Video | ರಾಜ್ಯದ ಹಲವೆಡೆ ಭಾರಿ ಮಳೆ, ನೀರಿನಲ್ಲಿ ಕೊಚ್ಚಿಹೋದ ತಾಯಿ-ಮಗ, ಸಿಡಿಲು ಬಡಿದು ವೃದ್ಧೆ ಸಾವು

ಬೀದರ್‌: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ವಿವಿಧೆಡೆ ತಾಯಿ – ಮಗ ಸೇರಿ ಮೂವರು ಮಳೆಗೆ ಬಲಿಯಾಗಿದ್ದಾರೆ.

ಬೀದರ್​ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಎಲ್ಲದಗುಂಡಿ ಗ್ರಾಮದಲ್ಲಿ ಸುರಿದ ಭಾರಿ ಮಳೆಗೆ ತಾಯಿ ಅನಿತಾ(35), ಮಗ ಭಾಗ್ಯವಂತ(14) ನೀರುಪಾಲಾಗಿದ್ದಾರೆ.

ಹಳ್ಳ ದಾಟುವಾಗ ರಭಸದಿಂದ ಹರಿಯುತ್ತಿದ್ದ ನೀರಿನಲ್ಲಿ ತಾಯಿ – ಮಗ ಕೊಚ್ಚಿ ಹೋಗಿದ್ದಾರೆ. ಮಗನ ಮೃತದೇಹ ಪತ್ತೆಯಾಗಿದ್ದು, ತಾಯಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ತಾಯಿಗಾಗಿ ಶೋಧಕಾರ್ಯ ಕೈಗೊಂಡಿದ್ದಾರೆ.

ಹುಬ್ಬಳ್ಳಿಯಲ್ಲೂ ಭಾರಿ ಮಳೆ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ವರುಣನ ಸಿಂಚನವಾಗಿದ್ದು, ಭಾರಿ ಮಳೆಗೆ ರಸ್ತೆಗಳ ತುಂಬೆಲ್ಲ ನೀರು ತುಂಬಿದೆ. ಮಳೆಯ ರಭಸಕ್ಕೆ ರಸ್ತೆಯಲ್ಲಿ ಪಾರ್ಕಿಂಗ್‌ ಮಾಡಿದ್ದ ಬೈಕ್‌, ಸೈಕಲ್‌ ತೇಲಿಹೋಗಿವೆ. ಹುಬ್ಬಳ್ಳಿಯ ಮೇದಾರ್, ಓಣಿ, ಅಯೋಧ್ಯಾ ನಗರ, ತುಳಜಾ ಭವನ ವೃತ್ತದಲ್ಲಿ ರಸ್ತೆಗಳು ನದಿಯಂತಾಗಿವೆ. ರಸ್ತೆ ತುಂಬಿದ್ದರಿಂದ ನೀರು ಮನೆಗೆ ನುಗ್ಗಿದ್ದು, ಮಳೆಯಿಂದ ಜನರು ಪರದಾಡುವಂತಾಗಿದೆ.

ನಗರದ ನೇಕಾರ ನಗರದಲ್ಲಿ ಆಟೋ ರಿಕ್ಷಾ ಹಾಗೂ ಬೈಕ್‌ಗಳು ಜಲಾವೃತವಾಗಿದ್ದು, ನೇಕಾರ ನಗರದಿಂದ ಗಿರಿಯಾಲ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕೂಡ ಸಂಪೂರ್ಣ ನೀರಿನಲ್ಲಿ ಮುಳುಗಿದೆ. ಸತತ ಎರಡು ಘಂಟೆಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾವೃತವಾಗಿರುವ ಆಟೋರಿಕ್ಷಾಗಳಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ.

ಸಿಡಿಲು ಬಡಿದು ವೃದ್ಧೆ ಸಾವು, ಮಳೆಗೆ ಜನಜೀವನ ಅಸ್ತವ್ಯಸ್ತ

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾ.ಗೊಜನೂರು ಬಳಿ ಹಳ್ಳತುಂಬಿ ಹರಿಯುತ್ತಿದ್ದು ನೀರು ರಸ್ತೆಯಲ್ಲೇ ಹರಿದ ಪರಿಣಾಮ ರಸ್ತೆ ಸಂಚಾರಕ್ಕೆ ತೊಂದರೆಯುಂಟಾಗಿದೆ. ಗೊಜನೂರು ಹಾಗೂ ಮಾಗಡಿ ಮಧ್ಯೆಯಿರುವ ಹಳ್ಳದಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ.

ಗದಗ ತಾಲೂಕಿನ ಲಿಂಗದಾಳ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು ವೃದ್ಧೆ ಮೃತಪಟ್ಟಿದ್ದಾರೆ. ದೇವಕ್ಕ ದೊಡ್ಡಮನಿ(65) ಮೃತ ದುರ್ದೈವಿ. ಆಡು ಮೇಯಿಸಲು ಹೊಲಕ್ಕೆ ಹೋಗಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *