ಕೇರಳ ಮಳೆಗೆ 26 ಸಾವು

ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ 26 ಜನ ಮೃತಪಟ್ಟಿದ್ದಾರೆ. ರಾಜ್ಯದ ಇಡುಕ್ಕಿ, ಮಲ್ಲಪುರಂ, ಕೋಳಿಕೋಡ್ ಹಾಗೂ ವೈನಾಡು ಜಿಲ್ಲೆಗಳಲ್ಲಿ ತೀವ್ರ ಮಳೆಗೆ ಗುಡ್ಡ ಕುಸಿತವಾಗಿದೆ. ಪರಿಣಾಮ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ.

26 ವರ್ಷದಲ್ಲೇ ಮೊದಲ ಬಾರಿಗೆ ಇಡುಕ್ಕಿ ಜಲಾಶಯ ತುಂಬಿದ್ದು, ಅಣೆಕಟ್ಟಿನಿಂದ ನೀರು ಬಿಡಲಾಗಿದೆ. ಗೇಟ್ ತೆರೆದ ಹಿನ್ನೆಲೆಯಲ್ಲಿ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಿಮಾನ ನಿಲ್ದಾಣದ ರನ್​ವೇ ಕೂಡ ಜಲಾವೃತವಾಗಿದ್ದರಿಂದ ಯಾವುದೇ ವಿಮಾನ ಹಾರಾಟ ನಡೆಸಿಲ್ಲ. ಮಧ್ಯಾಹ್ನದ ನಂತರ ವಿಮಾನ ಇಳಿಯಲು ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಕೇರಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ 22 ಅಣೆಕಟ್ಟುಗಳ ಗೇಟ್ ತೆರೆಯಲಾಗಿದ್ದು, ಜಲಾಶಯಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖುದ್ದು ಸಭೆ ನಡೆಸಿದ್ದು, ತುರ್ತು ಕ್ರಮಕ್ಕೆ ಸೂಚಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗಾಗಿ ಈಗಾಗಲೇ ಸೇನೆ, ನೌಕಾದಳ ಹಾಗೂ ಎನ್​ಡಿಆರ್​ಎಫ್ ನೆರವು ಪಡೆಯಲಾಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.