ನಾಡಿನಲ್ಲಿ ಗಾಳಿ, ಕಡಲಿನಲ್ಲಿ ಅಲೆಗಳ ಅಬ್ಬರ

ಮಂಗಳೂರು:  ಪಶ್ಚಿಮ ಕರಾವಳಿಯಲ್ಲಿ ಗುಜರಾತ್ ಕಡೆಗೆ ಸಾಗುತ್ತಿರುವ ವಾಯು ಚಂಡಮಾರುತದ ಕೃಪೆಯಿಂದಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಇಡೀ ದಿನ ಮೋಡ-ಮಳೆಯ ಕಣ್ಣಾಮುಚ್ಚಾಲೆ ಇತ್ತು.
ಮಂಗಳವಾರ ರಾತ್ರಿಯಿಂದಲೇ ಕೆಲವೊಮ್ಮೆ ಬಿರುಸಾಗಿ ಹಾಗೂ ಹಗುರಾಗಿ ಮಳೆಯಾಗುತ್ತಿತ್ತು. ಬುಧವಾರ ಬಿಟ್ಟುಬಿಟ್ಟು ಬಿರುಸಿನ ಮಳೆಯೊಂದಿಗೆ ಬಲವಾದ ಗಾಳಿಯೂ ಬೀಸಿದ್ದು, ಹಲವೆಡೆ ಮನೆ, ಅಡಕೆ ತೋಟ, ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

ಕಡಬ ತಾಲೂಕಿನ ಆಲಂಕಾರು, ಕೊಲ, ರಾಮಕುಂಜ ಮೊದಲಾದೆಡೆ ಸಾಯಂಕಾಲ ಹಲವು ರೈತರ ಅಡಕೆ ಮರಗಳು ಧರೆಗುರುಳಿವೆ. ಕಿನ್ನಿಗೋಳಿ- ಮೂಲ್ಕಿ ರಾಜ್ಯ ಹೆದ್ದಾರಿಯ ಹೊಸಕಾವೇರಿಯಲ್ಲಿ ಮರದ ಕೊಂಬೆ ಮುರಿದು ವಿದ್ಯುತ್ ಲೈನ್ ಮೇಲೆ ಬಿದ್ದು ಕೆಲಹೊತ್ತು ವಿದ್ಯುತ್ ವ್ಯತ್ಯಯ ಉಂಟಾಯಿತು. ಕುಂದಾಪುರ ತಾಲೂಕು ಆಲೂರು ಗ್ರಾಮ ನಿವಾಸಿ ಜಲಜಾ ಆಚಾರ್ಯ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಶಂಕರನಾರಾಯಣ ಬಳಿ ಮರ ಉರುಳಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು.
ಬಿರುಗಾಳಿ ಎಚ್ಚರಿಕೆ: ಭಾಗೀರಥಿ ಜನ್ಮದಿನವಾದ ಬುಧವಾರ ಬೆಳಗ್ಗೆಯಿಂದಲೇ ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದೆ. ಪಡುಕೆರೆ, ಮಲ್ಪೆ, ಕೈಪುಂಜಾಲು ಭಾಗಗಳಲ್ಲಿ ಅಬ್ಬರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿರುವ ಕಾರಣ ಮೀನುಗಾರರು, ಸಾರ್ವಜನಿಕರು ಸಮುದ್ರ ತೀರಕ್ಕೆ ಹೋಗದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಶುಕ್ರವಾರದವರೆಗೆ ಭಾರಿ ಗಾಳಿ, ಮಳೆ, ಗುಡುಗು-ಮಿಂಚು ಕರಾವಳಿ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದು, ಗಂಟೆಗೆ 50ರಿಂದ 70 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಮುಖ್ಯವಾಗಿ ಕಡಲ ತೀರ ಪ್ರದೇಶಗಳಾದ ಕುಂದಾಪುರ, ಗಂಗೊಳ್ಳಿ, ಕಾಪು, ಮಲ್ಪೆ, ಹೆಜಮಾಡಿ, ಪಡುಪಣಂಬೂರು, ಮಂಗಳೂರು, ಉಳ್ಳಾಲ ಭಾಗದಲ್ಲಿ ಗಾಳಿಯ ರಭಸ ಹೆಚ್ಚಾಗಲಿದೆ. ಕಾರ್ಕಳ ಭಾಗದಲ್ಲಿ ಗಾಳಿ ಜತೆಗೆ ಮಿಂಚಿನ ಅಬ್ಬರವೂ ಹೆಚ್ಚಿರಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಇಂದು ಮುಂಗಾರು ನಿರೀಕ್ಷೆ
ಚಂಡಮಾರುತದ ಪ್ರಭಾವದಿಂದ ಒಂದಷ್ಟು ಚದುರಿ ಹೋಗಿರುವ ಮುಂಗಾರು ಮಳೆಯ ಮೋಡಗಳನ್ನು ಹೊತ್ತ ಮಾರುತ ಜೂ.13ರಂದು ರಾತ್ರಿ ಕರಾವಳಿಗೆ ವರ್ಷಧಾರೆ ತರುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಮುಂಗಾರು ಕರಾವಳಿ ತಲುಪುವುದಲ್ಲದೆ ಒಳನಾಡಿಗೂ ಮಳೆ ತರಬೇಕಿತ್ತು, ಆದರೆ ಚಂಡಮಾರುತದಿಂದ ಒಂದಷ್ಟು ವಿಳಂಬವಾಗಿರುವುದು ನಿಜ, ಆದರೆ ಇನ್ನು ಕೆಲದಿನಗಳಲ್ಲಿ ಮುಂಗಾರು ಉತ್ತಮಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಕೆಎಸ್‌ಎನ್‌ಡಿಎಂಸಿಯ ವಿಜ್ಞಾನಿ ಸುನೀಲ್ ಗಾವಸ್ಕರ್ ತಿಳಿಸಿದ್ದಾರೆ.

