ರಾಜ್ಯದ ವಿವಿಧೆಡೆ ಧಾರಾಕಾರ ಮಳೆ: ಗಾಳಿಗೆ ಹಾರಿದ ಮನೆಗಳ ಮೇಲ್ಛಾವಣಿಗಳು

ಬೆಂಗಳೂರು: ರಾಜ್ಯದ ವಿವಿಧೆಡೆ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಹಾಸನದ ಕಟ್ಟಾಯ ಕಲ್ಲಹಳ್ಳಿಯಲ್ಲಿ ಸುರಿದ ಗಾಳಿ ಮಳೆಯಿಂದ ಮನೆಯ ಮೇಲ್ಛಾವಣಿಗಳು ಹಾರಿಹೋಗಿವೆ. ಬುಧವಾರ ಮಧ್ಯಾಹ್ನ ಸುರಿದ ಬಿರುಗಾಳಿ ಮಳೆಯಿಂದ ಗ್ರಾಮದ ರಂಗಸ್ವಾಮಿ, ಕುಮಾರ್​ ಹಾಗೂ ಲಕ್ಷ್ಮಮ್ಮ ಎಂಬುವವರ ಮನೆಗೆ ಹಾಕಿದ್ದ ಸಿಮೆಂಟ್​​ ಶೀಟ್​​ಗಳು ಹಾರಿ ಹೋಗಿವೆ. ಮತ್ತೊಂದು ಮನೆಯ ಮೇಲೆ ವಿದ್ಯುತ್​​ ಕಂಬ ಬಿದಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಚಿಕ್ಕಮಗಳೂರಿನ ಹಲವು ಕಡೆ ವರುಣ ಸಿಂಚನವಾಗಿದೆ. ಜಿಲ್ಲೆಯ ಮರ್ಲೆ, ಹಿರೇಮಗಳೂರು, ಮೇಗರಹಳ್ಳಿ ಸೇರಿ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಜಿಲ್ಲೆಯ ರೈತರು ಖುಷಿಯಾಗಿದ್ದಾರೆ. (ದಿಗ್ವಿಜಯ ನ್ಯೂಸ್)