ಆರೋಗ್ಯವಂತ ಬದುಕಿಗೆ ಸಸಿ ನೆಡುವುದು ಅಗತ್ಯ

ತಿ.ನರಸೀಪುರ: ಆರೋಗ್ಯವಂತ ಬದುಕಿಗಾಗಿ ಪ್ರತಿಯೊಬ್ಬರೂ ಸಸಿ ನೆಡಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಆರ್.ಚಲುವರಾಜು ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಹಾಗೂ ಸ್ವಚ್ಛ ಮೇವ ಜಯತೆ ಕಾರ್ಯಕ್ರಮದ ಪ್ರಯುಕ್ತ ಪಟ್ಟಣದ ತಾಲೂಕು ಪಂಚಾಯಿತಿ ಆವರಣ ದಲ್ಲಿ ಮಂಗಳವಾರ ಸಸಿ ನೆಟ್ಟು ನೀರೆರೆದು ಮಾತನಾಡಿದ ಅವರು, ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಒಳ್ಳೆಯ ಗಾಳಿ ಸಿಗುತ್ತದೆ. ಒಂದು ಮರ ಕಡಿದರೆ ಅದೇ ಜಾಗದಲ್ಲಿ ಮತ್ತೊಂದು ಸಸಿಯನ್ನು ನೆಟ್ಟು ಬೆಳೆಸಬೇಕು. ಆ ಮೂಲಕ ಮುಂದಿನ ಪೀಳಿಗೆಗೆ ನಮ್ಮ ಪರಿಸರವನ್ನು ಉಳಿಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ನಗರೀಕರಣ, ಅರಣ್ಯ ನಾಶ ಮತ್ತಿತರರ ಚಟುವಟಿಕೆಗಳಿಂದ ಪರಿಸರ ನಾಶವಾಗುತ್ತಿದೆ. ನಮ್ಮ ಉಸಿರಾಟಕ್ಕೆ ಅಗತ್ಯವಿರುವ ಆಮ್ಲಜನಕವನ್ನು ಗಿಡಮರಗಳು ಕೊಡುತ್ತಿವೆ. ಇವುಗಳನ್ನು ಕಾಪಾಡುವ ಜವಾಬ್ದಾರಿ ನಮ್ಮದು ಎಂದರು.

ತಾ.ಪಂ. ಪ್ರಭಾರ ಕಾರ್ಯನಿರ್ವಣಾಧಿಕಾರಿ ನಿಂಗಯ್ಯ ಮಾತನಾಡಿ, ಪರಿಸರವೇ ನಮಗೆ ಬದುಕಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ. ಆದ್ದರಿಂದ ಎಲ್ಲರೂ ತಮ್ಮ ಮನೆ ಹಾಗೂ ಜಮೀನುಗಳಲ್ಲಿ ಹೆಚ್ಚಾಗಿ ಮರ ಗಿಡಗಳನ್ನು ಬೆಳೆಸಬೇಕು. ಜತೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಹಿತಮಿತವಾಗಿ ಬಳಸಬೇಕು ಎಂದು ಸಲಹೆ ನೀಡಿದರು.

ಜಿ.ಪಂ. ಸದಸ್ಯ ಎಸ್.ವಿ.ಜಯಪಾಲ್ ಭರಣಿ, ತಾ.ಪಂ. ಸದಸ್ಯರಾದ ಶಿವಮ್ಮ ಮಹದೇವ, ಬಿ.ಸಾಜೀದ್ ಅಹಮ್ಮದ್, ರಾಮಲಿಂಗಯ್ಯ, ಕೆಬ್ಬೆ ರಂಗಪ್ಪ, ಎಂ.ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸ್ವಾಮಿ, ಬಿಸಿಯೂಟ ಸಹಾಯಕ ನಿರ್ದೇಶಕ ಮದ್ದಾನಾಪ್ಪ, ಪರಿಸರ ಪ್ರಶಸ್ತಿ ವಿಜೇತ ತಿಪ್ಪೆಕಾಳಿ ರಂಗನಾಥ್, ವಲಯ ಅರಣ್ಯಾಧಿಕಾರಿ ಯಮುನಾ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *