More

    ಮಳೆಹಾನಿಯಿಂದ ಚೇತರಿಸಲು ಆದ್ಯತೆ

    ವೇಣುವಿನೋದ್ ಕೆ.ಎಸ್. ಮಂಗಳೂರು
    ಕಳೆದ ಮಳೆಗಾಲದ ಆಟಾಟೋಪದಿಂದ ತತ್ತರಿಸಿದ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಮಸ್ಥಿತಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಪ್ರತೀ ಶಾಸಕರಿಗೆ ತಲಾ 25 ಕೋಟಿ ರೂ.ಬಿಡುಗಡೆ ಮಾಡಿದ್ದು ಜಿಲ್ಲೆಯಲ್ಲಿ ಮಳೆಹಾನಿ ಕಾಮಗಾರಿಗೆ ನೆರವಾಗಿದೆ.
    ರಾಜ್ಯಕ್ಕೆ ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್‌ನಡಿ ಪ್ರತ್ಯೇಕವಾಗಿ 55 ಕೋಟಿ ರೂ.ನಷ್ಟು ಮೊತ್ತ ಬಂದಿದ್ದು, ಅದರೊಂದಿಗೆ ಶಾಸಕರ ಅನುದಾನವೂ ಬಂದಿರುವುದು ಹಲವು ರಸ್ತೆ, ಸೇತುವೆ ಕಾಮಗಾರಿಗಳು ಚುರುಕಾಗತೊಡಗಿವೆ.
    ಬಹುತೇಕ ಕಾಮಗಾರಿಗಳು ನಡೆಯುತ್ತಿದ್ದರೆ ಇನ್ನಷ್ಟು ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. ಸೆಪ್ಟಂಬರ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುರ್ತಾಗಿ ಬಿಜೆಪಿ ಶಾಸಕರಿಗೆ 25 ಕೋಟಿ ರೂ.ನೀಡಿದ್ದರು. ಇದನ್ನು ಯಾವುದೇ ಅಭಿವೃದ್ಧಿ ಕಾಮಗಾರಿಗೆ ಬಳಸಲು ಅವಕಾಶವಿತ್ತಾದರೂ, ಜಿಲ್ಲೆಯೂ ಸೇರಿದಂತೆ ರಾಜ್ಯದ ಹಲವು ಕಡೆ ನೆರೆ, ಅತಿವೃಷ್ಟಿ ಬಾಧಿಸಿದ್ದರಿಂದ ಶಾಸಕರು ಮಳೆಹಾನಿ ಕಾಮಗಾರಿಗಳಿಗೆ ಆದ್ಯತೆ ನೀಡಿದ್ದಾರೆ.

    ಶಾಸಕರಿಗೆ ನೀಡಿದ ತುರ್ತುನಿಧಿಯಲ್ಲದೆ ದಕ್ಷಿಣ ಕನ್ನಡ ಜಿಲ್ಲೆಗೆ 2019ನೇ ಸಾಲಿನಲ್ಲಿ ಬಿಡುಗಡೆಯಾದ 35 ಕೋಟಿ ರೂ ಅನುದಾನದ ಪೈಕಿ 32.35 ಕೋಟಿ ಅನುದಾನವನ್ನು ಈಗಾಗಲೇ 817 ಕಾಮಗಾರಿಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಅನುಷ್ಟಾನಾಧಿಕಾರಿಗಳಿಗೆ ತಿಳಿಸಲಾಗಿದೆ.
    ಅದರಲ್ಲಿ 24 ಕೋಟಿ ರೂ.ಅನುದಾನವನ್ನು ಮೂಲಸೌಕರ್ಯ ದುರಸ್ತಿಗೆ ಬಳಸಲಾಗಿದ್ದರೆ 7.75 ಕೋಟಿ ರೂ.ಶಾಲಾ ಕಟ್ಟಡ ದುರಸ್ತಿ ಗೆ ಬಳಸಲಾಗಿದೆ. 30 ಅಂಗನವಾಡಿಗಳ ದುರಸ್ತಿಗೆ 60 ಲಕ್ಷ ಮತ್ತು 14 ಸರ್ಕಾರಿ ಆಸ್ಪತ್ರೆಗಳ ದುರಸ್ತಿಗೆ 28 ಲಕ್ಷ ಬಳಸಲಾಗಿದೆ.