ಕಳೆದ ವರ್ಷಕ್ಕಿಂತ ಮಳೆ ಕಮ್ಮಿ
ಬುಧವಾರ ಬೆಳಗ್ಗೆ ವರದಿಯಾದಂತೆ ಹಿಂದಿನ 24 ಗಂಟೆಗಳಲ್ಲಿ ಸುರಿದ ಮಳೆ ವಿವರ- ಬಂಟ್ವಾಳ 28.6, ಬೆಳ್ತಂಗಡಿ 17.4, ಮಂಗಳೂರು 18.7, ಪುತ್ತೂರು 4.1, ಸುಳ್ಯ 20.2, ಉಡುಪಿ 25, ಕುಂದಾಪುರ 30, ಕಾರ್ಕಳ 35 ಮಿ.ಮೀ. ದ.ಕ. ಜಿಲ್ಲೆಯಲ್ಲಿ ಕಳೆದ ವರ್ಷ ಜನವರಿಯಿಂದ ಜೂನ್ 12ರ ವರೆಗಿನ ಅವಧಿಯಲ್ಲಿ ಒಟ್ಟು ಸರಾಸರಿ 901.5 ಮಿ.ಮೀ ಮಳೆಯಾಗಿದ್ದರೆ ಈ ವರ್ಷ ಕೇವಲ 141.6 ಮಿ.ಮೀ. ಮಾತ್ರವೇ ಮಳೆಯಾಗಿದೆ.

