ಅಕ್ಕಿಆಲೂರಲ್ಲಿ ನಿರಂತರ ಭಾರಿ ಮಳೆ

ಅಕ್ಕಿಆಲೂರ: ಕಳೆದ ನಾಲ್ಕು ದಿನಗಳಿಂದ ಅಕ್ಕಿಆಲೂರ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನರ ಮೊಗದಲ್ಲಿ ಸಂತಸ ಮೂಡಿಸಿದೆ.

ಅಕ್ಕಿಆಲೂರ ಹಾಗೂ ಶಿರಸಿ ಗಡಿಭಾಗಕ್ಕೆ ಒಳಪಡುವ ಗ್ರಾಮಗಳಲ್ಲಿ ಅಧಿಕ ಮಳೆಯಾಗುತ್ತಿದೆ. ಹೀಗಾಗಿ ಹಾನಗಲ್ಲ ತಾಲೂಕಿನ 93 ಕೆರೆಗಳನ್ನು ತುಂಬಿಸುವ ಯಮಗೊಳ್ಳಿ ಡ್ಯಾಂ ಭರ್ತಿಯಾಗುತ್ತಿದೆ. ಈಗಾಗಲೇ ಧರ್ವ ಕಾಲುವೆ ಮೂಲಕ ಅಲ್ಪ ಪ್ರಮಾಣದ ನೀರು ಕೆರೆಗಳಿಗೆ ಬಂದು ಸೇರುತ್ತಿದೆ. ಶಿವಮೊಗ್ಗ ಜಿಲ್ಲೆ ಆನವಟ್ಟಿ ಮೂಲಕ ವರದಾ ನದಿ ಅಕ್ಕಿಆಲೂರ ಭಾಗದ ನದಿ ಪ್ರವೇಶಿಸಿದೆ.

ತಡವಾದರೂ ಉತ್ತಮ ಬಿತ್ತನೆ: ಅಕ್ಕಿಆಲೂರ ಹೋಬಳಿ ವ್ಯಾಪ್ತಿಯ 16 ಗ್ರಾಪಂನ 52 ಗ್ರಾಮಗಳಲ್ಲಿ 16500 ಹೆಕ್ಟೇರ್ ಭೂಮಿ ಇದೆ. ಈ ಪೈಕಿ ಈಗಾಗಲೇ 4400 ಹೆಕ್ಟೇರ್ ಭತ್ತ, 5700 ಗೋವಿನಜೋಳ, 1100 ಸೋಯಾಬಿನ್, 1492 ಹತ್ತಿ ಮತ್ತು 1950 ಹೆಕ್ಟೇರ್ ಕಬ್ಬು ಬಿತ್ತನೆ ಮಾಡಲಾಗಿದೆ. ಇನ್ನೂ 2200 ಹೆಕ್ಟೇರ್ ಬಿತ್ತನೆಯಾಗುವ ನಿರೀಕ್ಷೆ ಇದೆ. ರೈತರಿಗೆ ಕೃಷಿ ಸಂಬಂಧಿತ ಸಮಗ್ರ ಮಾಹಿತಿಯನ್ನು ನಿರಂತರವಾಗಿ ನೀಡಲಾಗುವುದು ಎಂದು ತಾಲೂಕು ಕೃಷಿ ಅಧಿಕಾರಿ ಸಂಗಮೇಶ ಹಕ್ಕಪ್ಪನವರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *