ನಮ್ಮ ಹಿರಿಯರ ಆಹಾರ ಪದ್ಧತಿಗಳ ಹಿಂದೆ ಇತ್ತು ಆರೋಗ್ಯದ ಗುಟ್ಟು

ನಮ್ಮ ಹಿರಿಯರು ತುಂಬ ಆರೋಗ್ಯಯುತ ಜೀವನ ನಡೆಸಿದ್ದಾರೆ. 70-80 ವರ್ಷಗಳಾದರೂ ಗಟ್ಟಿಮುಟ್ಟಾಗಿದ್ದರು. ಅದಕ್ಕೆ ಕಾರಣ ಅವರು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿದ್ದ ಶಿಸ್ತುಬದ್ಧ ಕ್ರಮಗಳು ಎಂಬುದರಲ್ಲಿ ಎರಡು ಮಾತಿಲ್ಲ.

ಮೈಮುರಿದು ದುಡಿದು ಹೊಟ್ಟೆ ತುಂಬ, ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡಿ, ಅಗತ್ಯವಿರುವಷ್ಟು ನಿದ್ದೆ ಮಾಡಿ ತಮ್ಮ ಆರೋಗ್ಯವನ್ನು ಸುಸ್ಥಿರವಾಗಿಟ್ಟುಕೊಳ್ಳುತ್ತಿದ್ದರು.

ಆದರೆ, ನಾವು ನಮ್ಮ ಹಿರಿಯರು ಅನುಸರಿಸುತ್ತಿದ್ದ ಕ್ರಮಗಳನ್ನು ಬದಿಗೊತ್ತಿದ್ದೇವೆ. ಯಾವಾಗಲೋ, ಸಿಕ್ಕ ಆಹಾರ ಸೇವಿಸುವುದು, ತಡರಾತ್ರಿವರೆಗೆ ಎಚ್ಚರವಾಗಿರುವುದು… ಹೀಗೆ ಅವ್ಯವಸ್ಥೆಗಳೇ ಎಲ್ಲ.
ಇವೆಲ್ಲವೂ ನಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತಿವೆ. ನಮ್ಮ ತಾತ, ಅಜ್ಜಿಗೆ 80 ವರ್ಷಕ್ಕೆ ಬಂದ ಕಾಯಿಲೆಗಳು ನಮಗೆ ಈಗಲೇ ಕಾಣಿಸಿಕೊಳ್ಳುತ್ತಿವೆ. ನೀವು ನಂಬಲೇ ಬೇಕು ಹಳೇ ಕಾಲದ ಜನರು ನೀರು ಕುಡಿಯುವಲ್ಲಿಯೂ ಒಂದು ಶಿಸ್ತು ಅನುಸರಿಸುತ್ತಿದ್ದರು.

ನಮ್ಮ ಹಿರಿಯರು ನಿತ್ಯ ಜೀವನದಲ್ಲಿ ಅನುಸರಿಸುತ್ತಿದ್ದ ಪದ್ಧತಿಗಳ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ. ಅವರಿಗೆ ಅದರ ಅರಿವು ಎಷ್ಟು ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ತಮ್ಮ ಹಿಂದಿನವರು ಹಾಕಿಕೊಟ್ಟ ಕೆಲವು ಸಂಪ್ರದಾಯಗಳನ್ನು ಮೀರುತ್ತಿರಲಿಲ್ಲ.

ಈಗ ಒಂದಷ್ಟು ಪದ್ಧತಿಗಳು, ಅದರ ಹಿಂದಿನ ಕಾರಣಗಳನ್ನು ಗಮನಿಸೋಣ.

ನೆಲದ ಮೇಲೆ ಕುಳಿತು ಊಟ ಮಾಡುವುದು

ಈಗಂತೂ ಡೈನಿಂಗ್​ ಟೇಬಲ್​ಗಳದ್ದೇ ಕಾರುಬಾರು. ನೆಲಕ್ಕೆ ಕುಳಿತುಕೊಂಡು ಊಟ ಮಾಡಲು, ಆಮೇಲೆ ನೆಲವನ್ನು ಒರೆಸುವುದು ಅದೆಲ್ಲ ಕಿರಿಕಿರಿ. ಅದೂ ಬಿಡಿ ಕೆಲವರಂತೂ ಹಾಸಿಗೆಯಲ್ಲೇ ಕುಳಿತು ಊಟ ಮಾಡುತ್ತಾರೆ. ಇನ್ನೊಂದಿಷ್ಟು ಜನ ಕೆಲಸ ಮಾಡುವ ಟೇಬಲ್​ ಮೇಲೆ ತಿಂಡಿ ತಿನ್ನುತ್ತಾರೆ.
ಆದರೆ, ಅದು ಸರಿಯಾದ ಕ್ರಮವಲ್ಲ. ನಮ್ಮ ಹಿರಿಯರು ಊಟ, ತಿಂಡಿಗೆ ನೆಲದ ಮೇಲೆ ಚಕ್ಕಂಬಕ್ಕಲ ಹಾಕಿ ಕುಳಿತುಕೊಂಡು ನಿಧಾನವಾಗಿ ಊಟ ಮಾಡುತ್ತಿದ್ದರು. ಆಹಾರ ಸೇವನೆಗೆ ಇದೇ ಸರಿಯಾದ ಕ್ರಮವೆಂದು ಆರೋಗ್ಯತಜ್ಞರೂ ಖಚಿತಪಡಿಸಿದ್ದಾರೆ. ಈ ರೀತಿ ಕುಳಿತುಕೊಳ್ಳುವುದು ಯೋಗದ ಭಂಗಿಯಾಗಿದ್ದು ಅದಕ್ಕೆ ಸುಖಾಸನ ಎಂದು ಕರೆಯುತ್ತಾರೆ. ಇದರಿಂದ ನಮ್ಮ ಹೊಟ್ಟೆಯ ಸ್ನಾಯುಗಳ ಆರೋಗ್ಯ ವೃದ್ಧಿಸುತ್ತದೆ. ಅಲ್ಲದೆ, ರಕ್ತಸಂಚಾರವನ್ನು ಸುಗಮಗೊಳಿಸಿ ಫ್ಲೆಕ್ಸಿಬಿಲಿಟಿಯನ್ನು ಹೆಚ್ಚಿಸುತ್ತದೆ. ಹೀಗೆ ಕುಳಿತು ಊಟ ಮಾಡಿದರೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಹೊಟ್ಟೆಯುಬ್ಬರ, ಆಮ್ಲೀಯತೆ ಸಮಸ್ಯೆ ಉಂಟಾಗುವುದಿಲ್ಲ. ನೆನಪಿರಲಿ ಬರೀ ನೆಲದ ಮೇಲೆ ಕುಳಿತುಕೊಳ್ಳುವ ಬದಲು ಚಾಪೆಯನ್ನೋ, ಮಣೆಯನ್ನೋ ಹಾಕಿಕೊಂಡರೆ ಇನ್ನೂ ಒಳಿತು.

ಮಣ್ಣಿನ ಮಡಕೆಯಲ್ಲಿ ಅಡುಗೆ

ಮೊದಲು ಮಣ್ಣಿನ ಮಡಕೆಯಲ್ಲಿ ಅಡುಗೆ ಮಾಡುತ್ತಿದ್ದರು. ಅದರಲ್ಲಿ ತಯಾರಾಗುವ ಆಹಾರ ಅಷ್ಟೇ ರುಚಿ ಇರುತ್ತಿತ್ತು. ಈಗಂತೂ ತರತರದ ಪಾತ್ರೆಗಳು. ಒಳಗಿರುವ ಅಡುಗೆ ಎಷ್ಟು ರುಚಿ, ಆರೋಗ್ಯಕರವಾದದ್ದು ಎಂಬುದಕ್ಕಿಂತ ಅದನ್ನು ಹಾಕಿಟ್ಟ ಪಾತ್ರೆ ಸುಂದರವಾಗಿರಬೇಕು ಎಂಬುದು ಈಗಿನವರ ಆಸೆ.
ಮಣ್ಣಿನ ಮಡಕೆಗಳಲ್ಲಿ ತಯಾರಾಗುವ ಅಡುಗೆ ಕ್ಯಾನ್ಸರ್​ ರೋಗ ಬಾರದಂತೆ ತಡೆಯುತ್ತದೆ. ಆಹಾರದಲ್ಲಿನ ಅತಿ ಆಮ್ಲೀಯತೆಯನ್ನು ಮಣ್ಣಿನ ಮಡಕೆ ನಾಶಗೊಳಿಸುತ್ತದೆ. ಇದರಿಂದ ಕ್ಯಾನ್ಸರ್​ ಜೀವಕೋಶಗಳು ಬೆಳೆಯುವುದಿಲ್ಲ. ಹಾಗೇ ಮಣ್ಣಿನ ಪಾತ್ರೆಯಲ್ಲಿ ತಯಾರಾಗುವ ಆಹಾರದಿಂದ ನಮ್ಮ ದೇಹಕ್ಕೆ ಅಗತ್ಯವಾದ ಕೆಲವು ಖನಿಜಾಂಶಗಳು ದೊರೆಯುತ್ತವೆ.