ಉಳ್ಳಾಲದಲ್ಲಿ ಎಂಟು ಮನೆಗಳ ಸ್ಥಳಾಂತರ

ಉಳ್ಳಾಲ: ಉಳ್ಳಾಲದಲ್ಲಿ ಕಡಲ್ಕೊರೆತ ಬುಧವಾರವೂ ಮುಂದುವರಿದಿದೆ. ಕೈಕೋ ಕಿಲಿರಿಯಾ ನಗರದಲ್ಲಿರುವ ಎಂಟು ಕುಟುಂಬಗಳು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಂಡಿವೆ. ಸೋಮೇಶ್ವರ-ಉಚ್ಚಿಲ ಭಾಗದಲ್ಲಿ ಒಂದು ಮನೆ ಸಂಜೆ ವೇಳೆ ಸಮುದ್ರಪಾಲಾಗಿದೆ.
ಖಲೀಲ್, ಝೊಹರಾ, ಜೈನಬಾ, ಝೊಹರಾ ರಹೀಂ, ಜುಬೇರಾ, ನಸೀಮಾ ಹಾಗೂ ಮನೆ ಕಳೆದುಕೊಂಡ ಮೈಮುನಾ ಇಕ್ಬಾಲ್ ಮತ್ತು ಝೊಹರಾ ಎಂಟು ಕುಟುಂಬಗಳು ಕೋಟೆಕಾರು ಮತ್ತು ಉಳ್ಳಾಲಬೈಲಿನಲ್ಲಿರುವ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಂಡಿವೆ. ಮಂಗಳವಾರ ರಾತ್ರಿಯಿಡೀ ಅಲೆಗಳ ಹೊಡೆತ ತೀವ್ರವಾಗಿತ್ತು. ಅಪಾಯದಂಚಿನಲ್ಲಿರುವ ಮನೆಗಳಿಗೆ ಭಾಗಶಃ ಹಾನಿಯಾಗುತ್ತಿದೆ. ಅಂಗಳಕ್ಕೆ ಸಮುದ್ರ ನೀರು ಉಕ್ಕುತ್ತಿರುವುದರಿಂದ ಅಲ್ಲಿ ಉಳಿಯುವುದು ಕಷ್ಟ. ಕುಡಿಯುವ ನೀರಿಗೂ ತತ್ವಾರ ಇದೆ. ಉಳ್ಳಾಲ ಬೀಚ್ ಸಮೀಪವಿರುವ ಅಲ್ಬುಕರ್ಕ್‌ರ ಸಮ್ಮರ್ ಸ್ಯಾಂಡ್ ರೆಸಾರ್ಟ್ ಗೋಡೆಗಳಿಗೂ ಅಲೆಗಳು ಬಡಿಯುತ್ತಿದ್ದು, ಕಟ್ಟಡ ಅಪಾಯದಂಚಿನಲ್ಲಿದೆ. ಸೋಮೇಶ್ವರ-ಉಚ್ಚಿಲ ಭಾಗದಲ್ಲಿ ಅಬೂಬಕರ್ ಎಂಬವರ ಮನೆಗೆ ಅರ್ಧದಷ್ಟು ಹಾನಿಯಾಗಿದೆ. ನಾಗೇಶ್, ವಿಶ್ವನಾಥ್ ಎಂಬವರ ಮನೆಯೂ ಭಾಗಶಃ ಹಾನಿಯಾಗಿದೆ. ಮಂಗಳವಾರ ಎರಡು ಮನೆಗಳ ಶೆಡ್ ನೀರುಪಾಲಾಗಿತ್ತು.
ಮೂರು ದಿನದಲ್ಲಿ 20ಕ್ಕೂ ಅಧಿಕ ತೆಂಗಿನಮರಗಳು ಸಮುದ್ರಪಾಲಾಗಿವೆ.

ಮಾತು ಕೇಳದ ಸ್ಥಳೀಯರು:  ಉಳ್ಳಾಲ ಭಾಗಕ್ಕೆ ಎರಡು ದಿನಗಳಿಂದ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿದ್ದೇವೆ. ಆದರೆ ಸ್ಥಳೀಯರು ಅಧಿಕಾರಿಗಳ ಮಾತು ಕೇಳುತ್ತಿಲ್ಲ. ತೀರಾ ಅಪಾಯದಂಚಿನಲ್ಲಿರುವ ಮನೆಗಳಿಗೆ ಹಿಂದೆಯೇ ಮುನ್ನೆಚ್ಚರಿಕೆ ನೀಡಲಾಗಿದೆ. ಆದರೆ ಮತ್ತೆ ಮನೆಗಳನ್ನು ಮರುನಿರ್ಮಿಸಿ ಅಲ್ಲೇ ವಾಸಿಸುತ್ತಿದ್ದಾರೆ. ಸರ್ಕಾರದಿಂದ ಸ್ವಲ್ಪ ಪ್ರಮಾಣದ ಪರಿಹಾರ ನೀಡಲು ಸಾಧ್ಯ. ಶಾಶ್ವತ ವ್ಯವಸ್ಥೆ ಅಥವಾ ಬಾಡಿಗೆ ಮನೆ ಮಾಡಿ ಕೊಡಲು ಅವಕಾಶವಿಲ್ಲ. ಜನ ತಾಳ್ಮೆಯಿಂದ ವರ್ತಿಸಿದಲ್ಲಿ ಮುಂದಿನ ಕ್ರಮ ನಿರ್ವಹಿಸಬಹುದು ಎಂದು ಸಹಾಯಕ ಕಮೀಷನರ್ ರವಿಚಂದ್ರ ನಾಯಕ್ ಹೇಳಿದರು.

ಕಡಲ್ಕೊರೆತ ಪ್ರದೇಶಗಳಿಗೆ ಎಂಟು ಕಡೆ ಮೂವರಂತೆ 24 ಹೋಂಗಾರ್ಡ್‌ಗಳನ್ನು ಬುಧವಾರ ನಿಯೋಜಿಸಲಾಗಿದೆ. ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ಸಾರ್ವಜನಿಕರು ಸಮುದ್ರಕ್ಕೆ ಇಳಿಯದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಹೋಂಗಾರ್ಡ್ ಕಮಾಂಡೆಂಟ್ ಡಾ.ಮುರಲೀಮೋಹನ್ ಚೂಂತಾರು ಹೇಳಿದ್ದಾರೆ.

