More

    ಕರಾವಳಿಯಲ್ಲಿ ಮಳೆ ಬಿರುಸು

    ಮಂಗಳೂರು/ಉಡುಪಿ: ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ಗಾಳಿ ಸಹಿತ ಬಿರುಸಿನ ಮಳೆ ಸುರಿದಿದೆ. ಮಂಗಳೂರು ನಗರದ ಕೂಳೂರು ಬಳಿ ಆವರಣ ಗೋಡೆ ಕುಸಿದು ಕೂಲಿ ಕಾರ್ಮಿಕ ನೀರುಮಾರ್ಗ ನಿವಾಸಿ ಉಮೇಶ್(38) ಮೃತಪಟ್ಟಿದ್ದಾರೆ.

    ಕೆಲಸ ಮಾಡುತ್ತಿದ್ದಾಗ ಏಕಾಏಕಿ ಧರೆಯ ಮಣ್ಣು ಆವರಣಗೋಡೆ ಮೇಲೆ ಕುಸಿದಿದೆ. ಆವರಣಗೋಡೆ ಉಮೇಶ್ ಅವರ ಮೇಲೆ ಬಿದ್ದಿದೆ. ಕದ್ರಿ ಅಗ್ನಿಶಾಮಕ ದಳ ಸಿಬ್ಬಂದಿ, ಕಾವೂರು ಪೊಲೀಸರು ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿ ಮಣ್ಣಿನಡಿ ಸಿಲುಕಿಕೊಂಡಿದ್ದ ಉಮೇಶ್ ಅವರನ್ನು ಮೇಲಕ್ಕೆತ್ತಿದರೂ, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.
    ಇನ್ನೊಂದು ಘಟನೆಯಲ್ಲಿ ಬಿಕರ್ನಕಟ್ಟೆ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಹಿಂಭಾಗ ಆವರಣ ಗೋಡೆ ಕುಸಿದು ಬಿದ್ದು, ಚಂದ್ರಕಲಾ ಶೆಟ್ಟಿ(56) ಎಂಬವರು ಗಾಯಗೊಂಡಿದ್ದಾರೆ. ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಡಬ, ಬಂಟ್ವಾಳ, ಮೂಡುಬಿದಿರೆ ಸಹಿತ ಜಿಲ್ಲೆಯಾದ್ಯಂತ ನಿರಂತರ ಉತ್ತಮ ಮಳೆ ಸುರಿದಿದೆ. ಕುಮಾರಧಾರಾ, ನೇತ್ರಾವತಿ, ಪಯಸ್ವಿನಿ, ಪಲ್ಗುಣಿ ಮೊದಲಾದ ನದಿಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಸುರತ್ಕಲ್, ಬಂಟ್ವಾಳ ಮೊದಲಾದೆಯೂ ನೆರೆ ಬಂದಿದ್ದು, ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.

    ರೆಡ್ ಅಲರ್ಟ್: ಹವಾಮಾನ ಇಲಾಖೆ ಸೆ.22ರ ತನಕ ರೆಡ್ ಅಲರ್ಟ್ ಘೋಷಣೆ ಮಾಡಿರುವುದರಿಂದ ಭಾರಿ ಮಳೆ ಸಾಧ್ಯತೆ ಇದೆ. ಹಿರಿಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರುವಂತೆ ಹಾಗೂ ಮಳೆ ಹಾನಿ ಸಂಭವಿಸಿದರೆ ತಕ್ಷಣ ಸ್ಪಂದಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ನದಿ ಹಾಗೂ ಸಮುದ್ರ ಕಿನಾರೆ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಗೃಹ ರಕ್ಷಕದಳ ಸಿಬ್ಬಂದಿ ರಬ್ಬರ್ ದೋಣಿ ಸಹಿತ ದಿನದ 24 ಗಂಟೆಯೂ ಸನ್ನದ್ಧರಾಗಿದ್ದಾರೆ.

    ಕಡಲು ಪ್ರಕ್ಷುಬ್ಧ
    ಪ್ರತಿಕೂಲ ಹವಾಮಾನ ಇರುವುದರಿಂದ ದ.ಕ. ಜಿಲ್ಲೆಯಲ್ಲಿ ಸಮುದ್ರ ಪ್ರಕ್ಷುಬ್ಧವಾಗಿದೆ. ಆದ್ದರಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿರುವ ಹಲವು ದೋಣಿಗಳು ಅರ್ಧದಿಂದಲೇ ದಕ್ಕೆಗೆ ಹಿಂತಿರುಗಿವೆ. ಶನಿವಾರ ಹೆಚ್ಚಿನ ಮೀನುಗಾರರು ಸಮುದ್ರಕ್ಕಿಳಿದಿಲ್ಲ. ಸುರತ್ಕಲ್ ಹಾಗೂ ಉಳ್ಳಾಲದಲ್ಲಿ ಸಮುದ್ರದ ಬೃಹತ್ ಅಲೆಗಳು ದಡಕಪ್ಪಳಿಸುತ್ತಿವೆ. ಕಡಲ್ಕೊರೆತ ಭೀತಿ ಎದುರಾಗಿದೆ.

