ಆರೋಗ್ಯ ಸೇವೆಗೆ ಖಾಸಗಿ ವಲಯ ಕೈಜೋಡಿಸಲಿ- ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

ಬೆಳಗಾವಿ: ಆರೋಗ್ಯ ಕಾಳಜಿಯ ಸೇವೆಗಳನ್ನು ಕೈಗೆಟಕುವ ದರದಲ್ಲಿ ಸಾಮಾನ್ಯ ಜನತೆಗೆ ತಲುಪಿಸುವುದು ನಮ್ಮ ಮುಂದಿರುವ ಅತಿದೊಡ್ಡ ಸವಾಲಾಗಿದೆ. ಈ ಸವಾಲನ್ನು ಸಮರ್ಥವಾಗಿ ಎದುರಿಸಲು ಸರ್ಕಾರದ ಜತೆ ಖಾಸಗಿ ವಲಯ ಕೈ ಜೋಡಿಸಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಕರೆ ನೀಡಿದ್ದಾರೆ.

ಕೆಎಲ್ಇ ಡೀಮ್ಡ್ ವಿವಿಯ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಆ್ಯಂಡ್ ರಿಸರ್ಚ್‌ನ 9ನೇ ಘಟಿಕೋತ್ಸವದಲ್ಲಿ ಪದವಿ ಹಾಗೂ ಬಂಗಾರದ ಪದಕ ಪ್ರದಾನ ಮಾಡಿ ಅವರು ಮಾತನಾಡಿದರು.
ವೈದ್ಯಕೀಯ ಕ್ಷೇತ್ರವನ್ನು ವಾಣಿಜ್ಯ ಅವಕಾಶ ಎಂದು ಭಾವಿಸದೆ ಸಮಾಜದಲ್ಲಿ ಬಡ ಹಾಗೂ ದುರ್ಬಲ ಜನರ ಸ್ಥಿತಿಗತಿ ಅರಿತು ಕಾಳಜಿಯಿಂದ ಸೇವೆ ಸಲ್ಲಿಸಬೇಕು. ಸಮಾಜದ ಕಟ್ಟ ಕಡೆಯ ಬಡ ವ್ಯಕ್ತಿಗೂ ವೈದ್ಯಕೀಯ ಕೌಶಲ್ಯದ ಲಾಭ ದೊರಕಬೇಕು.

ಅತ್ಯಾಧುನಿಕ ತಂತ್ರಜ್ಞಾನದ ವೈದ್ಯಕೀಯ ಸೌಲಭ್ಯಗಳನ್ನು ಗ್ರಾಮೀಣ ಭಾಗದಲ್ಲಿ ಒದಗಿಸುವುದು ನಮ್ಮ ಮುಂದಿರುವ ಇನ್ನೊಂದು ದೊಡ್ಡ ಸವಾಲಾಗಿದೆ. ಈ ಕೆಲಸಕ್ಕೂ ಖಾಸಗಿ ವಲಯ ಸರ್ಕಾರದ ಜತೆ ಕೈಜೋಡಿಸಬೇಕಾಗಿದೆ ಎಂದರು.

ದೇಶದಲ್ಲಿ ರೋಗಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳಕಾರಿ. ಬೊಜ್ಜು, ಹೈಪರ್ ಟೆನ್ಶನ್ , ಹೃದಯಕಾಯಿಲೆ, ಪಾರ್ಶ್ವವಾಯು, ಡಯಾಬಿಟೀಸ್ ನಂತಹ ರೋಗಿಗಳ ಸಂಖ್ಯೆ ದೇಶದಲ್ಲಿ ಹೆಚ್ಚಾಗುತ್ತಿರುವುದು ಒಳ್ಳೆಯ ಲಕ್ಷಣವಲ್ಲ. ಈ ರೋಗಗಳ ಬಗ್ಗೆ ಯುವ ಜನತೆಯಲ್ಲಿ ಅರಿವು ಮೂಡಿಸಬೇಕಾದ ಜವಾಬ್ದಾರಿ ವೈದ್ಯಕೀಯ ಕ್ಷೇತ್ರದ ಮೇಲಿದೆ. ಇಂತಹ ಅನಾರೋಗ್ಯ ನಿವಾರಣೆಗೆ ರಚನಾತ್ಮಕ ಪರಿಹಾರ ಕಂಡು ಹಿಡಿಯಿರಿ ಎಂದು ಕರೆ ನೀಡಿದರು.

ವೈದ್ಯಕೀಯ ಶಿಕ್ಷಣದಲ್ಲಿ ಚಿಕಿತ್ಸೆಯ ಜತೆಗೆ ರೋಗ ಬಾರದಂತೆ ತಡೆಯುವ ಬಗ್ಗೆಯೂ ಪಠ್ಯ ಇರಬೇಕು. ವೈದ್ಯಕೀಯ ಶಿಕ್ಷಣದಲ್ಲಿ ಜೈವಿಕ ಮೌಲ್ಯಗಳು, ಮಾನವೀಯತೆ ಹಾಗೂ ಸಂವಹನ ಕೌಶಲ್ಯದ ಬಗ್ಗೆಯೂ ತರಬೇತಿ ನೀಡಬೇಕು.ಯೋಗ, ಡಯಟ್, ವ್ಯಾಯಾಮವನ್ನೂ ವೈದ್ಯಕೀಯ ಶಿಕ್ಷಣದ ಪಠ್ಯದಲ್ಲಿ ಸೇರಿಸಬೇಕು ಎಂದರು.

ಘಟಿಕೋತ್ಸವದಲ್ಲಿ 1011 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 10 ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಪ್ರದಾನ ಮಾಡಲಾಯಿತು. ವಿವಿಧ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದ 26 ವಿದ್ಯಾರ್ಥಿಗಳಿಗೆ ವೆಂಕಯ್ಯನಾಯ್ಡು ಅವರು ಬಂಗಾರದ ಪದಕ ಪ್ರದಾನ ಮಾಡಿದರು. ಡಾ. ಅಭಿಶ್ರೇ ರಾಜ್ 3 ಚಿನ್ನದ ಪದಕ ಹಾಗೂ ಡಾ.ಸಲೋನಿ ಗುಪ್ತಾ 2 ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಉಪಕುಲಪತಿ ಡಾ. ವಿವೇಕ ಸಾವೋಜಿ ಅವರು ವಿಶ್ವವಿದ್ಯಾಲಯದ ವಾರ್ಷಿಕ ವರದಿ ಮಂಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕುಲಾಧಿಪತಿ ಡಾ. ಪ್ರಭಾಕರ ಕೋರೆ ವಹಿಸಿದ್ದರು. ಕುಲಸಚಿವ ಡಾ. ವಿ ಡಿ ಪಾಟೀಲ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಎನ್ ಎಸ್ ಮಹಾಂತಶೆಟ್ಟಿ ಹಾಗೂ ಮಹಾವಿದ್ಯಾಲಯಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಕೆಎಲ್‌ಇ ಗುಣಗಾನ: ಕೆಎಲ್ಇ ಸಂಸ್ಥೆ ಹಾಗೂ ಕೆಎಲ್ಇ ಡೀಮ್ಡ್ ವಿಶ್ವವಿದ್ಯಾಲಯದ ಒಳ್ಳೆಯ ಕಾರ್ಯಗಳ ಬಗ್ಗೆ ಪರಿಚಯವಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮೆಚ್ಚುಗೆ ವ್ಯಕ್ತಪಡಿಸಿದರು. ಸಪ್ತ ಋಷಿಗಳ ತ್ಯಾಗ ಪರಿಶ್ರಮದಿಂದ ಸ್ಥಾಪನೆಯಾದ ಕೆಎಲ್ಇ ಇಂದಿಗೂ ಸಪ್ತ ಋಷಿಗಳ ತತ್ವ, ಸಿದ್ದಾಂತಗಳ ಅಡಿಯಲ್ಲಿಯೇ ನಡೆಯುತ್ತಿರುವುದು ಬಹಳ ಸಂತಸ ತಂದಿದೆ ಎಂದರು.

ಕೆಎಲ್ಇ ಡೀಮ್ಡ್ ವಿಶ್ವವಿದ್ಯಾಲಯ ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಸಂಶೋಧನೆಗೂ ಆದ್ಯತೆ ನೀಡುತ್ತಿದೆ. ದೇಶದ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಅಗ್ರಗಣ್ಯ ವಿಶ್ವವಿದ್ಯಾಲಯವಾಗಿರುವ ಜತೆಗೆ ನವಜಾತ ಶಿಶು ಹಾಗೂ ತಾಯಿಯ ಆರೋಗ್ಯದ ಬಗ್ಗೆ ಸಂಶೋಧನೆ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅವರು ಬಣ್ಣಿಸಿದರು.

ಕೆಎಲ್ಇ ಡೀಮ್ಡ್ ಯುನಿವರ್ಸಿಟಿ ಬೆಳಗಾವಿ ಹಾಗೂ ಸುತ್ತಲ 300 ಕಿ.ಮೀ.ಪ್ರದೇಶದಲ್ಲಿ ಆಧುನಿಕ ಪ್ರಯೋಗಾಲಯ ಸಹಿತ ಸೂಪರ್ ಸ್ಪೆಶಾಲಿಟಿ ಗುಣಮಟ್ಟದ 4 ಸಾವಿರ ಹಾಸಿಗೆಗಳ ಆಸ್ಪತ್ರೆ ಸೌಲಭ್ಯಗಳನ್ನು ಕಲ್ಪಿಸಿದೆ. ಇದು ಡಾ. ಪ್ರಭಾಕರ ಕೋರೆಯವರ ದೂರದೃಷ್ಟಿಯ ನಾಯಕತ್ವ ಶಕ್ತಿಗೆ ಸಾಕ್ಷಿಯಾಗಿದೆ ಎಂದರು.

70ರಲ್ಲೂ ಲವಲವಿಕೆ

ತಮ್ಮ 70 ನೇ ವಯಸ್ಸಿನಲ್ಲಿಯೂ ಚಟುವಟಿಕೆಯಿಂದ ಇರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಬೆಳಗ್ಗೆ 6.15 ಕ್ಕೆ ಕೆಎಲ್‌ಇ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಬ್ಯಾಡ್ಮಿಂಟನ್ ಆಡಿ ದೈನಂದಿನ ಚಟುವಟಿಕೆ ಆರಂಭಿಸಿದರು. ಇದನ್ನು ಭಾಷಣದಲ್ಲೂ ಪ್ರಸ್ತಾವಿಸಿದ ಅವರು, ಯೋಗ, ಕ್ರೀಡೆ, ದೈಹಿಕ ಚಟುವಟಿಕೆಗಳ ಮಹತ್ವದ ಬಗ್ಗೆ ವಿವರಿಸಿದರು. ಪ್ರಾರಂಭದಲ್ಲಿ ಸ್ಪಷ್ಟ ಕನ್ನಡ ಉಚ್ಚಾರದೊಂದಿಗೆ ಮಾತು ಪ್ರಾರಂಭಿಸಿ ಕರ್ನಾಟಕದೊಂದಿಗೆ ಎರಡು ದಶಕಗಳ ತಮ್ಮ ಸಂಬಂಧ ವಿವರಿಸಿದರು.