ಹುಣಸೂರು: ತಾಲೂಕಿನ ನಲ್ಲೂರುಪಾಲ ಗ್ರಾಮದ ಸೃಜನಸರೋವರ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ 300ಕ್ಕೂ ಹೆಚ್ಚು ಜನರು ತಪಾಸಣೆಗೊಳಗಾದರು.
ಮೈಸೂರಿನ ಕ್ಲಿಯರ್ ಮೆಡಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಸುತ್ತಮುತ್ತಲ ಗ್ರಾಮದ ಜನರು ಪಾಲ್ಗೊಂಡಿದ್ದರು. ಇಸಿಜಿ, ಕಣ್ಣಿನ ತಪಾಸಣೆ, ಸ್ತ್ರೀಯರ ಸಮಸ್ಯೆಗಳು, ತೂಕ ಮತ್ತು ಎತ್ತರ ಪರೀಕ್ಷೆ, ಶುಗರ್ ಪರೀಕ್ಷೆ, ಇನ್ನಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಉಚಿತವಾಗಿ ತಪಾಸಣೆ ನಡೆಸಿ ಮಾರ್ಗದರ್ಶನ ನೀಡಲಾಯಿತು.
ಈ ವೇಳೆ ಮಾತನಾಡಿದ ಶಾಲೆ ಮುಖ್ಯಶಿಕ್ಷಕ ಎಂ.ಸಂತೋಷ್ ಕುಮಾರ್, ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದರ ಜತೆಗೆ ಮಕ್ಕಳ ಪೋಷಕರ ಹಾಗೂ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಈ ಉಚಿತ ಕಾರ್ಯಗಾರ ನಡೆಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರೇತರ ಸಂಘಸಂಸ್ಥೆಗಳು ಗ್ರಾಮೀಣ ಭಾಗದಲ್ಲಿ ಆರೋಗ್ಯ ಉಚಿತ ಶಿಬಿರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸುತ್ತಿರುವುದರಿಂದ ಗ್ರಾಮೀಣರಲ್ಲಿ ಆರೋಗ್ಯ ರಕ್ಷಣೆ ಮತ್ತು ನಿರ್ವಹಣೆ ಕುರಿತು ಸಾಕಷ್ಟು ಅರಿವು ಮೂಡಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಕ್ಲಿಯರ್ ಮೆಡಿ ಆಸ್ಪತ್ರೆ ವೈದ್ಯ ಪವನ್, ಆಡಳಿತ ಅಧಿಕಾರಿ ಸುಂದ್ರೇಶ್, ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯ ವೈದ್ಯ ಉದಯ್, ವ್ಯವಸ್ಥಾಪಕ ಕಾರ್ತಿಕ್, ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಕೆ.ಜಿ.ಅನಿ, ಸದಸ್ಯರಾದ ಎಸ್.ರವಿ ಎಸ್, ಪೆಂಜಳ್ಳಿ ಸುರೇಂದ್ರ, ಶಿಕ್ಷಕಿಯರಾದ ಆರ್.ಶ್ವೇತಾ, ಅಭಿಲಾಷ್, ಪಿ.ಶ್ವೇತಾ, ನಿಶ್ಚಿತಾ, ಪ್ರೀತಿ ರಾಣಿ, ಚಿಕ್ಕದೇವಮ್ಮ ಇತರರಿದ್ದರು.