ರಾಜ್ಯದ ನಾನಾ ಕಡೆ ಧಾರಾಕಾರ ಮಳೆ : ಸಿಡಿಲು ಬಡಿದು ಮೂವರು ಸಾವು

ಬೆಂಗಳೂರು: ಮಂಗಳವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲು ಬಡಿದು ಮೂವರು ಮೃತಪಟ್ಟಿದ್ದಾರೆ.

ಯಾದಗಿರಿ ಜಿಲ್ಲೆಯ ಮಾಧ್ವಾರ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ. ತೋಟದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದಿದೆ ಎನ್ನಲಾಗಿದೆ. ಗಾಯಗೊಂಡವರು ಸೈದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸೈದಾಪುರ ಪೊಲೀಸ್​​ ಠಾಣೆಯಲ್ಲಿ ದಾಖಲಾಗಿದೆ.

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಅಣಬೈರಯ ಗೊಲ್ಲರಹಟ್ಟಿಯಲ್ಲಿ ಮಂಗಳವಾರ ಸಂಜೆ ಸಿಡಿಲು ಬಡಿದು ಒಬ್ಬರು ಮೃತಪಟ್ಟಿದ್ದಾರೆ. ಗ್ರಾಮದ ಚಂದ್ರಪ್ಪ (55) ಎಂಬುವವರು ತಮ್ಮ ಕಣದಲ್ಲಿ ಮೇವು ತರಲು ತೆರಳಿದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ತಹಸೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಗಾಳಿ ಸಹಿತ ಮಳೆಯಾಗಿದ್ದು, ಅಪಾರ ಪ್ರಮಾಣ ಆಸ್ತಿ ನಾಶವಾಗಿದೆ. ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿಯಲ್ಲಿ ಭಾರಿ ಗಾಳಿಯಿಂದ ಎರಡು ಮನೆಗಳು ಹಾಗೂ ಅನೇಕ ಮರಗಳು ಮತ್ತು ವಿದ್ಯುತ್​ ಕಂಬಗಳು ಧರೆಗುರುಳಿವೆ. ಗ್ರಾಮದ ಓಬಣ್ಣ ಹಾಗೂ ಗೌಡ ಎಂಬುವವರ ಮನೆ ನೆಲಸಮವಾಗಿದೆ.

ರಾಯಚೂರು ಜಿಲ್ಲೆಯಲ್ಲಿ ಗುಡುಗ ಸಹಿತ ಆಲಿಕಲ್ಲು ಮಳೆಯಾಗಿದೆ. ಜಿಲ್ಲೆಯ ಲಿಂಗಸಗೂರು ಮತ್ತು ಮುದಗಲ್​​ ಸೇರಿದಂತೆ ವಿವಿಧೆಡೆ ಮಳೆರಾಯ ಅರ್ಭಟಿಸಿದ್ದಾನೆ. ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜಿಲ್ಲೆಯ ಜನರಿಗೆ ಕೊಂಚ ನೆಮ್ಮದಿಯಾಗಿದೆ.

ಎಂಟು ಅಂಗಡಿಗಳು ಭಸ್ಮ:
ಜಿಲ್ಲೆಯ ಲಿಂಗಸುಗೂರು ತಾಲೂಕಿನ ನೀರಲಕೇರಿಯಲ್ಲಿ ಮಳೆ ಗಾಳಿಯಿಂದ ವಿದ್ಯುತ್​ ಶಾರ್ಟ್​ ಸರ್ಕೂಟ್​​​ನಿಂದ 8 ಅಂಗಡಿಗಳು ಭಸ್ಮವಾಗಿವೆ. ಗಾಳಿಯಿಂದ ವಿದ್ಯುತ್​​ ಕಂಬ ಮುರಿದ ಕಾರಣ ಶಾರ್ಟ್​ ಸರ್ಕೂಟ್​​ನಿಂದ ಎರಡು ಹೋಟೆಲ್, ಮೊಬೈಲ್ ಅಂಗಡಿ, ಪಾನ್ ಅಂಗಡಿ ಸೇರಿದಂತೆ 8 ಅಂಗಡಿಗಳು ಸುಟ್ಟು ಭಸ್ಮವಾಗಿವೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *