ವಿಜಯವಾಣಿ, ದಿಗ್ವಿಜಯ ನ್ಯೂಸ್ ಫೋನ್ ಇನ್: ಆರೋಗ್ಯ ಸೇವೆಗಳ ಸುಧಾರಣೆಗೆ ಸಚಿವರ ಭರವಸೆ

ಬೆಂಗಳೂರು: ಸುಧಾರಣೆಯ ಹಾದಿಯಲ್ಲಿದ್ದರೂ ಸಮಸ್ಯೆಗಳ ನಂಜಿನಿಂದ ಬಳಲುತ್ತಿರುವ ರಾಜ್ಯದ ಆರೋಗ್ಯ ಸೇವೆಗಳಿಗೆ ಸದ್ದಿಲ್ಲದೆ ಚಿಕಿತ್ಸೆ ನೀಡಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಟೊಂಕಕಟ್ಟಿದೆ. ಕಡು ಬಡವರೂ ಸೇರಿ ಎಲ್ಲ ವರ್ಗದ ಜನರಿಗೆ ಉತ್ತಮ ವೈದ್ಯಕೀಯ ಸೇವೆ ನೀಡಲು ಆರೋಗ್ಯ ಇಲಾಖೆ ಬದ್ಧವಾಗಿದೆ. ಆರೋಗ್ಯ ಇಲಾಖೆಯ ಅನುದಾನ ಸದ್ಬಳಕೆ ಮಾಡಿಕೊಂಡು ಉದ್ಯೋಗಾವಕಾಶಗಳನ್ನು ಹೆಚ್ಚಿಸಲಾಗುವುದು…

ಇದು ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಶುಕ್ರವಾರ ಆಯೋಜಿಸಿದ್ದ ಫೋನ್​ ಇನ್ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶಿವಾನಂದ ಪಾಟೀಲ್ ನೀಡಿದ ಭರವಸೆಯ ನುಡಿಗಳಿವು.

ಬೆಳಗ್ಗೆ 11 ಗಂಟೆಗೆ ಆರಂಭವಾಗಿ ಒಂದೂವರೆ ತಾಸು ನಡೆದ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ ಜನರು ಕರೆ ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲ ಸೌಕರ್ಯ, ವೈದ್ಯಾಧಿಕಾರಿಗಳ ಕೊರತೆ, ವೈದ್ಯರ ನಿರ್ಲಕ್ಷ್ಯ, ಸಾಂಕ್ರಾಮಿಕ ರೋಗಗಳು, ಸಾರ್ವಜನಿಕ ಆಸ್ಪತ್ರೆಗಳ ಅವ್ಯವಸ್ಥೆ ಕುರಿತು ಸಚಿವರ ಗಮನ ಸೆಳೆದರು. ಸಚಿವರು ಎಲ್ಲ ಪ್ರಶ್ನೆಗಳಿಗೆ ಸಮಚಿತ್ತದಿಂದ ಉತ್ತರಿಸಿ, ಸರ್ಕಾರ ಹಾಗೂ ಆರೋಗ್ಯ ಇಲಾಖೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಎಲ್ಲ ಬೇಡಿಕೆಗಳನ್ನು ಕಾಲ ಮಿತಿಯಲ್ಲಿ ಈಡೇರಿಸುವ ಭರವಸೆ ನೀಡಿದರು. ಜತೆಯಲ್ಲಿದ್ದ ಇಲಾಖೆಯ ಉನ್ನತ ಅಧಿಕಾರಿಗಳು ಕೂಡ ವಿವರ ನೀಡಿದರು.

ಪ್ಯಾರಾ ಮೆಡಿಕಲ್ ಸಿಬ್ಬಂದಿ ನೇಮಕ
ಮೊದಲಿಗೆ ಐದು ಸಾವಿರ ಪ್ಯಾರಾ ಮೆಡಿಕಲ್ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಆರೋಗ್ಯ ಇಲಾಖೆ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಸಲ್ಲಿಸಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಅನುಮತಿ ಪಡೆದುಕೊಳ್ಳಲಾಗುತ್ತದೆ. ಜತೆಗೆ, ವೈದ್ಯರ ನೇಮಕದಲ್ಲಿ ಇಲಾಖೆ ಮುಂಚಿನಿಂದರಲೂ ಆದ್ಯತೆ ಮೇಲೆ ಕ್ರಮಕೈಗೊಳ್ಳುತ್ತಲೇ ಇದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ವೈದ್ಯರು ಸರ್ಕಾರಿ ಸೇವೆಗೆ ಬರುತ್ತಿಲ್ಲ. ಹೀಗಾಗಿ ಹಿಂದಿನ ಸಾಲಿನಲ್ಲಿ ನೇಮಕದ ಮೆರಿಟ್ ಲಿಸ್ಟ್‌ನಲ್ಲಿದ್ದವರನ್ನು ಪರಿಗಣಿಸಿ ಅವರಿಗೆ ಆಹ್ವಾನಿಸಲು ಉದ್ದೇಶಿಸಲಾಗಿದೆ ಎಂದರು.

