ರಾಜಧಾನಿಯಲ್ಲಿ ಭಾರಿ ಮಳೆ; 5 ಮರಗಳು ಧರೆಗೆ, ಮೂರು ವಾಹನಗಳು ಜಖಂ

ಬೆಂಗಳೂರು: ಮಹಾರಾಷ್ಟ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ರಾಜ್ಯದಲ್ಲಿ ಮುಂಗಾರು ಚುರುಕು ಗೊಂಡಿದೆ. ಬೆಂಗಳೂರಿನಲ್ಲಿ ಬುಧವಾರ ಭಾರಿ ಮಳೆಯಾಗಿದ್ದು, 5 ಮರಗಳು ಬಿದ್ದಿವೆ. 1 ಕಾರು ಮತ್ತು 2 ಬೈಕ್​ಗಳು ಜಖಂಗೊಂಡಿವೆ.

ಬೆಳಗ್ಗೆಯಿಂದ ಬಿಸಿಲ ವಾತಾವರಣ ಇತ್ತಾದರೂ ಸಂಜೆ 4 ಗಂಟೆ ನಂತರ ಅರ್ಧ ಗಂಟೆ ಭಾರಿ ಮಳೆಯಾಗಿದೆ. ರಾತ್ರಿ 8 ಗಂಟೆ ನಂತರ ನಿರಂತರವಾಗಿ ಸುರಿದಿದೆ.

ಮಳೆ ಜತೆಗೆ ಭಾರಿ ಗಾಳಿ ಬೀಸಿದ ಪರಿಣಾಮ ಶ್ರೀನಗರ ಬಸ್ ನಿಲ್ದಾಣ, ವಿದ್ಯಾಪೀಠ ವೃತ್ತ, ಶ್ರೀನಿವಾಸನಗರ, ಜಯನಗರ ನಾಲ್ಕನೇ ಹಂತದಲ್ಲಿ 5 ಮರಗಳು ಬಿದ್ದಿದ್ದು ಮತ್ತು ರೆಂಬೆಗಳು ಮುರಿದಿವೆ. ಶ್ರೀನಿವಾಸ ನಗರದಲ್ಲಿ ಮರ ಬಿದ್ದ ಪರಿಣಾಮ ಎರಡು ಬೈಕ್ ಸಂಪೂರ್ಣ ಜಖಂಗೊಂಡಿವೆ. ಜಯನಗರ ನಾಲ್ಕನೇ ಹಂತದ ಬಿಡಿಎ ಕಾಂಪ್ಲೆಕ್ಸ್ ಬಳಿ ಭಾರಿ ಗಾತ್ರದ ಆಲದ ಮರ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದು ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಸಾವು, ನೋವು ಸಂಭವಿಸಿಲ್ಲ.

ರಸ್ತೆ, ಕೆಳಸೇತುವೆಗಳು ಜಲಾವೃತ: ಧಾರಾಕಾರ ಮಳೆ ಸುರಿದ ಪರಿಣಾಮ ನಗರದ ಪ್ರಮುಖ ರಸ್ತೆಗಳು ಜಲಾವೃತವಾದವು. ಶೇಷಾದ್ರಿಪುರ ರಸ್ತೆ, ಮಲ್ಲೇಶ್ವರ ಸೆಂಟ್ರಲ್ ಬಳಿ, ಸಂಪಿಗೆ ರಸ್ತೆ, ರೇಸ್​ಕೋರ್ಸ್ ರಸ್ತೆ, ಚಾಲುಕ್ಯ ವೃತ್ತ, ಆನಂದರಾವ್ ವೃತ್ತ, ಶಿವಾನಂದ ವೃತ್ತ, ಓಕಳಿಪುರ ಕೆಳಸೇತುವೆ, ಕೆ.ಜಿ. ರಸ್ತೆ, ಮೆಜೆಸ್ಟಿಕ್ ಕೆಳಸೇತುವೆ, ಶ್ರೀರಾಮಪುರ ಕೆಳಸೇತುವೆ, ಮೈಸೂರು ರಸ್ತೆ ಸೇರಿ ಇನ್ನಿತರ ಕಡೆಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿತ್ತು.

ಸರಾಸರಿ 27 ಮಿ.ಮೀ. ಮಳೆ

ಬೆಂಗಳೂರು ನಗರದಲ್ಲಿ ಬುಧವಾರ ಸರಾಸರಿ 27 ಮಿ.ಮೀ. ಮಳೆಯಾದ ವರದಿಯಾಗಿದೆ. ಎಚ್​ಎಂಟಿ ಲೇಔಟ್​ನಲ್ಲಿ 26 ಮಿ.ಮೀ. ಮಳೆಯಾಗಿದೆ. ಶೆಟ್ಟಿಹಳ್ಳಿಯಲ್ಲಿ 25, ಮಾರಪ್ಪನಪಾಳ್ಯ- 24.5, ಬ್ಯಾಟರಾಯನಪುರ ಹಾಗೂ ವಿದ್ಯಾರಣ್ಯಪುರದಲ್ಲಿ ತಲಾ 23.5, ಅವಲಹಳ್ಳಿ- 19, ಬಾಣಸವಾಡಿ- 18.5, ನಾಯಂಡಹಳ್ಳಿ- 18, ಯಲಹಂಕ- 16.5, ಹೆಗ್ಗನಹಳ್ಳಿ- 16, ರಾಧಾಕೃಷ್ಣ ದೇವಸ್ಥಾನ ವಾರ್ಡ್- 15, ಹಂಪಿನಗರ, ಹೇರೋಹಳ್ಳಿ , ಸೋಮನಹಳ್ಳಿ ಮತ್ತು ಆಗ್ರಹಾರ ದಾಸರಹಳ್ಳಿಯಲ್ಲಿ ತಲಾ 13.5, ದಯಾನಂದನಗರ- 13, ಅಟ್ಟೂರು- 12.5, ತಾವರೆಕೆರೆ-12, ಕೆ.ಆರ್. ಪುರ- 11.5, ಬಾಗಲೂರು- 10 ಮತ್ತು ವಿಶ್ವೇಶ್ವರಪುರದಲ್ಲಿ 8.5 ಮಿ.ಮೀ ಮಳೆ ಸುರಿದಿದೆ.

ತಗ್ಗಲಿದೆ ಪ್ರಮಾಣ

ಬೆಂಗಳೂರಿನಲ್ಲಿ ಭಾರಿ ಮಳೆಯಾಗಲಿದೆ ಎಂದು ವಾರದ ಹಿಂದೆ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (ಕೆಎಸ್​ಎನ್​ಡಿಎಂಸಿ) ಮಾಹಿತಿ ನೀಡಿತ್ತು. ಆದರೆ, ಬುಧವಾರ ಹೊರತುಪಡಿಸಿ ನಿರೀಕ್ಷಿಸಿದಷ್ಟು ಮಳೆ ಸುರಿದಿಲ್ಲ. ಗುರುವಾರ ಮತ್ತು ಶುಕ್ರವಾರ ಸಾಧಾರಣದಿಂದ ಚದುರಿದ ರೀತಿಯಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

Leave a Reply

Your email address will not be published. Required fields are marked *