ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ 14 ರಿಂದ 20ರವರೆಗೆ ಮಲೆನಾಡು ಕರಾವಳಿ, ಕಾವೇರಿ-ಕೃಷ್ಣ ಜಲಾನಯನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹೀಗಾಗಿ ಈ ಎಲ್ಲಾ ಭಾಗದಲ್ಲೂ ಅನಗತ್ಯ ನೆರೆಸ್ಥಿತಿಯನ್ನು ತಡೆಯಲು ಮುಂಜಾಗ್ರತಾ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದರು.
ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತಮ ಮಳೆಯಾಗುವ ಸಾಧ್ಯತೆಯ ಕಾರಣಕ್ಕೆ ಮುನ್ನೆಚ್ಚರಿಕೆವಹಿಸಲಾಗಿದೆ. ಅಲ್ಲದೆ, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಮಹತ್ವದ ಸಭೆ ನಡೆಯಲಿದೆ ಎಂದು ತಿಳಿಸಿದರು.
ಮುಂಗಾರಿನ ಪ್ರಭಾವ ಇನ್ನೂ ಒಂದೂವರೆ ತಿಂಗಳು ಇರಲಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನಿಂದ ಮಧ್ಯ ಕರ್ನಾಟಕ ಹಾಗೂ ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗಲಿದೆ.
ಮತ್ತಷ್ಟು ಪೂರ್ವ ತಯಾರಿ
ಕರ್ನಾಟಕ-ಮಹಾರಾಷ್ಟ್ರ ಗಡಿಭಾಗ ಹಾಗೂ ಕೃಷ್ಣ-ಕಾವೇರಿ ನದಿಪಾತ್ರದ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ನಿಟ್ಟಿನಲ್ಲಿ ಜೀವಹಾನಿಯಂತಹ ಅನಾಹುತ ತಪ್ಪಿಸಲು ಮತ್ತಷ್ಟು ಪೂರ್ವ ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಮಳೆಯಾಗುವ ಸಂದರ್ಭದಲ್ಲಿ ನದಿ ಉಕ್ಕಿಹರಿಯುತ್ತದೆ, ಇದೇ ವೇಳೆ ಅಣೆಕಟ್ಟೆಗಳಿಂದಲೂ ನೀರು ಹರಿಸಿದರೆ ಪ್ರವಾಹ ಸ್ಥಿತಿ ಉಂಟಾಗಿ ಜನ ಪರಿತಪಿಸುವ ಸ್ಥಿತಿ ಎದುರಾಗುತ್ತದೆ.
ಹೀಗಾಗಿ ಅಣೆಕಟ್ಟೆಗಳು ತುಂಬುವವರೆಗೂ ಕಾಯದೆ ಜಲಾಶಯಗಳ ಒಳಹರಿವನ್ನು ನಿಯಮಿತವಾಗಿ ಬಿಡುಗಡೆ ಮಾಡುವ ಮೂಲಕ ನೆರೆಯನ್ನು ನಿಯಂತ್ರಿಸಬಹುದು. ಈ ಮಾದರಿಯ ನೀರಿನ ನಿರ್ವಹಣೆ ಬಗ್ಗೆಯೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಇದಲ್ಲದೆ, ಶಿಥಿಲಾವಸ್ಥೆಯಲ್ಲಿರುವ ಶಾಲೆಗಳು ಹಾಗೂ ಗುಡ್ಡದ ಅಂಚಿನಲ್ಲಿ ಕುಸಿದುಬೀಳುವ ಸಾಧ್ಯತೆಗಳಿರುವ ಮನೆಗಳನ್ನು ಗುರುತಿಸಿ ಜನವಾಸ ನಿಷೇಧಿಸಲು ಹಾಗೂ ಜನರನ್ನು ಸುರಕ್ಷಿತವಾಗಿ ಕಾಳಜಿ ಕೇಂದ್ರಕ್ಕೆ ರವಾನಿಸುವಂತೆಯೂ ಸೂಚಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಕೃಷಿಗೆ ಅನುಕೂಲ
ಕಳೆದ ತಿಂಗಳು ಬಯಲುಸೀಮೆ ಪ್ರದೇಶಗಳಲ್ಲಿ ಮಳೆ ಕೊರತೆ ಎದುರಾಗಿತ್ತು. ಕೋಲಾರ ಚಿಕ್ಕಬಳ್ಳಾಪುರ ಯಾದಗಿರಿ ಕೊಪ್ಪಳ, ವಿಜಯಪುರ, ರಾಯಚೂರು ಪ್ರದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು.
ಆದರೆ ಕಳೆದ 10 ದಿನಗಳ ಹಿಂದೆ ಆ ಭಾಗಗಳಲ್ಲೂ ಸಹ ಉತ್ತಮ ಮಳೆಯಾಗಿದೆ. ಅಲ್ಲದೆ, ಆಗಸ್ಟ್ 16 ರಿಂದ ಮುಂಗಾರು ಮತ್ತೆ ಚುರುಕಾಗಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮುಂಗಾರಿನ ಪ್ರಭಾವ ಉತ್ತಮವಾಗಿರುವ ಬಗ್ಗೆ ಮಾಹಿತಿ ಇದೆ.
ಈ ವರ್ಷ ವಾಡಿಕೆಗಿಂತ ಬಿತ್ತನೆಯೂ ಹೆಚ್ಚಾಗಿದ್ದು, ಒಳ್ಳೆಯ ಕೃಷಿ ಚಿತ್ರಣ ಕಾಣುವ ನಿರೀಕ್ಷೆ ಇದೆ ಎಂದು ಸಚಿವ ಕೃಷ್ಣ ಬೈರೇಗೌಡ ಆಶಾಭಾವನೆ ವ್ಯಕ್ತಪಡಿಸಿದರು.