More

    ಮುಂದುವರಿದ ಗಾಳಿ ಮಳೆ: 20ಕ್ಕೂ ಅಧಿಕ ಮನೆಗಳಿಗೆ ಹಾನಿ, ಇಬ್ಬರಿಗೆ ಗಾಯ 

    ಮಂಗಳೂರು, ಸುಬ್ರಹ್ಮಣ್ಯ, ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬುಧವಾರವೂ ಮಳೆ ಮುಂದುವರಿದಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

    ಮಧ್ಯಾಹ್ನ ಬಳಿಕ ಗಾಳಿ ಸಹಿತ ಬಿರುಸಿನ ಮಳೆಯಾಗಿದ್ದು, 20ಕ್ಕೂ ಅಧಿಕ ಮಳೆಗಳಿಗೆ ಹಾನಿಯಾಗಿದೆ. ಇಬ್ಬರು ಗಾಯಗೊಂಡಿದ್ದಾರೆ. ಸಂಜೆಯ ವೇಳೆಗೆ ಬೀಸಿದ ಗಾಳಿಯಿಂದಾಗಿ ಹಲವು ಕಡೆಗಳಲ್ಲಿ ಮರಗಳು ಉರುಳಿ ಬಿದ್ದಿದ್ದು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕಟ್ಟಡಗಳ ಮೇಲೆ ಅಳವಡಿಸಿದ ಶೀಟ್‌ಗಳು ಹಾರಿವೆ. ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ತಂತಿ ಮೇಲೆ ಮರಗಳು ಉರುಳಿ ಬಿದ್ದ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಯಿತು.

    ಮಂಗಳೂರು ನಗರದ ಬಿಜೈಯಲ್ಲಿ ಮರ ಮುರಿದು ಬಿದ್ದ ಪರಿಣಾಮ ವಿದ್ಯುತ್ ತಂತಿಗಳು ತುಂಡಾಗಿವೆ. ಅಳಪೆ ಗ್ರಾಮದ ಪರಂಜ್ಯೋತಿ ಭಜನಾ ಮಂದಿರ ಬಳಿಯಲ್ಲಿ ಭವಾನಿ ಎಂಬುವರ ಮನೆಯ ಮೇಲೆ ಮರ ಬಿದ್ದು ಮನೆಯೊಳಗಿದ್ದ ಇಬ್ಬರು ಗಾಯಗೊಂಡಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಮರ ತೆರವುಗೊಳಿಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗರೆಯಲ್ಲಿ ಮನೆಯೊಂದಕ್ಕೆ ಹಾನಿ ಉಂಟಾಗಿದೆ. ಸಾರ್ವಜನಿಕರು ನದಿಗಳಿಗೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ನೆರೆ ಪರಿಸ್ಥಿತಿಯನ್ನು ಎದುರಿಸಲು ಗೃಹರಕ್ಷಕದಳ ಹಾಗೂ ಅಗ್ನಿಶಾಮಕದಳ ದೋಣಿ ಸಹಿತ ಸನ್ನದ್ಧವಾಗಿದೆ.
    ಕಳೆದ 24 ಗಂಟೆಗಳ ಅವಧಿಯಲ್ಲಿ ಮಂಗಳೂರು 6, ಪುತ್ತೂರು 3, ಸುಳ್ಯ 4, ಮೂಲ್ಕಿ 3 ಸೇರಿದಂತೆ 20ಕ್ಕೂ ಅಧಿಕ ಮನೆಗಳಿಗೆ ಮರ ಬಿದ್ದು ಹಾನಿ ಉಂಟಾಗಿದೆ. ಈ ಪೈಕಿ 4 ಮನೆಗಳಿಗೆ ಪೂರ್ಣ ಪ್ರಮಾಣದಲ್ಲಿ ಹಾಗೂ ಉಳಿದವುಗಳು ಭಾಗಶಃ ಹಾನಿಯಾಗಿವೆ.

