ವಿಜಯವಾಣಿ ಸುದ್ದಿಜಾಲ ಸವದತ್ತಿ
ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಮಾ.23ರಂದು ಬೆಳಗಾವಿ ವಿಭಾಗದ ರಾಜ್ಯಮಟ್ಟದ ಬೃಹತ್ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗಿದೆ. ಎಲ್ಲ ಇಲಾಖೆ ಅಧಿಕಾರಿಗಳು ತಮಗೆ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಯಶಸ್ವಿಗೊಳಿಸಬೇಕು ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಸೂಚಿಸಿದರು.
ಇಲ್ಲಿನ ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆರೋಗ್ಯ ಮೇಳದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ಬೃಹತ್ ಆರೋಗ್ಯ ಮೇಳವನ್ನು ಸವದತ್ತಿಯಲ್ಲಿ ಆಯೋಜಿಸಿರುವುದು ಹೆಮ್ಮೆಯ ವಿಷಯ. ಅಂದು ಗ್ರಾಮೀಣ ಭಾಗದ ಜನರಿಗೆ ಸಾರಿಗೆ ಇಲಾಖೆ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಬೇಕು. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಆರೋಗ್ಯ ಮೇಳದ ಕುರಿತು ಧ್ವನಿ ವರ್ಧಕಗಳ ಮೂಲಕ ಜಾಗೃತಿ ಮೂಡಿಸಲಾಗುವುದು. ಅಂಗನವಾಡಿ, ಆಶಾ ಕಾರ್ಯಕರ್ತರು ಮನೆ ಮನೆ ತೆರಳಿ ಆರೋಗ್ಯ ಮೇಳದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಆರೋಗ್ಯಧಿಕಾರಿ ಶ್ರೀಪಾದ ಸಬನಿಸ್ ಮಾತನಾಡಿ, ಆರೋಗ್ಯ ಮೇಳದಲ್ಲಿ ಸಾವಿರಾರು ಜನರು ಸೇರುವ ನಿರೀಕ್ಷೆ ಇದೆ. ಹೀಗಾಗಿ, ಕ್ರೀಡಾಂಗಣದ ಸ್ವಚ್ಛತೆ, ಕುಡಿಯುವ ನೀರು, ವಾಹನಗಳ ನಿಲುಗಡೆ ಪಾರ್ಕಿಂಗ್ ವ್ಯವಸ್ಥೆ ಸೇರಿ ಪುರಸಭೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದರು.
ಆರೋಗ್ಯ ಮೇಳದಲ್ಲಿ ಹೃದಯ, ಸೀರೋಗ, ಮಕ್ಕಳು, ಎಲುಬು ಮತ್ತು ಕೀಲು, ಕ್ಯಾನ್ಸರ್, ಮಾನಸಿಕ, ಮೂತ್ರ ಪಿಂಡ, ಕಿವಿ, ಮೂಗು ಮತ್ತು ಗಂಟಲು, ನೇತ್ರ, ಚರ್ಮ ರೋಗ, ದಂತ ಸೇರಿ 300 ಕ್ಕಿಂತ ಅಧಿಕ ತಜ್ಞ ವೈದ್ಯರು ಭಾಗವಹಿಸಲಿದ್ದಾರೆ. ಎಲ್ಲ ರೀತಿಯ ರೋಗಗಳಿಗೂ ಚಿಕಿತ್ಸೆ ನೀಡಿ ಉಚಿತ ಔಷಧ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಅಗತ್ಯವಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗೆ ಧಾರವಾಡದ ಎಸ್‌ಡಿಎಂ, ಬೆಳಗಾವಿ ಕೆಎಲ್‌ಇ, ಮೈಸೂರು ಹಾಗೂ ಬೆಂಗಳೂರಿಗೂ ಕಳುಹಿಸಲು ಸೂಕ್ತ ವ್ಯವಸ್ಥೆ ಮಾಡಲಾಗುವುದು. ಜನರು ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು. ಜಿಲ್ಲೆಯ ಎಲ್ಲ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಎಂ.ವಿ.ಗುಂಡಪ್ಪಗೋಳ, ಬಿಇಒ ಮೋಹನ ದಂಡಿನ, ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಮಠ, ಪಿಐ ಧರ್ಮಾಕರ ಧರ್ಮಟ್ಟಿ, ಅಕ್ಷರದಾಸೋಹ ಅಧಿಕಾರಿ ಮೈತ್ರಾದೇವಿ ವಸದ, ಕೃಷಿ ಅಧಿಕಾರಿ ಶಿವಪ್ರಕಾಶ ಪಾಟೀಲ, ಸಮಾಜ ಕಲ್ಯಾಣಾಧಿಕಾರಿ ಆರ್.ಆರ್.ಕುಲಕರ್ಣಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.