ಮನೆ ಮೇಲೆ ಕುಸಿದ ಕಾಂಪೌಂಡ್, ಮಗು ಪ್ರಾಣಾಪಾಯದಿಂದ ಪಾರು

ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಬೆದ್ರೋಡಿ ಜನತಾ ಕಾಲನಿಯಲ್ಲಿ ಬುಧವಾರ ಸಾಯಂಕಾಲ ನೆರೆಮನೆಯ ಕಾಂಪೌಂಡ್ ಕುಸಿದು ಬಿದ್ದು ಮನೆ ಸಂಪೂರ್ಣ ಹಾನಿಗೀಡಾಗಿದ್ದು, ಮಲಗಿದ್ದ 2 ವರ್ಷದ ಮಗು ಪಾರಾಗಿದೆ.
ಬೆದ್ರೋಡಿ ನಿವಾಸಿ ನವಾಜ್ ಎಂಬುವರ ಮನೆ ಮೇಲೆ ಹಿಂಭಾಗದಲ್ಲಿದ್ದ ದರೆಗೆ ಅಡ್ಡವಾಗಿ ನೆರೆಮನೆ ನಿವಾಸಿ ಶರೀಫ್ ಎಂಬುವರು ಕಟ್ಟಿದ್ದ ತಡೆಗೋಡೆ ಸಾಯಂಕಾಲ ಸುರಿದ ಮಳೆ ವೇಳೆ ಕುಸಿದು ಬಿದ್ದಿದೆ. ತಡೆಗೋಡೆ ಮನೆಯ ಮಾಡಿನ ಮೇಲೆ ಬಿದ್ದು ಮನೆಯ 2 ಗೋಡೆಗಳು ಉರುಳಿವೆ. ಈ ಸಂದರ್ಭ ಕೋಣೆಯಲ್ಲಿ ನವಾಜ್‌ರ ಮಗು ನಿದ್ರಿಸುತ್ತಿತ್ತು. ಗೋಡೆ ಕುಸಿಯುವ ಐದು ನಿಮಿಷ ಮೊದಲಷ್ಟೇ ಎಚ್ಚರಗೊಂಡ ಮಗುವನ್ನು ತಾಯಿ ಅಸ್ಮ ಹೊರಗಡೆ ಕರೆದುಕೊಂಡು ಹೋಗಿದ್ದರಿಂದ ಸಂಭಾವ್ಯ ಅಪಾಯ ತಪ್ಪಿದೆ. ಫ್ರಿಜ್, ಟಿವಿ,ಪಾತ್ರೆಗಳು ಹಾನಿಗೀಡಾಗಿವೆ. ಬಜತ್ತೂರು ಗ್ರಾಪಂ ಸದಸ್ಯರಾದ ನಝೀರ್ ಬೆದ್ರೋಡಿ, ಪ್ರೆಸಿಲ್ಲಾ ಡಿಸೋಜ, ಗ್ರಾಮಕರಣಿಕ ಸುನೀಲ್ ಭೇಟಿ ನೀಡಿ ಪರಿಶೀಸಿದ್ದಾರೆ.

ಚಾರ್ಮಾಡಿ ಘಾಟಿಯಲ್ಲಿ ಮರಬಿದ್ದು ಸಂಚಾರ ವ್ಯತ್ಯಯ

ಬೆಳ್ತಂಗಡಿ: ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಮರಗಳು ರಸ್ತೆಗೆ ಬಿದ್ದು ಕೆಲಹೊತ್ತು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಮರಗಳನ್ನು ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಮುಂದುವರಿದಿದೆ. ಮಳೆ ಆರಂಭದಲ್ಲೇ ಸಮಸ್ಯೆಯಾಗಿದ್ದು, ಮುಂಬರುವ ದಿನಗಳಲ್ಲಿ ತೊಂದರೆಯಾಗಬಹುದು ಎಂಬುದು ಪ್ರಯಾಣಿಕರ ಆತಂಕ.

