ಮಂಗಳೂರಿಗೆ ಹೆಲ್ತ್ ಟೂರಿಸಂ ಗರಿ

ಹರೀಶ್ ಮೋಟುಕಾನ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ ಕ್ಷೇತ್ರದಂತೆ ವೈದ್ಯಕೀಯ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದೆ. ಕಳೆದ ಮೂರು ವರ್ಷದ ಅವಧಿಯಲ್ಲಿ 250ಕ್ಕೂ ಅಧಿಕ ವಿದೇಶಿಯರು ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಹಿಂತಿರುಗಿದ್ದಾರೆ.
ವೈದ್ಯಕೀಯ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆ, ಎ.ಜೆ. ಆಸ್ಪತ್ರೆಗಳು ಮುಂಚೂಣಿಯಲ್ಲಿವೆ. ವಿಶೇಷವೆಂದರೆ ವಿಶ್ವದ ದೊಡ್ಡಣ್ಣ ಎನಿಸಿರುವ ಅಮೆರಿಕ ಪ್ರಜೆ ಕೂಡ ಮಂಗಳೂರಿನಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಭಾರತೀಯ ವೈದ್ಯರ ಸ್ನೇಹಮಯಿ ಗುಣ, ರೋಗ ಉಲ್ಬಣಗೊಳ್ಳದಂತೆ ವಹಿಸಬೇಕಾದ ಎಚ್ಚರಿಕೆಗಳ ಸಮಗ್ರ ಮಾಹಿತಿಯನ್ನು ರೋಗಿಗಳಿಗೆ ಮನದಟ್ಟು ಮಾಡಿಕೊಡುವುದೇ ವಿದೇಶಿಗರು ಭಾರತದ ವೈದ್ಯರ ಚಿಕಿತ್ಸೆಯನ್ನು ನೆಚ್ಚಿಕೊಳ್ಳಲು, ವಿದೇಶಿ ರೋಗಿಗಳು ಮಂಗಳೂರಿಗೆ ಬರಲು ಕಾರಣ.

ಒಮನ್‌ನವರು ಹೆಚ್ಚು: ಎ.ಜೆ. ಆಸ್ಪತ್ರೆಯಲ್ಲಿ ಮೂರು ವರ್ಷಗಳ ಅವಧಿಯಲ್ಲಿ 148 ಮಂದಿ ಒಳ ಮತ್ತು ಹೊರ ರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ. 2016-17ರಲ್ಲಿ ಒಳರೋಗಿ ವಿಭಾಗದಲ್ಲಿ 10, 2017-18ರಲ್ಲಿ ಹೊರ ರೋಗಿಗಳಾಗಿ 40, ಒಳರೋಗಿ ವಿಭಾಗದಲ್ಲಿ 15, 2018-19ರಲ್ಲಿ ಹೊರ ರೋಗಿಗಳಾಗಿ 43, ಒಳ ರೋಗಿಗಳಾಗಿ 30 ವಿದೇಶಿಗರು ಶಸಚಿಕಿತ್ಸೆ, ಚಿಕಿತ್ಸೆ ಪಡೆದಿದ್ದಾರೆ. ಇಲ್ಲಿ ಚಿಕಿತ್ಸೆ ಪಡೆದವರಲ್ಲಿ ಹೆಚ್ಚಿನವರು ಕೊಲ್ಲಿ ರಾಷ್ಟ್ರಗಳ ಪ್ರಜೆಗಳು.

ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 38 ವಿದೇಶಿಗರು ಚಿಕಿತ್ಸೆ ಪಡೆದಿದ್ದಾರೆ. ಕೆಎಂಸಿಯಲ್ಲಿ ಚಿಕಿತ್ಸೆ ಪಡೆದವರ ಪೈಕಿ ಒಮನ್ ಪ್ರಜೆಗಳೇ (14 ಮಂದಿ) ಅಧಿಕ. ಉಳಿದಂತೆ ಬಹರೈನ್, ಬೆಲ್ಜಿಯಂ, ಡೆನ್ಮಾರ್ಕ್, ಇಂಗ್ಲೆಂಡ್, ್ರಾನ್ಸ್, ಇರಾಕ್, ಕೀನ್ಯಾ, ಕತಾರ್, ಯುಎಸ್‌ಎ, ಯುಎಇ, ಯೆಮೆನ್, ಬಾಂಗ್ಲಾದೇಶದ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ.

ಪಂಪ್‌ವೆಲ್ ಇಂಡಿಯಾನ, ದೇರಳಕಟ್ಟೆ ಕೆ.ಎಸ್.ಹೆಗ್ಡೆ, ಕೊಡಿಯಾಲ್‌ಬೈಲ್ ಯೇನಪೋಯ, ಕಂಕನಾಡಿ ಾದರ್ ಮುಲ್ಲರ್, ಳ್ನೀರ್ ಯುನಿಟಿ ಸಹಿತ ನಗರದ ಇತರ ಕೆಲ ಆಸ್ಪತ್ರೆಗಳಲ್ಲಿಯೂ ವೈದ್ಯಕೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುತ್ತಿದೆ. ಇಲ್ಲಿ ಚಿಕಿತ್ಸೆ ಪಡೆದ ವಿದೇಶಿಗರ ನಿರ್ದಿಷ್ಟ ಸಂಖ್ಯೆ ಲಭ್ಯವಾಗಿಲ್ಲ.

ಪ್ಲಾಸ್ಟಿಕ್ ಸರ್ಜರಿ, ಯುರಾಲಜಿ, ನೆಫ್ರಾಲಜಿ, ಕಾರ್ಡಿಯಾಲಜಿ, ಎಂಡೋಕ್ರಿನಾಲಜಿ, ಜನರಲ್ ಮೆಡಿಸಿನ್, ಜನರಲ್ ಸರ್ಜರಿ, ಆರ್ಥೋಪೆಡಿಕ್ಸ್, ಗೈನಕಾಲಜಿ, ಗ್ಯಾಸ್ಟ್ರೋಎಂಟ್ರಾಲಜಿ, ಡರ್ಮೆಟಾಲಜಿ, ದಂತ, ಇಎನ್‌ಟಿ, ಒಬಿಜಿ, ಆಂಕಾಲಜಿ, ಪೀಡಿಯಾಟ್ರಿಕ್ ಸರ್ಜರಿ ಮುಂತಾದ ವಿಭಾಗದಲ್ಲಿ ವಿದೇಶಿಯರಿಂದ ಚಿಕಿತ್ಸೆಗೆ ಬೇಡಿಕೆ ಇದೆ.

ಭಾರತದ ಆಸ್ಪತ್ರೆಗೆ ಬರಲು ಕಾರಣ?
ವಿದೇಶಿ ಆಸ್ಪತ್ರೆಗಳಿಗೆ ಹೋಲಿಸಿದರೆ ಭಾರತದಲ್ಲಿ ವೈದ್ಯಕೀಯ ವೆಚ್ಚ ಕಡಿಮೆ. ಇತರ ದೇಶಗಳಲ್ಲಿ ರೋಗಿ ಗಂಟೆಗಟ್ಟಲೆ ವೈದ್ಯರನ್ನು ಕಾಯಬೇಕಾಗುತ್ತದೆ. ಭಾರತದಲ್ಲಿ ರೋಗಿ ಆಸ್ಪತ್ರೆಗೆ ಬಂದ ಕಿರು ಅವಧಿಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತದೆ. ವಿದೇಶಗಳಲ್ಲಿ ಒಮ್ಮೆ ಶಸಚಿಕಿತ್ಸೆ ನಡೆಸಿದ ಬಳಿಕ ಆ ವೈದ್ಯ ಭೇಟಿಗೆ ಸಿಗುವುದೇ ಅಪರೂಪ. ಮುಂದೆ ಕಿರಿಯ ವೈದ್ಯರೇ ನೋಡಿಕೊಳ್ಳುತ್ತಾರೆ. ಭಾರತದಲ್ಲಿ ಮೊದಲು ಚಿಕಿತ್ಸೆ ನೀಡಿದ ವೈದ್ಯರೇ ಆಸ್ಪತ್ರೆಯಿಂದ ಬಿಡುಗಡೆಯಾಗುವ ತನಕ ಕಾಳಜಿ ವಹಿಸುತ್ತಾರೆ. ಭಾರತದ ವೈದ್ಯರು ರೋಗಿಗಳೊಂದಿಗೆ ಸ್ನೇಹಮಯವಾಗಿ ವರ್ತಿಸುತ್ತಾರೆ. ಇದೆಲ್ಲ ಕಾರಣಗಳಿಂದಾಗಿ ಭಾರತೀಯ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುವುದಕ್ಕೆ ವಿದೇಶಿಗರು ಒಲವು ತೋರುತ್ತಾರೆ.

ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದ ಬಳಿಕ ವೈದ್ಯಕೀಯ ಪ್ರವಾಸೋದ್ಯಮ ಬೆಳೆಯುತ್ತಿದೆ. ಕಳೆದ ಮೂರು ವರ್ಷಗಳಿಂದ ವಿವಿಧ ರೀತಿಯ ಚಿಕಿತ್ಸೆ ಪಡೆಯುವವರ ಸಂಖ್ಯೆಯೂ ಹೆಚ್ಚಿದೆ. ಇದಕ್ಕೆ ಇನ್ನಷ್ಟು ವೇಗ ಸಿಗಬೇಕಾದರೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಮಾಹಿತಿ ಡಿಸ್‌ಪ್ಲೇ ಮಾಡಬೇಕು.
– ಡಾ.ಪದ್ಮನಾಭ ಕಾಮತ್, ಹೃದ್ರೋಗ ತಜ್ಞ, ಕೆಎಂಸಿ ಆಸ್ಪತ್ರೆ ಮಂಗಳೂರು

Leave a Reply

Your email address will not be published. Required fields are marked *