    ಉಡುಪಿಯಲ್ಲಿ ಕೃತಕ ನೆರೆ
    ಉಡುಪಿ ಜಿಲ್ಲೆಯಲ್ಲಿ ಮತ್ತೆ ಮಳೆ ಚುರುಕು ಪಡೆದುಕೊಂಡಿದ್ದು, ಶನಿವಾರ ಬೆಳಗ್ಗೆಯಿಂದ ಇಡೀ ದಿನ ಬಿಟ್ಟುಬಿಟ್ಟು ವ್ಯಾಪಕ ಮಳೆ ಸುರಿಯುತ್ತಿದೆ. ಶುಕ್ರವಾರ ತಡರಾತ್ರಿಯಿಂದ ಜಿಲ್ಲೆಯಲ್ಲಿ ಧಾರಕಾರ ನಿರಂತರ ಮಳೆಯಾಗಿದೆ. ತಗ್ಗು ಪ್ರದೇಶಗಳಲ್ಲಿ ಜಲಾವೃತಗೊಂಡು ಹಲವೆಡೇ ಕೃತಕ ನೆರೆ ಆವರಿಸಿದೆ. ಶನಿವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 20 ಮಿ.ಮೀ. ಮಳೆ ಸುರಿದಿದೆ. ಬಡಾನಿಡಿಯೂರು ಗ್ರಾಮದಲ್ಲಿ ಗರಿಷ್ಠ 58 ಮಿ.ಮೀ. ಮಳೆ ದಾಖಲಾಗಿದೆ. ಕುಂದಾಪುರ 16.5, ಉಡುಪಿ 33 ಮತ್ತು ಕಾರ್ಕಳ ತಾಲೂಕಿನಲ್ಲಿ 14.5ಮಿ.ಮೀ. ಮಳೆ ದಾಖಲಾಗಿದೆ. ಸಮುದ್ರ ತೀರದಲ್ಲಿ ಪ್ರತೀ ತಾಸಿಗೆ 45-55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವುದರೊಂದಿಗೆ ಬಿರುಗಾಳಿ ವಾತಾವರಣ ಇರಲಿದೆ. ಸಮುದ್ರದಲ್ಲಿ 3ರಿಂದ 3.5 ಮೀಟರ್ ಎತ್ತರದಲ್ಲಿ ಅಲೆಗಳು ಅಬ್ಬರಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

    ರಸ್ತೆಗೆ ಉರುಳಿದ ಬೃಹತ್ ಮರ
    ಉಡುಪಿ: ವ್ಯಾಪಕ ಗಾಳಿ ಮಳೆಯಿಂದಾಗಿ ಆದಿ ಉಡುಪಿ ಶಾಲೆ ಸಮೀಪ ಬೃಹತ್ ಮರ ರಾಷ್ಟ್ರೀಯ ಹೆದ್ದಾರಿಗೆ ಉರುಳಿ ಬಿದ್ದಿದ್ದು, ಅರ್ಧ ಗಂಟೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ವಿದ್ಯುತ್ ಲೈನ್ ಮತ್ತು ಕಂಬ ಸೇರಿದಂತೆ ಒಂದು ದ್ವಿಚಕ್ರ ವಾಹನಕ್ಕೆ ಹಾನಿಯಾಗಿದೆ. ಸ್ಥಳಕ್ಕೆ ಧಾವಿಸಿದ ಉಡುಪಿ ಸಂಚಾರ ಪೊಲೀಸರು, ಅಗ್ನಿ ಶಾಮಕ ದಳ, ಅರಣ್ಯ ಇಲಾಖೆ ಮತ್ತು ಸ್ಥಳೀಯರ ತಂಡ ಜಂಟಿ ಕಾರ್ಯಚರಣೆ ಮೂಲಕ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

    ಕಾಸರಗೋಡಲ್ಲಿ ರೆಡ್ ಅಲರ್ಟ್
    ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಕಾಸರಗೋಡು ಸಹಿತ ಕೇರಳದ ವಿವಿಧ ಜಿಲ್ಲೆಗಳಲ್ಲಿ ಕೇಂದ್ರ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. 18ರಿಂದ 24ರವರೆಗೂ ರಾಜ್ಯಾದ್ಯಂತ ಬಿರುಸಿನ ಮಳೆಯಾಗಲಿದ್ದು, ವಾಡಿಕೆಯಂತೆ ಲಭಿಸುವ 40 ಎಂಎಂ ಮಳೆ ಬದಲು 100 ಎಂ.ಎಂ.ವರೆಗೂ ಮಳೆ ಸಾಧ್ಯತೆಯಿರುವುದಾಗಿ ಇಲಾಖೆ ತಿಳಿಸಿದೆ. 22ರವರೆಗೆ ಕೇರಳದ ವಿವಿಧ ಜಿಲ್ಲೆಗಳಲ್ಲಿ ರೆಡ್, ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts