1.20 ಕೋಟಿ ಜನರಿಗೆ ಆರೋಗ್ಯ ಸೇವೆ

ಉಡುಪಿ: ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಸಹಭಾಗಿತ್ವ ಯೋಜನೆಯಡಿ ರಾಜ್ಯದ 1.20 ಕೋಟಿ ಜನರಿಗೆ ಪ್ರತಿವರ್ಷ 5 ಲಕ್ಷ ರೂ.ವರೆಗಿನ ಆರೋಗ್ಯ ಸೇವೆ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ್.ಎಸ್ ಪಾಟಿಲ್ ಹೇಳಿದರು.

ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಮೊಗವೀರ ಯುವಸಂಘಟನೆ ಉಡುಪಿ, ಮಣಿಪಾಲ ಮಾಹೆ ಸಹಯೋಗದೊಂದಿಗೆ ಶನಿವಾರ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಡ ಜನರ ಆರೋಗ್ಯ ಸೇವೆ ದೃಷ್ಟಿಯಿಂದ ಆಯುಷ್ಮಾನ್ ಭಾರತ ಉತ್ತಮ ಯೋಜನೆ. ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರ ಇನ್ನಷ್ಟು ಪರಿಣಾಮಕಾರಿಯಾಗಿ ಅದನ್ನು ಅನುಷ್ಠಾನಕ್ಕೆ ತರಲಿದೆ. ಕೇಂದ್ರದ ಯೋಜನೆ ವ್ಯಾಪ್ತಿಗೆ ಒಳಪಡುವ ರಾಜ್ಯದ 62 ಲಕ್ಷ ಕುಟುಂಬ ಮತ್ತು ಆರೋಗ್ಯ ಕರ್ನಾಟಕ ಯೋಜನೆ ವ್ಯಾಪ್ತಿಗೆ ಒಳಪಡುವ 58 ಲಕ್ಷ ಬಡ ಕುಟುಂಬದ ಒಟ್ಟು 1.20 ಕೋಟಿ ಜನರಿಗೆ ಪ್ರತಿವರ್ಷ 5ಲಕ್ಷ ರೂ. ಮೊತ್ತದ 1600 ರೋಗಗಳಿಗೆ ಆರೋಗ್ಯ ಸೇವೆ ನೀಡಲಾಗುತ್ತದೆ ಎಂದರು.

30 ಸಾವಿರ ಕುಟುಂಬ, 1.35 ಲಕ್ಷ ಫಲಾನುಭವಿಗಳಿಗೆ ಆರೋಗ್ಯ ಸುರಕ್ಷಾ ಕಾರ್ಡುಗಳನ್ನು ವಿತರಿಸಲಾಯಿತು. ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್ ಬಲ್ಲಾಳ್ ಆರೋಗ್ಯ ಕಾರ್ಡ್ ವಿತರಿಸಿದರು. ಶಾಸಕ ರಘುಪತಿ ಭಟ್ ಮತ್ತು ಮೊಗವೀರ ಯುವ ಸಂಘಟನೆ ಅಧ್ಯಕ್ಷ ವಿನಯ ಕರ್ಕೇರ ಮಲ್ಪೆ ಉಪಸ್ಥಿತರಿದ್ದರು. ಜಯ.ಸಿ ಕೊಟ್ಯಾನ್ ಸ್ವಾಗತಿಸಿದರು. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ.ಜಿ.ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಹಕಾರಕ್ಕೆ ಮೆಚ್ಚುಗೆ: ಕೇಂದ್ರ, ರಾಜ್ಯ ಸರ್ಕಾರಗಳು ಇತ್ತೀಚೆಗೆ ಜನರಿಗೆ ಉಪಯುಕ್ತ ಆರೋಗ್ಯ ಯೋಜನೆಗಳನ್ನು ಜಾರಿಗೆ ತರುತ್ತಿದೆ, ಆದರೆ ಜಿ.ಶಂಕರ್ 8 ವರ್ಷಗಳ ಹಿಂದೆಯೆ ಬಡಜನರಿಗೆ ಆರೋಗ್ಯ ಸೇವೆ ನೀಡುವಲ್ಲಿ ಶ್ರಮಿಸಿದ್ದಾರೆ. ಅವರೊಂದಿಗೆ ಮಣಿಪಾಲದ ಮಾಹೆ ಮತ್ತು ಮೊಗವೀರ ಸಂಘಟನೆ ಸಹಕಾರ ನೀಡುತ್ತಿರುವ ಬಗೆ ಅನನ್ಯ ಎಂದು ಶಿವಾನಂದ್.ಎಸ್ ಪಾಟಿಲ್ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ ಭರವಸೆ: ಅಜ್ಜರಕಾಡು ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ ಶಾಸಕರು, ಜನಪ್ರತಿನಿಧಿಗಳು ಹಾಗೂ ಜಿ.ಶಂಕರ್ ಮನವಿ ಮಾಡಿದ್ದಾರೆ. ಆಸ್ಪತ್ರೆಗೆ ಇನ್ನಷ್ಟು ಮೂಲಸೌಕರ್ಯ, ಸಿಬ್ಬಂದಿ ನೇಮಕ ಸೇರಿದಂತೆ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ಜಿಲ್ಲಾ ಆಸ್ಪತ್ರೆಯ ಸ್ಥಾನ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಸಚಿವ ಶಿವಾನಂದ್.ಎಸ್ ಪಾಟಿಲ್ ಭರವಸೆ ನೀಡಿದರು. ಇತ್ತೀಚೆಗೆ ಆರಂಭವಾದ ಬಿ.ಆರ್ ಶೆಟ್ಟಿ ಅವರ ಖಾಸಗಿ ಆಸ್ಪತ್ರೆಯಲ್ಲಿ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು. ನೀಡದಿದ್ದರೆ ಸರ್ಕಾರ ನಿಮ್ಮ ಜತೆಗೆ ಇರುವುದಿಲ್ಲ ಎಂದು ಸಚಿವರು ಎಚ್ಚರಿಕೆ ನೀಡಿದರು.

ಟ್ರಸ್ಟ್ ವತಿಯಿಂದ ಆರೋಗ್ಯ ಸೇವೆಗೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಬಡ ರೋಗಿಗಳ ಅನುಕೂಲಕ್ಕಾಗಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಕ್ಯಾನ್ಸರ್, ಕಿಡ್ನಿ ರೋಗಿಗಳಿಗೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ ಆಸ್ಪತ್ರೆಯ ರೋಗಿಗಳಿಗೆ 2.50 ಕೋಟಿ ಧನಸಹಾಯ ನೀಡಲಾಗುತ್ತಿದೆ. ಕುಂದಾಪುರದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಹೆರಿಗೆ ಆಸ್ಪತ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ.
|ಜಿ.ಶಂಕರ್, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