ಹೃದಯಕ್ಕೆ ಎಚ್ಚರಿಕೆಯ ಘಂಟೆ

| ಡಾ. ರಾಘವೇಂದ್ರ ಪೈ

ಪ್ರತಿದಿನ ಸರಾಸರಿ 10,500 ಹೆಜ್ಜೆ ನಡೆಯುತ್ತೇವೆ. ಅಂದರೆ ಸುಮಾರು ನಾಲ್ಕು ಮೈಲು. ಅಂದರೆ ವರ್ಷಕ್ಕೆ ಸುಮಾರು 1,500 ಮೈಲು. ಆದರೆ ಇದರಿಂದ ವ್ಯಾಯಾಮದ ಲಾಭ ಸಿಗದು. ಯಾಕೆಂದರೆ ಇದು ಯಾವುದೇ ಶಿಸ್ತುಕ್ರಮಗಳಿಲ್ಲದ ನಡಿಗೆ. ಬೆಳಗ್ಗೆ ಎದ್ದಾಗಿನಿಂದ, ಮನೆಯೊಳಗೆ ಓಡಾಟ, ಕಚೇರಿಗೆ ಹೋಗಿಬರುವ ಓಡಾಟ ಮುಂತಾದವುಗಳಿಂದ ಶ್ವಾಸ ಹಾಗೂ ಹೃದಯಸಂಬಂಧಿ ವ್ಯೂಹಗಳಿಗೆ ಆರೋಗ್ಯಪೂರ್ಣ ವ್ಯಾಯಾಮ ಆಗಲಾರವು. ಯಾಕೆಂದರೆ ಹೆಚ್ಚಿನವರು ಕುಳಿತೇ ಕೆಲಸ ಮಾಡುವುದು!

ದಿನಚರಿಯ ಅಧಿಕ ಕಾಲ ಕಚೇರಿಯ ಕುರ್ಚಿಯಲ್ಲಿ, ವಾಹನದಲ್ಲಿ, ದೂರದರ್ಶನದ ಮುಂದೆ, ಡೈನಿಂಗ್ ಟೇಬಲ್ಲಿನಲ್ಲಿ – ಹೀಗೆ ಕುಳಿತೇ ಸಮಯ ಕಳೆಯುತ್ತೇವೆ. ಬ್ರಿಟನ್ ಸಂಸ್ಥೆಯೊಂದರ ಅಧ್ಯಯನದ ಪ್ರಕಾರ ಒಬ್ಬ ವ್ಯಕ್ತಿ ವಾರದಲ್ಲಿ ಕನಿಷ್ಠ 24 ಗಂಟೆಗಳ ಕಾಲ ಟಿ.ವಿ.ಯ ಮುಂದೆಯೇ ಕುಳಿತಿರುತ್ತಾನೆ. ಇದರ ಕಹಿ ಪರಿಣಾಮ ಎಂದರೆ ಹೆಚ್ಚಿನ ಯುವಜನರಿಗೆ ಹೃದಯಾಘಾತಗಳು ಸಂಭವಿಸಿವೆ. ಹಾಗಾಗಿ ದಿ ಬ್ರಿಟಿಷ್ ಹಾರ್ಟ್ ಫೌಂಡೇಷನ್ ಮತ್ತು ಏರೋಬಿಕ್ ಇನ್​ಸ್ಟಿಟ್ಯೂಟ್ ಆಪ್ ಅಮೆರಿಕ ಇವುಗಳ ತಜ್ಞರ ಕಳಕಳಿಯ ವಿನಂತಿಯೆಂದರೆ, ಹೃದಯಸಂಬಂಧಿ ರಕ್ತಪರಿಚಲನಾಂಗಗಳ ದಾರ್ಢ್ಯ ಹಾಗೂ ಕ್ಷಮತೆಯ ವೃದ್ಧಿಗೆ ನಡಿಗೆಯನ್ನು ಹೆಚ್ಚು ಹೆಚ್ಚು ಮಾಡಬೇಕು. ದಿನಕ್ಕೆ 30 ನಿಮಿಷಗಳಂತೆ ವಾರಕ್ಕೆ ಕನಿಷ್ಠ ನಾಲ್ಕು ಬಾರಿಯಾದರೂ ಅಭ್ಯಾಸ ಮಾಡಬೇಕು.