ಇಲಾಖೆ ಆರೋಗ್ಯ ಇಲಾಖೆಯಲ್ಲಿನ ಕೊರತೆಗಳನ್ನು ಕಳೆದ ಏಳು ತಿಂಗಳಿನಿಂದ ಗಮನಿಸಿದ್ದು, ಅವುಗಳನ್ನು ನೀಗಿಸಲು ಇಡೀ ಇಲಾಖೆ ಒಂದು ತಂಡವಾಗಿ ಸಂಕಲ್ಪ ಮಾಡಿ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲವೂ ಸರಿ ಎಂದು ನಾನು ಹೇಳುವುದಿಲ್ಲ, ಕೊರತೆಗಳಿರುವುದನ್ನು ಒಪ್ಪಿಕೊಂಡು ರಾತ್ರೋರಾತ್ರಿ ಇಡೀ ವ್ಯವಸ್ಥೆಯನ್ನು ಬದಲು ಮಾಡಿ ತೋರಿಸುತ್ತೇನೆಂದೂ ಹೇಳುವುದಿಲ್ಲ. ಅದನ್ನು ಕಾಲಮಿತಿಯಲ್ಲಿ ಬಗೆಹರಿಸಲು ಗಮನ ನೀಡುತ್ತಿದ್ದೇವೆ.

ಸಚಿವರಿಗೆ ಕೇಳಿದ ಕೆಲ ಪ್ರಶ್ನೆಗಳಿವು
ಅಟ್ರಾಸಿಟಿ ಅಸ್ತ್ರ ಪ್ರಯೋಗಿಸಿ ಬೆದರಿಸುವ ವೈದ್ಯೆ, ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರೂ ವೈದ್ಯರಿಲ್ಲ, ವಿವಿಧ ಹಂತದ ಸಿಬ್ಬಂದಿಗೆ ಮೂರು ತಿಂಗಳಿಂದ ವೇತನವಿಲ್ಲ, ನಮ್ಮೂರಲ್ಲಿ ಆಂಬ್ಯುಲೆನ್ಸ್ ಇಲ್ಲ, ಕಿದ್ವಾಯಿಯಲ್ಲಿ ಒಂದೆ ಬೆಡ್‌ನಲ್ಲಿ ಇಬ್ಬರು ಮಕ್ಕಳನ್ನು ಮಲಗಿಸುತ್ತಾರೆ ಸೋಂಕು ಹರಡೋಲ್ವೆ? ಗುತ್ತಿಗೆ ನೌಕರರ ಸೇವೆ ಯಾವಾಗ ಕಾಯಂ ಮಾಡುತ್ತೀರಿ? ಹುಬ್ಬಳ್ಳಿ ಕಿಮ್ಸ್‌ನಲ್ಲಿ ಅಸ್ತವ್ಯಸ್ತ, ವೈದ್ಯರ ಕೊರತೆ ನೀಗಲು ಬಿಎಎಂಎಸ್ ಆದವರನ್ನಾದರೂ ನೇಮಿಸಿಕೊಳ್ಳಬಹುದಲ್ಲವೇ?..ಹೀಗೆ ಸಾರ್ವಜನಿಕರು ಕೇಳಿದ ಹತ್ತು ಹಲವು ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು.

ಫೋನ್ಇನ್ ಪೂರ್ಣಪಾಠ ನಾಳಿನ ವಿಜಯವಾಣಿಯಲ್ಲಿ

ರಾಜ್ಯದೆಲ್ಲಡೆಯಿಂದ ಸಮಸ್ಯೆಗಳನ್ನು ಹೊತ್ತು ಬಂದ ಬಗೆ ಬಗೆಯ ಕರೆಗಳಿಗೆ ಸಚಿವರು ಧನಾತ್ಮಕವಾಗಿಯೇ ಉತ್ತರಿಸಿದ್ದಾರೆ. ಕೆಲವುಗಳನ್ನು ತಕ್ಷಣದಿಂದಲೇ ಪರಿಹರಿಸುವುದಾಗಿ ಹೇಳಿದರೆ, ಸ್ಥಳದಲ್ಲೇ ಕುಳಿತು ಸಂಬಂಧಪಟ್ಟ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಆರೋಗ್ಯ ಕರ್ನಾಟಕ ಹಾಗೂ ಆಯುಷ್ಮಾನ್ ಭಾರತ್ ಸೇವೆಗಳನ್ನು ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗಿ ಹೇಗೆ ಜನರ ಆರೋಗ್ಯ ಜೀವನ ಸುಧಾರಿಸಬಹುದು ಎಂಬ ಕನಸುಗಳನ್ನು ಬಿಚ್ಚಿಟ್ಟಿದ್ದಾರೆ. ಕಾರ್ಯಕ್ರಮದ ಪೂರ್ಣಪಾಠವನ್ನು ಶನಿವಾರದ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತಿದ್ದು, www.vijayavani.net ನಲ್ಲೂ ಲಭ್ಯವಿರುತ್ತದೆ.

Leave a Reply

Your email address will not be published. Required fields are marked *