ಬೇಗ ಆಹಾರ ಸೇವನೆ

ನೀವು ಗಮನಿಸಿ ಬೆಳಗ್ಗೆ 7ಕ್ಕೆಲ್ಲ ತಿಂಡಿ, ಮಧ್ಯಾಹ್ನ 1ರ ಒಳಗೆ ಊಟ, ಹಾಗೇ ಸಂಜೆ ಏಳು ಗಂಟೆಗೆ ರಾತ್ರಿ ಊಟ. ಇದು ನಮ್ಮ ಹಿರಿಯರು ಆಹಾರ ಸೇವನೆಗೆ ಪರಿಪಾಲಿಸುವ ಸಮಯ. ಹಾಗೇ ಮಾಡುವಂತೆ ನಮಗೂ ಸಲಹೆ ಮಾಡುತ್ತಾರೆ. ಇದಕ್ಕೆ ಕಾರಣ ಬೇಗ ಆಹಾರ ಸೇವನೆ ಮಾಡಿದರೆ ಅದನ್ನು ಜೀರ್ಣ ಮಾಡಿಕೊಳ್ಳಲು ಶರೀರದ ಅಂಗಗಳಿಗೆ ಹೆಚ್ಚು ಸಮಯ ಸಿಗುತ್ತದೆ. ಇದರಿಂದ ಕೆಟ್ಟ ಕೊಬ್ಬು ಉತ್ಪತ್ತಿಯಾಗುವುದಿಲ್ಲ. ಹಾಗೇ ಸರಿಯಾಗಿ ನಿದ್ದೆ ಬರುತ್ತದೆ. ವೈದ್ಯರು ಕೂಡ ಇದನ್ನೇ ಹೇಳುತ್ತಾರೆ.

ಕೈಯಲ್ಲೇ ತಿನ್ನಿ

ಪ್ಲೇಟ್​ಲ್ಲಿ ತಿಂಡಿ, ಊಟ ಹಾಕಿಕೊಂಡು ಕೈಯಲ್ಲಿ ಸ್ಪೂನ್​ ಹಿಡಿದು ಟಿವಿ ಮುಂದೆ ಕುಳಿತರೆ ಅದೆಷ್ಟೋ ಹೊತ್ತು ತಿನ್ನುತ್ತಲೇ ಇರುತ್ತವೆ. ಗಮನವೆಲ್ಲ ಟಿವಿ ಮೇಲೆ. ಆದರೆ ಕೈಯಲ್ಲಿ ಊಟ ಮಾಡಬೇಕು. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆಯುರ್ವೇದದ ಪ್ರಕಾರ ಇದೂ ಕೂಡ ಯೋಗಕ್ಕೆ ಸಂಬಂಧಪಟ್ಟಿದ್ದು. ಕೈಯಲ್ಲಿ ಊಟ ಮಾಡಿದಾಗ ಎಲ್ಲ ಬೆರಳುಗಳೂ ಒಟ್ಟಾಗುತ್ತವೆ. ಹಾಗೇ ಕೈಯಲ್ಲಿ ಊಟ ಮಾಡಿದಾಗ ನಮ್ಮ ದೇಹಕ್ಕೆ ಎಷ್ಟು ಬೇಕೋ ಅಷ್ಟನ್ನೇ ತಿನ್ನಬಹುದು. ಇದು ಡಯಟ್​, ತೂಕ ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದೂ ತಜ್ಞರು ಹೇಳುತ್ತಾರೆ.

ಕುಳಿತು ನೀರು ಕುಡಿಯಿರಿ

ನೀವು ನಿಂತುಕೊಂಡು ಅವಸರದಲ್ಲಿ ನೀರು ಕುಡಿಯುತ್ತಿದ್ದರೆ ಅಲ್ಲಿಯೇ ಇದ್ದ ನಿಮ್ಮ ಅಜ್ಜಿ, ಸ್ವಲ್ಪ ಕುಳಿತುಕೊಂಡು ನೀರು ಕುಡಿ ಎಂದು ಹೇಳಿದ್ದನ್ನು ಕೇಳಿರಬಹುದು. ನಿಂತು ನೀರು ಕುಡಿದರೆ ನಮ್ಮ ದೇಹದಲ್ಲಿನ ದ್ರವಾಂಶಗಳ ಸಮತೋಲನ ತಪ್ಪುತ್ತದೆ. ಕೀಲುಗಳಲ್ಲಿ ಹೆಚ್ಚಿನ ದ್ರವ ಸಂಗ್ರಹವಾಗುವಂತೆ ಮಾಡಿ ಸಂಧಿವಾತಕ್ಕೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. (ಏಜೆನ್ಸೀಸ್​)