    ಉಳ್ಳಾಲ, ಸೋಮೇಶ್ವರ ಮತ್ತು ಜಿಲ್ಲೆಯ ಕಡಲ ತೀರದ ಪ್ರದೇಶಗಳಲ್ಲಿ ಸಮುದ್ರ ಪ್ರಕ್ಷುಬ್ಧವಾಗಿದ್ದು, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಜಾಗರೂಕರಾಗಿರಲು ಜಿಲ್ಲಾಡಳಿತ ಎಚ್ಚರಿಸಿದೆ. ಸಂಭಾವ್ಯ ಹಾನಿ ತಪ್ಪಿಸಲು ತಗ್ಗು ಪ್ರದೇಶಗಳಲ್ಲಿನ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

    ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ: ಸುಬ್ರಹ್ಮಣ್ಯ ಮತ್ತು ಘಟ್ಟ ಪ್ರದೇಶ ಹಾಗೂ ಕುಮಾರ ಪರ್ವತದಲ್ಲಿ ಭಾರಿ ಮಳೆ ಕಾರಣದಿಂದ ಕುಕ್ಕೆ ಸುಬ್ರಹ್ಮಣ್ಯದ ಕುಮಾರಾಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ. ನದಿ ತುಂಬಿ ಹರಿಯುತ್ತಿದ್ದು, ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಕುಮಾರಧಾರಾ ನದಿಯ ದಡದಲ್ಲಿ ತೀರ್ಥ ಸ್ನಾನ ಮಾಡುತ್ತಿರುವುದು ಕಂಡು ಬಂತು. ಸ್ನಾನಘಟ್ಟದ ಬಳಿಯಲ್ಲಿರುವ ಕಿಂಡಿ ಅಣೆಕಟ್ಟು ಕೂಡ ಮುಳುಗಿದೆ. ಪ್ರಮುಖ ನದಿಗಳಾದ ನೇತ್ರಾವತಿ, ಫಲ್ಗುಣಿ, ಪಯಸ್ವಿನಿ ನದಿಗಳು ತುಂಬಿ ಹರಿಯುತ್ತಿವೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ಸ್ನಾನಘಟ್ಟ ದೇವರ ಅವಭೃತ ಕಟ್ಟೆಯೂ ಭಾಗಶಃ ಮುಳುಗಿದೆ. ಸುಬ್ರಹ್ಮಣ್ಯ-ಬಿಸಿಲೆ-ಸಕಲೇಶಪುರ ಹೆದ್ದಾರಿಯ ಬಿಸಿಲೆ ಘಾಟ್ ರಸ್ತೆಯಲ್ಲಿ ಬಿಸಿಲೆ ಸಮೀಪ ಮರ ರಸ್ತೆಗುರುಳಿದೆ. ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿತ್ತು.

    ತೆಂಗಿನ ಮರ ಬೀಳುವ ದೃಶ್ಯ ವೈರಲ್: ಸಂಜೆಯ ಗಾಳಿ ಮಳೆಗೆ ಪದವಿನಂಗಡಿ ಬಳಿ ವಿಮಾನ ನಿಲ್ದಾಣ ರಸ್ತೆಗೆ ಅಡ್ಡವಾಗಿ ತೆಂಗಿನಮರ ಉರುಳಿ ಬಿದ್ದಿದ್ದು, ಈ ಸಂದರ್ಭ ಸ್ಕೂಟರ್ ಸವಾರ, ಲಾರಿ ಹಾಗೂ ಪಿಕಪ್ ವಾಹನ ಅದೃಷ್ಟವಶಾತ್ ಪಾರಾಗಿವೆ. ಒಂದು ಸೆಕೆಂಡ್ ಬೇಗ ಬರುತ್ತಿದ್ದರೆ ಸ್ಕೂಟರ್ ಸವಾರ ಹಾಗೂ ಒಂದು ಸೆಕೆಂಡ್ ವಿಳಂಬ ಆಗುತ್ತಿದ್ದರೆ ಲಾರಿ ಮತ್ತು ಪಿಕಪ್ ಮೇಲೆ ತೆಂಗಿನ ಮರ ಬೀಳುವ ಸಾಧ್ಯತೆ ಇತ್ತು. ಸ್ಥಳೀಯ ಮನೆಯವರು ಮೊಬೈಲ್‌ನಲ್ಲಿ ಸೆರೆ ಹಿಡಿದ ಮರ ಬೀಳುವ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts