ಬಡವರಿಗೆ ಉಚಿತ ಆರೋಗ್ಯ ಸೇವೆ

ಬಾಗಲಕೋಟೆ: ಬಡವರಿಗೆ ಉಚಿತವಾಗಿ ಉತ್ತಮ ಆರೋಗ್ಯ ಸೇವೆ ದೊರಕಬೇಕು ಎಂಬುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ರಾಜ್ಯದ ಜನರಿಗೆ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರಲಾಗುತ್ತಿದೆ. ಈಗಾಗಲೇ ಯಶಸ್ವಿನಿ ಕಾರ್ಡ್ ಮುಖಾಂತರ 60 ಲಕ್ಷ ಜನರಿಗೆ ಸರ್ಕಾರ ಸಹಾಯ ಮಾಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ನವನಗರದ ಜಿಲ್ಲಾ ಆಸ್ಪತ್ರೆ ಆವರಣ ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಭಾನುವಾರ ಸಿಟಿ ಸ್ಕ್ಯಾನ್ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಆಸ್ಪತ್ರೆಗಳ ಜತೆಗೆ ಖಾಸಗಿ ಆಸ್ಪತ್ರೆಗಳು ಕೂಡ ವ್ಯಾಪಕ ಪ್ರಮಾಣದಲ್ಲಿ ತಲೆ ಎತ್ತಿವೆ. ಅನೇಕ ವೈದ್ಯರು ಬೆಳಗ್ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸಂಜೆ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆ ವೈದ್ಯರು ಹಣದ ಆಸೆಗೆ ರೋಗಿಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದು ಕಂಡು ಬಂದಿದೆ. ಇದರಿಂದ ಬಡ ರೋಗಿಗಳಿಗೆ ಹೊರೆಯಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಬಡ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆ ನೀಡುವ ಕುರಿತು ಖಾಸಗಿ ವೈದ್ಯರ ಜತೆ ಸರ್ಕಾರ ಮಾತುಕತೆ ನಡೆಸುತ್ತಿದೆ. ಕೆಲ ವೈದ್ಯರ ಹಣದಾಸೆಯಿಂದಾಗಿ ವೈದ್ಯರೆಲ್ಲರಿಗೂ ಕೆಟ್ಟ ಹೆಸರು ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಸಿಟಿ ಸ್ಕ್ಯಾನ್ ಘಟಕ ಇರಲಿಲ್ಲ. ಇದರಿಂದ ಬಡರೋಗಿಗಳು ಪರದಾಡುತ್ತಿದ್ದರು. ಈ ವಿಷಯ ಸರ್ಕಾರದ ಗಮನಕ್ಕೆ ಬಂದ ನಂತರ ತಕ್ಷಣಕ್ಕೆ ಕ್ರಮ ಕೈಗೊಳ್ಳಲಾಯಿತು. ಇದೀಗ ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಘಟಕ ಆರಂಭವಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈಗಾಗಲೇ ರಾಜ್ಯದ 14 ಜಿಲ್ಲೆಯಲ್ಲಿ ಸಿಟಿ ಸ್ಕ್ಯಾನ್ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. 145 ಡಯಾಲಿಸಿಸ್ ಕೇಂದ್ರಗಳಿವೆ. ಅವುಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ತಾಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಐಸಿಯು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇನ್ನು ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ತರಲು ಚಿಂತನೆ ನಡೆದಿದೆ. ಈ ಯೋಜನೆ ಯಿಂದ ಒಂದು ಕೋಟಿ ಹತ್ತು ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದರು.

ಬಾಗಲಕೋಟೆ ಜನರ ಬಹುದಿನಗಳ ಬೇಡಿಕೆಯಾದ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರಾಗಿದೆ. ಆದರೆ ಇನ್ನೂ ಆರಂಭವಾಗಿಲ್ಲ. ಇದರ ಬಗ್ಗೆ ಸ್ಥಳೀಯ ಶಾಸಕರು ಒತ್ತು ನೀಡಿದರೆ ಶೀಘ್ರ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭವಾಗುತ್ತದೆ. ಈಗಾಗಲೆ ಸರ್ಕಾರ ವೈದ್ಯರು ಮತ್ತು ದಾದಿಯರ ಕೊರತೆ ನೀಗಿಸಲು ಕ್ರಮ ತೆಗೆದು ಕೊಂಡಿದೆ. ಜನರಿಗೆ ಉಚಿತವಾಗಿ ಆರೋಗ್ಯ ಸೇವೆ ದೊರೆಯಬೇಕು ಎಂಬುದು ಸರ್ಕಾರದ ಆಶಯ ಎಂದು ತಿಳಿಸಿದರು.

ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಅನಂತರೆಡ್ಡಿ ರಡ್ಡೇರ ಮಾತನಾಡಿ, ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ 300 ಹಾಸಿಗೆ ಕಟ್ಟಡವಿದ್ದು, ಈಗ ಹೆಚ್ಚುವರಿಯಾಗಿ 100 ಹಾಸಿಗೆ ಕಟ್ಟಡ ನಿರ್ವಣವಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಎಂ. ಸಿಂಗಾಡೆ, ತಾಲೂಕು ಪಂಚಾಯಿತಿ ಅಧ್ಯಕ್ಷ ಚನ್ನನಗೌಡ ಪರನಗೌಡರ, ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ., ಜಿಪಂ ಸಿಇಒ ವಿಕಾಸ ಸುರಳಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎ.ಎನ್.ದೇಸಾಯಿ ಉಪಸ್ಥಿತರಿದ್ದರು.