ಹೈದರಾಬಾದ್: ಪವನ್ ಕಲ್ಯಾಣ್ ಮತ್ತು ರೋಜಾ ನಡುವಿನ ವಾಕ್ಸಮರ ಇನ್ನೂ ತಣ್ಣಗಾಗಿಲ್ಲ. ಆಂಧ್ರಪ್ರದೇಶದಲ್ಲಿ ‘ಜನಸೇನಾ’ ಪಕ್ಷದ ಮೂಲಕ ಸದ್ದು ಮಾಡುತ್ತಿರುವ ಪವನ್ಗೆ ರೋಜಾ, ‘ಆತನೊಬ್ಬ ರಾಜಕಾರಣಿ ಥರ ಆಡ್ತಿಲ್ಲ, ಒಬ್ಬ ರೌಡಿ ಥರ ನಡೆದುಕೊಳ್ತಿದ್ದಾರೆ..’ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಪಕ್ಷದ ಸಭೆಯೊಂದರಲ್ಲಿ, ‘ಆಡಳಿತ ಪಕ್ಷದವರು ನನ್ನನ್ನು ಭ್ರಷ್ಟ ಅಂತಿದ್ದಾರೆ, ಇನ್ನೊಮ್ಮೆ ಹಾಗೆಂದವರಿಗೆ ಚಪ್ಪಲಿ ಏಟು..’ ಎಂದು ಪವನ್ ಕಲ್ಯಾಣ್ ತಮ್ಮ ಕೈಗೆ ಚಪ್ಪಲಿ ಎತ್ತಿಕೊಂಡಿದ್ದರು. ತಮ್ಮ ಮೇಲಿರುವ ಆರೋಪಗಳಿಗೆ ಲೆಕ್ಕ ಸಮೇತ ಉತ್ತರ ಕೂಡ ನೀಡಿದ್ದರು. ಆದರೆ ಚಪ್ಪಲಿ ಕೈಯಲ್ಲಿಡಿದು ಮಾತನಾಡಿದ್ದು ಮಾತ್ರ ಸಾಕಷ್ಟು ಚರ್ಚೆಗೀಡಾಗಿತ್ತು.
ಇದೀಗ, ಆಡಳಿತ ಪಕ್ಷದ ಸದಸ್ಯೆಯೂ ಆಗಿರುವ ನಟಿ ರೋಜಾ, ‘ಪವನ್ಗೆ ನಾವು ಅವಮಾನ ಮಾಡುತ್ತಿಲ್ಲ, ಅವರು ಮಾಡಿರುವ ತಪ್ಪುಗಳನ್ನು ತೋರಿಸುತ್ತಿದ್ದೇವೆ…’ ಎಂದು ತಣ್ಣಗೆ ಹೇಳಿದ್ದಾರೆ. ಅದರ ಜತೆಗೆ, ‘ಚಂದ್ರಬಾಬು ನಾಯ್ಡು ಜತೆ ಸೇರ್ಕೊಂಡು ರೌಡಿಗಳ ರೀತಿ ಹೇರ್ಸ್ಟೈಲ್, ಡ್ರೆಸ್ ಹಾಕ್ಕೋತಾರೆ, ರಾಜಕೀಯ ನಾಯಕರ ರೀತಿ ವರ್ತನೆ ಎಂದಾದೂ ಕಂಡಿದ್ದೇವಾ…’ ಎಂದೂ ಖಾರವಾಗಿ ಪ್ರಶ್ನಿಸಿದ್ದಾರೆ.