ರಸ್ತೆಗೆ ಉರುಳಿದ ಮರ, ಬೈಕ್ ಸವಾರ ಪಾರು

ಮೂಡುಬೆಳ್ಳೆ: ಇಲ್ಲಿನ ಉಡುಪಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ತಿರ್ಲಪಲ್ಕೆ ಸಮೀಪ ಬುಧವಾರ ಸಾಯಂಕಾಲ ರಸ್ತೆಗೆ ಮರ ಬಿದ್ದಿದ್ದು, ಬೈಕ್ ಸವಾರ- ಪಳ್ಳಿ ನಿವಾಸಿ ಪತ್ರಿಕಾ ವಿತರಕ ಗೋವಿಂದ ಆಚಾರ್ಯ(50) ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಉಡುಪಿಯಿಂದ ಪಳ್ಳಿಗೆ ತೆರಳುತ್ತಿದ್ದಾಗ ಭಾರಿ ಗಾಳಿಮಳೆಗೆ ಮರ ಬಿದ್ದಿದೆ. ಅವರ ಬಲಗಾಲಿಗೆ ಗಾಯವಾಗಿದ್ದು, ಬೈಕ್ ಮುಂಭಾಗಕ್ಕೆ ಹಾನಿಯಾಗಿದೆ. ಮರವನ್ನು ಮೆಸ್ಕಾಂ ಸಿಬ್ಬಂದಿ, ಗ್ರಾಪಂ ಸದಸ್ಯ ಗುರುರಾಜ್ ಭಟ್, ರಾಜೇಂದ್ರ ಶೆಟ್ಟಿ, ಕೃಷ್ಣ ಆಚಾರ್ಯ, ಗಣೇಶ ಪಾಣಾರ ಮತ್ತಿತರರು ತೆರವುಗೊಳಿಸಿದರು. ಅರ್ಧ ಗಂಟೆ ಹೆದ್ದಾರಿ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಮರ ಬಿದ್ದು ಮನೆಗೆ ಹಾನಿ

ಗುರುಪುರ: ಮೂಳೂರು ಗ್ರಾಮದ ಬಳ್ಳಿ ಎಂಬಲ್ಲಿ ಬುಧವಾರ ಮಧ್ಯಾಹ್ನ ಗುಡ್ಡದ ಮೇಲಿದ್ದ ಬೃಹತ್ ಆಲದ ಮರ ಚಂದ್ರಶೇಖರ ಪೂಜಾರಿ ಎಂಬವರ ಮನೆ ಮೇಲೆ ಬಿದ್ದು ಹಾನಿಯಾಗಿದೆ.
ಮನೆ ಗೋಡೆ ಜಖಂಗೊಂಡಿದ್ದು, ಎರಡು ಕೊಠಡಿಗಳಲ್ಲಿದ್ದ ಸೊತ್ತುಗಳು ಪುಡಿಯಾಗಿವೆ. ಮಳೆ ನೀರು ಮನೆಯೊಳಗೆ ಸುರಿಯುತ್ತಿದ್ದು, ಮರ ತೆರವುಗೊಳಿಸಿ ಟರ್ಪಾಲು ಹಾಸಲಾಗಿದೆ. ಮನೆಯಲ್ಲಿ ಚಂದ್ರಶೇಖರ ಅವರ ಸಹೋದರಿ ಪುಷ್ಪಾ ಎಂಬುವರು ಮಾತ್ರ ಇದ್ದರು. ಮನೆ ಮೇಲೆ ಮರ ಮುರಿದು ಬೀಳುತ್ತಲೇ ಅವರು ಮನೆಯಿಂದ ಹೊರಗೆ ಓಡಿ ಅಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯ ಬಿಜೆಪಿ ಮುಖಂಡ ರಾಜೇಶ್ ಸುವರ್ಣ, ಪಿಡಿಒ ಹಾಗೂ ಇತರ ಸಿಬ್ಬಂದಿ ಪರಿಶೀಲನೆ ನಡೆಸಿದರು.

ಈಶ್ವರಮಂಗಲದಲ್ಲಿ ಮರ ಬಿದ್ದು 6 ವಿದ್ಯುತ್ ಕಂಬಗಳು ನೆಲಸಮ

ಈಶ್ವರಮಂಗಲ: ಪುತ್ತೂರು ತಾಲೂಕಿನ ಈಶ್ವರಮಂಗಲ ವ್ಯಾಪ್ತಿಯಲ್ಲಿ ಬುಧವಾರ ಸಾಯಂಕಾಲ ಮೂರು ಕಡೆ ಮರ ಬಿದ್ದು, ಆರು ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಪಂಚಲಿಂಗೇಶ್ವರ ದೇವಾಲಯ ಸಮೀಪ 3, ಪಂಚೋಡಿ ಸಮೀಪ 2, ಪಡುವನ್ನೂರು ಗ್ರಾಮದ ಮುಗುಳಿ ಕಾಡು ವ್ಯಾಪ್ತಿಯಲ್ಲಿ 1 ವಿದ್ಯುತ್ ಕಂಬ ಬಿದ್ದಿದೆ. ಪರಿಣಾಮ ಈಶ್ವರಮಂಗಲ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.

Leave a Reply

Your email address will not be published. Required fields are marked *