂಪನ ದಾಖಲಾಗಿಲ್ಲ.

ಮಲಪ್ರಭಾದಲ್ಲಿ ಮುಳುಗಿದ ದೇವಸ್ಥಾನ

ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ವಿುಸಿರುವ ಬೆಳಗಾವಿಯ ಕಲ್ಲೋಳ-ಯಡೂರ ಸೇತುವೆ ಹಾಗೂ ವೇದಗಂಗಾ ನದಿಗೆ ಅಡ್ಡಲಾಗಿ ನಿರ್ವಿುಸಿರುವ ಮಲಿಕವಾಡ-ದತ್ತವಾಡ ಸೇತುವೆಗಳು ಮುಳುಗಡೆಯಾಗಿದ್ದು ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಖಾನಾಪುರ ತಾಲೂಕಿನ ಹಬ್ಬನಟ್ಟಿ ಬಳಿ ಆಂಜನೇಯ ದೇವಸ್ಥಾನ ಮಲಪ್ರಭಾ ನದಿಯಲ್ಲಿ ಮುಳುಗಡೆಯಾಗಿದೆ. ಸಾಗರ ತಾಲೂಕು ಬೀಸನಗದ್ದೆ, ಕಾನ್ಲೆ ಭಾಗದಲ್ಲಿ ಸಾವಿರಾರು ಎಕರೆ ಗದ್ದೆ ಜಲಾವೃತವಾಗಿದೆ. ಲಿಂಗನಮಕ್ಕಿ ಅಣೆಕಟ್ಟೆಗೆ 32,763 ಕ್ಯೂಸೆಕ್, ಭದ್ರಾ ಜಲಾಶಯಕ್ಕೆ 17,102 ಕ್ಯೂಸೆಕ್, ತುಂಗಾ ಡ್ಯಾಂಗೆ 35,653 ಕ್ಯೂಸೆಕ್ ಒಳಹರಿವು ಇದೆ. ಲಿಂಗನಮಕ್ಕಿ ಮತ್ತು ಭದ್ರಾ ಜಲಾಶಯದಲ್ಲಿ ಒಂದೇ ದಿನದಲ್ಲಿ 2 ಅಡಿ ನೀರು ಹೆಚ್ಚಾಗಿದೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು, ಕಳಸ ಭಾಗದಲ್ಲಿ ವರ್ಷಧಾರೆಯಾಗುತ್ತಿರುವುದರಿಂದ ಭದ್ರಾ ಹಾಗೂ ತುಂಗಾ ನದಿಗಳು ತುಂಬಿ ಹರಿಯುತ್ತಿವೆ. ತೀರ್ಥಹಳ್ಳಿ ಮತ್ತು ಶೃಂಗೇರಿ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.


ವಿಶೇಷ ಪ್ಯಾಕೇಜ್​ಗೆ ಬಿಜೆಪಿ ಆಗ್ರಹ

ಬೆಂಗಳೂರು: ಸತತ ಮಳೆಯಿಂದ ತತ್ತರಿಸಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಬಿಜೆಪಿ ಶಾಸಕರು ಸೋಮವಾರ ವಿಧಾನಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

ಬಿಜೆಪಿಯ ವಿ.ಸುನೀಲ್​ಕುಮಾರ್ ವಿಷಯ ಪ್ರಸ್ತಾಪಿಸಿ, ಎರಡೂ ಜಿಲ್ಲೆಗಳಲ್ಲಿ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳು ಕುಸಿದಿವೆ. ಸಾವು-ನೋವು ಕೂಡ ಸಂಭವಿಸಿವೆ. ಹೀಗಾಗಿ ಉಭಯ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉಡುಪಿ ಶಾಸಕ ರಘುಪತಿ ಭಟ್ ದನಿಗೂಡಿಸಿ, ಪ್ರತಿ ಮನೆ ಕುಸಿತಕ್ಕೆ 1 ಲಕ್ಷ ರೂ. ಪರಿಹಾರ ಘೋಷಿಸಬೇಕು ಎಂದು ಮನವಿ ಮಾಡಿದರು.

ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರದ ಪ್ರಕಾರ, ಸಂಪೂರ್ಣ ಮನೆ ಕುಸಿತಕ್ಕೆ 95 ಸಾವಿರ ರೂ. ಹಾಗೂ ಭಾಗಶಃ ಕುಸಿತಕ್ಕೆ 5,200 ರೂ. ಪರಿಹಾರ ಕೊಡಲಾಗುತ್ತಿದೆ. ಅದು ಸಾಕಾಗುವುದಿಲ್ಲ ಎಂಬ ಕಾರಣಕ್ಕೆ ಸುತ್ತೋಲೆ ಹೊರಡಿಸಿ ಸಂಪೂರ್ಣ ಕುಸಿದ ಮನೆಗಳಿಗೆ ಸಿಎಂ ಪರಿಹಾರ ನಿಧಿಯಿಂದ 1 ಲಕ್ಷ ರೂ. ಪರಿಹಾರ ನೀಡಲಾಗುವುದು. ಅಲ್ಲದೆ, ಒಟ್ಟಾರೆ ನಷ್ಟದ ವರದಿ ತರಿಸಿಕೊಂಡು ಹೆಚ್ಚಿನ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಅಭದ್ರತೆಯಲ್ಲಿ ಆದಿವಾಸಿ ಕುಟುಂಬ

ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಆದಿವಾಸಿ ಮಲೆಕುಡಿಯ ಕುಟುಂಬವೊಂದು ನಡುಗಡ್ಡೆಯಲ್ಲಿ ಸಿಲುಕಿದೆ. ಮೂಡಿಗೆರೆ ತಾಲೂಕು ಅಮ್ತಿ ಹೊಳೆಕೂಡಿಗೆ ಗ್ರಾಮದ ರುದ್ರಯ್ಯ ಕುಟುಂಬ 40 ವರ್ಷಗಳಿಂದ ತೆಪ್ಪ ಆಧರಿಸಿ ಸಂಚಾರ ನಡೆಸುತ್ತಿದೆ. ಮನೆಯ ಒಂದು ಭಾಗದಲ್ಲಿ ಕಾಫಿ ತೋಟವಿದ್ದರೆ ಮತ್ತೊಂದು ಭಾಗದಲ್ಲಿ ಭದ್ರಾ ನದಿ ಸುತ್ತುವರಿದಿದೆ. ಕಳೆದ 8 ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವುದರಿಂದ ಈ ಕುಟುಂಬಕ್ಕೆ ಹೊರಗಿನ ಪ್ರಪಂಚದ ಸಂಪರ್ಕ ಇಲ್ಲದಂತಾಗಿದೆ.

ಮುಂಬೈ: ಸತತ ಮಳೆಯಿಂದ ಮುಂಬೈ ತತ್ತರಿಸಿ ಹೋಗಿದೆ. ರಸ್ತೆ-ರೈಲು ಹಳಿಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪಲಘರ್ ಜಿಲ್ಲೆಯ ವಸಯ್ ಗ್ರಾಮ ಮುಳುಗಡೆ ಆಗಿದ್ದು, 300 ಜನರನ್ನು ರಕ್ಷಿಸಲಾಗಿದೆ. ರತ್ನಗಿರಿ ಜಿಲ್ಲೆಯಲ್ಲಿ ನೀರಿನಲ್ಲಿ ಸಿಲುಕಿದ್ದ 12 ಪ್ರವಾಸಿಗರನ್ನು ರಕ್ಷಣಾ ತಂಡ ರಕ್ಷಿಸಿದೆ. ಮುಂಬೈನ ಕುರ್ಲಾ, ಸಿಯಾನ್ ಮತ್ತು ದಾದರ್​ನಲ್ಲೂ ಭಾರಿ ಮಳೆೆಯಾಗಿದ್ದು, ಸೋಮವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ನಾಗ್ಪುರ ವಿಧಾನಸಭೆ ಆವರಣ ಕಳೆದ ವಾರ ಸುರಿದ ಭಾರಿ ಮಳೆಯ ನೀರಿನಿಂದ ತುಂಬಿ ಹೋಗಿದ್ದರಿಂದ ಇದುವರೆಗೂ ಚಳಿಗಾಲದ ಅಧಿವೇಶನ ನಡೆಸಲು ಸಾಧ್ಯವಾಗಲಿಲ್ಲ.

ಮಹಿಳೆ ಸಾವು

ಮುಂಬೈನ ಶಿವಾಜಿ ಚೌಕ್ ಬಳಿ ದಂಪತಿ ಬೈಕ್​ನಲ್ಲಿ ಸಾಗುತ್ತಿದ್ದು, ಮಳೆನೀರಿನಿಂದ ತುಂಬಿದ್ದ ಗುಂಡಿ ಮೇಲೆ ಬೈಕ್ ಚಲಿಸಿದೆ. ಆಗ ಕೆಳಕ್ಕೆ ಬಿದ್ದ ಪತ್ನಿ ಮನೀಷಾ (41) ಎಂಬವರ ಮೇಲೆ ಪಕ್ಕದಲ್ಲೇ ಸಾಗುತ್ತಿದ್ದ ಬಸ್ಸಿನ ಹಿಂಬದಿ ಚಕ್ರ ಹಾದು ಹೋಗಿದ್ದರಿಂದ ಅವರು ಸ್ಥಳದಲ್ಲೇ ಸಾವಿಗೀಡಾದರು. ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.

Leave a Reply

Your email address will not be published. Required fields are marked *

Back To Top