ಉಡುಪಿಯಲ್ಲಿ ಧಾರಾಕಾರ ಮಳೆ

ಮಂಗಳೂರು/ಉಡುಪಿ
ಕರಾವಳಿಯಲ್ಲಿ ಮೂರು ದಿನ ಅಧಿಕ ಪ್ರಮಾಣದಲ್ಲಿ ಮಳೆ ಸಾಧ್ಯತೆ ಬಗ್ಗೆ ಇಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದರೂ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮಳೆಯ ತೀವ್ರತೆಯಲ್ಲಿ ಇಳಿಕೆ ಕಂಡುಬಂತು. ಉಡುಪಿಯಲ್ಲಿ ಧಾರಾಕಾರ ಮಳೆಯಾಗಿ ಸಾಕಷ್ಟು ಹಾನಿಯಾಗಿದೆ.

ದ.ಕ.ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಮಂಗಳೂರು ಭಾಗದಲ್ಲಿ ಹಗಲು ಇಡೀ ಎರಡು, ಮೂರು ಬಾರಿ ಸಾಮಾನ್ಯ ಮಳೆಯಾಗಿದೆ. ಬಂಟ್ವಾಳದ ಸಜಿಪ ಪಡು ಮತ್ತು ವಿಟ್ಲದ ಇಡ್ಕಿದು ಗ್ರಾಮದಲ್ಲಿ ತಲಾ ಒಂದು ಮನೆ ಭಾಗಶಃ ಹಾನಿಯಾಗಿದೆ. ಸುಬ್ರಹ್ಮಣ್ಯ, ಸುಳ್ಯ, ಬೆಳ್ತಂಗಡಿ ಮುಂತಾದ ಕಡೆಗಳಲ್ಲಿ ದಿನದ ಬಹುಭಾಗ ಮಳೆ ಸುರಿಯುತ್ತಿತ್ತು. ಮಂಗಳೂರಿನಲ್ಲಿ ಇಡೀ ದಿನ ಎರಡು ಮೂರು ಬಾರಿ ಮಾತ್ರ ಮಳೆಯಾಗಿದೆ.

ದಕ್ಷಿಣ ಕನ್ನಡದಲ್ಲಿ ಶನಿವಾರ ಬೆಳಗ್ಗೆ ಪೂರ್ಣಗೊಂಡ 24 ಗಂಟೆ ಅವಧಿಯಲ್ಲಿ ಮಂಗಳೂರು 96.8, ಬಂಟ್ವಾಳ 108.7, ಬೆಳ್ತಂಗಡಿ 63.0, ಪುತ್ತೂರು 43.3, ಸುಳ್ಯ 85.0 ಮಿ.ಮೀ. ಮಳೆ ದಾಖಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಶನಿವಾರ ಧಾರಾಕಾರ ಮಳೆಯಾಗಿದೆ. ಶುಕ್ರವಾರ ತಡರಾತ್ರಿಯಿಂದ ಶನಿವಾರ ಮಧ್ಯಾಹ್ನವರೆಗೆ ನಿರಂತರ ಮಳೆಯಾಗಿದ್ದು, ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿವೆೆ. ಶನಿವಾರ ಮಧ್ಯಾಹ್ನ ಬಳಿಕ ಮಳೆ ಪ್ರಮಾಣ ಕಡಿಮೆಯಾಗಿದೆ.

ಕಡಂದಲೆ ನಲ್ಲೆಗುತ್ತು ಕಿಂಡಿ ಅಣೆಕಟ್ಟು ಮುಳುಗಿದ್ದು, ಜನ ಸಂಚಾರ ಅಸ್ತವ್ಯಸ್ತಗೊಂಡಿದೆ. ಬೆಳ್ಮಣ್ ಕಲ್ಯಾ ಗ್ರಾಮದ ಕಲ್ಕಾರಿನಲ್ಲಿ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು, ಮೂರು ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದಿವೆ. ಜಿಲ್ಲೆಯ ಪ್ರಮುಖ ನದಿಗಳಾದ ಸೀತಾನದಿ, ಸ್ವರ್ಣಾ, ಮಡಿಸಾಲು ಹೊಳೆ ಉಪನದಿಗಳು ತುಂಬಿ ಹರಿಯುತ್ತಿವೆ.
ಕುಂದಾಪುರ, ಬೈಂದೂರು, ಸಿದ್ದಾಪುರ, ಕಾರ್ಕಳ ಭಾಗದಲ್ಲಿ ವ್ಯಾಪಕ ಮಳೆಯಾಗಿದೆ. ಶುಕ್ರವಾರ ಬೆಳಗ್ಗೆಯಿಂದ ಶನಿವಾರ ಬೆಳಗ್ಗೆವರೆಗೆ ಉಡುಪಿಯಲ್ಲಿ 101.9 ಮಿ.ಮೀ, ಕುಂದಾಪುರ 99.2, ಕಾರ್ಕಳ 86.7ಮಿ.ಮೀ.ಮಳೆಯಾಗಿದೆ. ಜಿಲ್ಲೆಯಲ್ಲಿ 96.20 ಮಿ.ಮೀ.ಸರಾಸರಿ ಮಳೆ ದಾಖಲಾಗಿದೆ.

ರಜೆ ಮಜಾ ಸವಿದ ಮಕ್ಕಳು: ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಶಾಲೆ, ಪಿ.ಯು. ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿತ್ತು. ಆದರೆ, ನಿರೀಕ್ಷಿತ ಮಟ್ಟದ ಮಳೆಯಾಗದೆ, ಮಕ್ಕಳು ರಜಾದಿನ ಮಜಾ ಸವಿದರು.

ದೇವಸ್ಥಾನದ ಪ್ರಾಂಗಣದೊಳಗೆ ನೀರು
ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಎದುರು ಮಧುವಾಹಿನಿ ಹೊಳೆ ತುಂಬಿ ಹರಿಯುತ್ತಿದ್ದು, ದೇವಸ್ಥಾನದ ಪ್ರಾಂಗಣದೊಳಗೆ ನೀರು ತುಂಬಿದೆ. ಗರ್ಭಗುಡಿವರೆಗೂ ನೀರು ತುಂಬಿಕೊಂಡಿದ್ದು, ಅರ್ಚಕರು, ಸಿಬ್ಬಂದಿಗೆ ಕಾರ್ಯನಿರ್ವಹಿಸಲು ಸಮಸ್ಯೆಯಾಯಿತು. ಮಳೆಯ ಮಾಹಿತಿಯಿಲ್ಲದೆ ಶನಿವಾರ ಬೆಳಗ್ಗೆ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರೂ, ಬಹುತೇಕ ಮಂದಿ ಹೊರಭಾಗದಿಂದ ಪ್ರಾರ್ಥಿಸಿ ತೆರಳಿದರು. ನೈವೇದ್ಯ ತಯಾರಿ ಕೊಠಡಿ, ಅಡುಗೆ ಕೊಠಡಿಯೊಳಗೂ ನೀರು ತುಂಬಿಕೊಂಡಿತ್ತು. ಬಿರುಸಿನ ಗಾಳಿಯೊಂದಿಗೆ ಮಳೆ ಸುರಿಯುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಘೋಷಿಸಲಾಗಿರುವ ರೆಡ್ ಅಲರ್ಟ್ ಜುಲೈ 22ರ ತನಕ ವಿಸ್ತರಿಸಲಾಗಿದೆ.

Leave a Reply

Your email address will not be published. Required fields are marked *