ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ

ಶೃಂಗೇರಿ: ತಾಲೂಕಿನಲ್ಲಿ ಬುಧವಾರ ರಾತ್ರಿ ಆರಂಭಗೊಂಡ ಮಳೆ ಗುರುವಾರವೂ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ತಾಲೂಕಿನ ಕೆರೆಕಟ್ಟೆ, ನೆಮ್ಮಾರ್, ಕಿಗ್ಗಾ ಮುಂತಾದೆಡೆ ಭಾರಿ ಮಳೆಯಾಗಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರೆ ಕುಸಿದು ಮರಗಳು ಉರುಳಿವೆ. ಹಾಗಾಗಿ ದಕ್ಷಿಣಕನ್ನಡದಿಂದ ಬರುವ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.

ಕಾರ್ಕಳ ಹಾಗೂ ಶೃಂಗೇರಿ ಪೊಲೀಸರು ರಸ್ತೆಯಲ್ಲಿ ಬಿದ್ದ ಮರ, ಮಣ್ಣುಗಳನ್ನು ಜೆಸಿಬಿ ಮೂಲಕ ತೆರವುಗೊಳಿಸುವ ಕಾರ್ಯದಲ್ಲಿ ನಿರತವಾಗಿವೆ. ಬೆಂಗಳೂರು, ದಾವಣಗೆರೆ ಮುಂತಾದೆಡೆಯಿಂದ ಬಂದ ಪ್ರಯಾಣಿಕರಿಗೆ ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಉಪಾಹಾರ ವ್ಯವಸ್ಥೆ ಮಾಡಿದರು.

ಕಿಕ್ರೆ, ಕೊರಡಕಲ್, ತೆಕ್ಕೂರು, ಕಾವಡಿ, ನೆಮ್ಮಾರ್ ಮುಂತಾದೆಡೆ ರಸ್ತೆಯ ಮೇಲೆ ನೀರು ನಿಂತಿದ್ದರಿಂದ ಮೂರು ಗಂಟೆಗಳ ಕಾಲ ವಾಹನ ಹಾಗೂ ಜನಸಂಚಾರ ಸ್ಥಗಿತಗೊಂಡಿತ್ತು.

ತುಂಗಾ ನದಿ ಹರಿವು ತೀವ್ರಗೊಂಡ ಪರಿಣಾಮ ಗಾಂಧಿ ಮೈದಾನದ ಅಂಗಡಿ ಮುಂಗಟ್ಟುಗಳು, ಶ್ರೀ ಮಠದ ಭೋಜನಶಾಲೆ, ಸಂಧ್ಯಾವಂದನೆ ಮಂಟಪ, ನರಸಿಂಹವನದ ಗುರುನಿವಾಸಕ್ಕೆ ತೆರಳುವ ಮಾರ್ಗ ಜಲಾವೃತಗೊಂಡಿವೆ. ಶ್ರೀಗಳ ಭಕ್ತರು ತೆಕ್ಕೂರು ರಸ್ತೆಯ ಮಾರ್ಗವಾಗಿ ಗುರುನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು. ಶ್ರೀ ಮಠದ ಭೋಜನಶಾಲೆ ಕೆಳಭಾಗದಲ್ಲೂ ಸುಮಾರು ಮೂರು ಅಡಿ ನೀರು ನಿಂತಿದೆ. ಕಪ್ಪೆಶಂಕರ ದೇವಾಲಯ ಸಂಪೂರ್ಣ ಮುಳುಗಡೆಯಾಗಿದೆ.

ಗಾಂಧಿ ಮೈದಾನದ ಪರ್ಯಾಯ ರಸ್ತೆ, ಕುರುಬರ ಕೇರಿ ರಸ್ತೆ, ಮುಖ್ಯರಸ್ತೆಗೆ ಸಂಪರ್ಕ ಸಾಧಿಸುವ ಹಲವು ರಸ್ತೆಗಳು ಜಲಾವೃತವಾಗಿವೆ. ಕೆವಿಆರ್ ರಸ್ತೆಯಲ್ಲಿದ್ದ ಅಂಗಡಿಗಳಿಗೆ ನೀರು ನುಗ್ಗಿದೆ. ಆದರೆ ಅಂಗಡಿಯಲ್ಲಿದ್ದ ಸಾಮಗ್ರಿಗಳನ್ನು ಸ್ಥಳಾಂತರಿಸಲಾಗಿದೆ. ಕುರುಬರ ಕೇರಿಯ ನಿವಾಸಿಗಳಿಗೆ ತಾಲೂಕು ಆಡಳಿತ ಊಟದ ವ್ಯವಸ್ಥೆ ಮಾಡಿದೆ. ಅಲ್ಲಿದ್ದ ಎಂಎಸ್​ಐಎಲ್ ಮಳಿಗೆ ಮೇಲೆ ಕುಳಿತಿದ್ದ ನಾಲ್ವರನ್ನು ಪಪಂ ಸಿಬ್ಬಂದಿ ಬೋಟ್ ಮೂಲಕ ರಕ್ಷಿಸಿದರು.

ಜಿಲ್ಲಾಡಳಿತ, ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಪಪಂ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ, ಸರ್ಕಾರಿ ಆಸ್ಪತ್ರೆ ತರ್ತ ರಕ್ಷಣಾ ಕಾರ್ಯಕ್ಕೆ ಸಜ್ಜಾಗಿವೆ.108 ಹಾಗೂ ಪ.ಪಂನ ಬೋಟ್ ಅವಘಡ ಸಂಭವಿಸಿದ್ದಲ್ಲಿ ಕಾರ್ಯನಿರ್ವಹಿಸಲು ಸಜ್ಜಾಗಿ ನಿಂತಿವೆ.

Leave a Reply

Your email address will not be published. Required fields are marked *