ವಯಸ್ಸು ಹೆಚ್ಚಿದಂತೆ ಶರೀರದ ಎಲ್ಲ ಭಾಗಗಳಿಗೂ ರಕ್ತ ಪೂರೈಸುವ ಮುಖ್ಯ ಅಂಗವಾದ ಹೃದಯವು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತ ಬರುತ್ತದೆ ಎಂಬ ವಿಚಾರ ಸರ್ವವಿದಿತ. ನಲವತ್ತರ ವಯಸ್ಸಿನ ಬಳಿಕ ಹೃದಯದ ಸಾಮರ್ಥ್ಯ ಶೇ. ಒಂದರಿಂದ ಎರಡರಷ್ಟು ಹಂತದಲ್ಲಿ ಕುಂಠಿತವಾಗುವುದು. ಸುಖನಡಿಗೆ, ಯೋಗನಡಿಗೆ ಹೃದಯಪೇಶಿಗಳಿಗೆ ಸಾಕಷ್ಟು ಚೈತನ್ಯವನ್ನು ಪೂರೈಸಿ ಹೃದಯಭಾಗಕ್ಕೆ ಸಾಕಷ್ಟು ಶಕ್ತಿಯನ್ನು ನೀಡುವುದು. ಇದೇ ರೀತಿ ಅಪದಮನಿ-ಅಭಿದಮನಿಗಳನ್ನು ಬಲಗೊಳಿಸಿ ರಕ್ತಸಂಚಾರಕ್ಕೆ ಅನುವು ಮಾಡಿಕೊಡುತ್ತದೆ.

ಶೇ. 100 ರೋಗಿಗಳಲ್ಲಿ ಸುಮಾರು ಶೇ. 35 ಮಂದಿ ಹೃದಯದ ಕಾಯಿಲೆಗೆ ತುತ್ತಾಗುತ್ತಾರೆ. ಶೇ. 25 ಮಂದಿ ಎದೆಗೂಡಿನ ಹಾಗೂ ಶ್ವಾಸಸಂಬಂಧಿ ರೋಗಕ್ಕೆ ತುತ್ತಾಗುತ್ತಾರೆ. ಮಿಕ್ಕ ಶೇ. 40 ಮಂದಿ ಅನ್ನಾಂಗವ್ಯೂಹದ ರೋಗದಿಂದ ಬಳಲುತ್ತಿರುತ್ತಾರೆಂಬುದು ತಜ್ಞರ ಅಭಿಮತ.

ಹೃದಯ ಎಚ್ಚರಿಕೆಯ ಘಂಟೆ ಬಾರಿಸುತ್ತಿದೆ. ಅದಕ್ಕೆ ಓಗೊಡಿ. ಎಚ್ಚೆತ್ತುಕೊಳ್ಳಿ. ಕಾಲ ಇನ್ನೂ ಮಿಂಚಿಲ್ಲ. ರೋಗಿಯಾಗಿ ಹಾಸಿಗೆಗೆ ಬೀಳುವ ಮುನ್ನ, ಆಸ್ಪತ್ರೆಗೆ ದಾಖಲಾಗುವ ಮುನ್ನ, ವೈದ್ಯರಿಗೆ ಸಾವಿರಾರು ರೂಪಾಯಿ ಸುರಿಯುವ ಮುನ್ನ, ಹತ್ತಾರು ಮಾತ್ರೆಗಳನ್ನು ಸೇವಿಸುವ ಮುನ್ನ ಎಚ್ಚೆತ್ತುಕೊಳ್ಳಲಿದ್ದರೆ ಉಳಿಗಾಲವಿಲ್ಲ. ಯೋಗ ನಡಿಗೆಯ ಅಭ್ಯಾಸ ಮಾಡಿ. ಇದಕ್ಕೆ ಹಣ, ಆಸ್ತಿ ಏನೇನೂ ಕೊಡಬೇಕಾಗಿಲ್ಲ. ಪೂರ್ಣ ಮನಸ್ಸು, ಅಮೂಲ್ಯ ಸಮಯ. ಇವೆರಡನ್ನೂ ಕೊಡಲು ಈ ಕ್ಷಣವೇ ಮನಸ್ಸು ಮಾಡಿ. ಮಾರ್ಗ ತಾನಾಗಿಯೇ ತೆರೆದುಕೊಳ್ಳುತ್ತದೆ.