ದಕ್ಷಿಣ ಭಾರತದಲ್ಲಿ ಬೇಸಿಗೆ ಆರಂಭದಲ್ಲೇ ಬಿಸಿಗಾಳಿ: ಉತ್ತರ ಭಾರತದಲ್ಲಿ ಮುಗಿಯದ ಮಾಗಿ ಚಳಿ

ನವದೆಹಲಿ: ದಕ್ಷಿಣ ಭಾರತದಲ್ಲಿ ಈಗಾಗಲೆ ಬೇಸಿಗೆ ಕಾಲಿರಿಸಿದೆ. ಆರಂಭಿಕ ದಿನಗಳಲ್ಲೇ ತೀವ್ರ ಸ್ವರೂಪದ ಬಿಸಿಗಾಳಿ ಸಮಸ್ಯೆ ಕಾಣಿಸಿಕೊಂಡಿದೆ. ಆದರೆ, ಈ ವೇಳೆಗೆ ಮಾಗಿ ಚಳಿಯ ಕಾಟ ಕಡಿಮೆಯಾಗಿ, ಬೇಸಿಗೆಯ ಬಿಸಿಲಿನ ಝಳ ಆರಂಭವಾಗಬೇಕಿತ್ತು. ಆದರೂ ಈಗಲೂ ಅಲ್ಲಿ ಮಾಗಿ ಚಳಿ ಮೈನಡುಗಿಸುತ್ತಿದೆ. ಇದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಭಾರತೀಯ ಹವಾಮಾನ ಇಲಾಖೆ ವೆಸ್ಟರ್ನ್​ ಡಿಸ್ಟರ್ಬೆನ್ಸ್​ (ಡಬ್ಲ್ಯೂಡಿ) ಎಂಬ ಉತ್ತರ ನೀಡಿದೆ.

ಡಬ್ಲ್ಯೂಡಿ ಎಂದರೆ ಮಧ್ಯಭಾಗದಲ್ಲಿ ತಂಪಾದ ಗಾಳಿಯನ್ನು ಹೊಂದಿರುವ ಬಿರುಗಾಳಿಯಾಗಿದೆ. ಇದು ಮೆಡಿಟೇರಿಯನ್​ ವಲಯದಲ್ಲಿ ಆರಂಭವಾಗಿ ಉತ್ತರ ಮತ್ತು ವಾಯವ್ಯ ಭಾರತದಲ್ಲಿ ಮಳೆ ಸುರಿಸುತ್ತದೆ. ಜಮ್ಮು ಮತ್ತು ಕಾಶ್ಮೀರ ಸೇರಿ ಹಿಮಪರ್ವತ ಶ್ರೇಣಿಗಳಲ್ಲಿ ಹಿಮವರ್ಷ ಸುರಿಸುತ್ತವೆ.

ಡಿಸೆಂಬರ್​ ತಿಂಗಳಲ್ಲಿ ಮೂರು ಡಬ್ಲ್ಯೂಡಿಗಳು ಉತ್ತರ ಮತ್ತು ವಾಯವ್ಯ ಭಾರತಕ್ಕೆ ಅಪ್ಪಳಿಸುವುದು ವಾಡಿಕೆ. ಆದರೆ, ಈ ಬಾರಿ ಡಿಸೆಂಬರ್​ನಲ್ಲಿ ಕೇವಲ ಒಂದು ಡಬ್ಲ್ಯೂಡಿ ಅಪ್ಪಳಿಸಿದ್ದ, ಇನ್ನೆರಡು ಡಬ್ಲ್ಯೂಡಿಗಳು ಈ ತಿಂಗಳಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ. ಇದರಿಂದಾಗಿ ಬೇಸಿಗೆ ಆರಂಭವಾಗಿದ್ದರೂ ಉತ್ತರ ಮತ್ತು ವಾಯವ್ಯ ಭಾರತದಲ್ಲಿ ಮಳೆ ಹಾಗೂ ಹಿಮಪರ್ವತ ಶ್ರೇಣಿಗಳಲ್ಲಿ ಹಿಮದ ವರ್ಷವಾಗುವ ಸಾಧ್ಯತೆ ಹೆಚ್ಚಾಗಿದೆ.

ಇದು ದಕ್ಷಿಣ ಭಾರತದಲ್ಲಿ ಆರಂಭದಲ್ಲೇ ಬೇಸಿಗೆ ಬಿಸಿಲನ್ನು ಬಿರಿಸುಗೊಳಿಸಿದರೆ, ಉತ್ತರ ಭಾರತದಲ್ಲಿ ಚಳಿಗಾಲ ಹೆಚ್ಚುವರಿ ಅವಧಿಗೆ ವಿಸ್ತರಣೆಗೊಳ್ಳಲು ಕಾರಣವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. (ಏಜೆನ್ಸೀಸ್​)