    ಒಟ್ಟು ಪರಿಹಾರ 55 ಕೋಟಿ ರೂ.
    2019ರ ಸಾಲಿನಲ್ಲಿ ಜಿಲ್ಲೆಗೆ ಬಂದಿರುವ ಒಟ್ಟು ಅನುದಾನ 55 ಕೋಟಿ ರೂ. ಇದು ವಿವಿಧ ಹಂತದಲ್ಲಿ ಬಿಡುಗಡೆಯಾಗಿದೆ.
    9-8-2019 ರಂದು 5 ಕೋಟಿ, 21.9.2019ರಂದು 15 ಕೋಟಿ ಹಾಗೂ 30-9-19ರಂದು 35 ಕೋಟಿ ರೂ.ಬಿಡುಗಡೆಯಾಗಿದೆ. ಜಿಲ್ಲೆಯ ಒಟ್ಟು 2448 ಫಲಾನುಭವಿಗಳಿಗೆ ತಲಾ 10,000 ರೂ. ಅನುಕಂಪದ ಪರಿಹಾರ ಧನವನ್ನು ತಹಸೀಲ್ದಾರರ ಮುಖಾಂತರ ಮೊದಲೇ ಪಾವತಿಸಲಾಗಿದೆ. ಹಾನಿಯಾಗಿರುವ ಮನೆಗಳಿಗೆ ನೆರೆ ಸಂತ್ರಸ್ತರ ಪುನರ್ವಸತಿ ಯೋಜನೆ-2019ರಡಿ ನೆರೆ ಪೀಡಿತರಿಗೆ ವಸತಿ ಕಲ್ಪಿಸುವ ಸಲುವಾಗಿ ನಿಗಮದ ತಂತ್ರಾಂಶದ ಮೂಲಕ ಫಲಾನುಭವಿಗಳಿಗೆ ಪರಿಹಾರ ಧನವನ್ನು ಪಾವತಿಸಲಾಗಿದೆ. ನೆರೆ ಸಂತ್ರಸ್ತರ ಪುನರ್ವಸತಿಗಾಗಿ ಈವರೆಗೆ 6,41,50,000 ರೂ.ಪಾವತಿಸಲಾಗಿದೆ.

    ಪರಿಹಾರಕ್ಕೆ ಹೆಚ್ಚುವರಿ ಮೊತ್ತ
    ಶಾಸಕರಿಗೆ ತಲಾ 25 ಕೋಟಿ ರೂ. ನೀಡಿರುವುದರಲ್ಲಿ ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ, ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಕಾಮಗಾರಿಗೆ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಲೋಕೋಪಯೋಗಿ ಇಲಾಖೆಯೊಂದಕ್ಕೇ ಶಾಸಕರಿಂದ 95 ಕೋಟಿ ರೂ.ಮೊತ್ತದ ಕಾಮಗಾರಿ ಹಂಚಿಕೆಯಾಗಿದೆ. ಉಳಿದಂತೆ ಮಳೆಹಾನಿ ಕಾಮಗಾರಿಗಾಗಿ ಲೋಕೋಪಯೋಗಿ ಇಲಾಖೆಯಲ್ಲಿ 27 ಕೋಟಿ ರೂ. ಮೊತ್ತದ ಕಾಮಗಾರಿಗಳು ವಿವಿಧ ಹಂತದಲ್ಲಿದೆ.

    ಮುಖ್ಯಮಂತ್ರಿ ಎಲ್ಲ ಶಾಸಕರಿಗೆ ತಲಾ 25 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಅನುದಾನದಿಂದ ಮಾಡಲಾಗಿರುವ ಬಹಳಷ್ಟು ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗಿದೆ. ಹಲವು ಕಾಮಗಾರಿಗಳು ಚಾಲ್ತಿಯಲ್ಲಿದ್ದರೆ, ಇನ್ನೂ ಹಲವು ಟೆಂಡರ್ ಹಂತದಲ್ಲಿದೆ.
    – ರಾಜೇಶ್ ನಾಕ್ ಉಳಿಪಾಡಿ
    ಶಾಸಕರು, ಬಂಟ್ವಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts