ಸೋಮವಾರಪೇಟೆ: ಕೊಡಗು ಪತ್ರಕರ್ತರ ಸಂಘದ ತಾಲೂಕು ಸಮಿತಿ ವತಿಯಿಂದ ಡಿ.22ರಂದು ಪತ್ರಕರ್ತರು ಮತ್ತು ಕುಟುಂಬದವರಿಗೆ ಆರೋಗ್ಯ ಶಿಬಿರ ಮತ್ತು ಪತ್ರಕರ್ತರಿಗೆ ಜಿಲ್ಲಾ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ನಡೆಯಲಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಎಚ್.ಆರ್. ಹರೀಶ್‌ಕುಮಾರ್ ತಿಳಿಸಿದರು.
ಸಂಘದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದರು. ಜಿಲ್ಲೆಯ ನಾಲ್ಕು ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಳ್ಳಲಿವೆ. ವಿಜೇತ ತಂಡಕ್ಕೆ ಟ್ರೋಫಿ ಮತ್ತು ನಗದು ಬಹುಮಾನ ವಿತರಿಸಲಾಗುವುದು. ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಮತ್ತು ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾನಿಧಿ ಸ್ಥಾಪಿಸುವ ಬಗ್ಗೆ ಚರ್ಚೆ ನಡೆದಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಪತ್ರಕರ್ತರು ಸರ್ಕಾರದ ಯಾವುದೇ ಯೋಜನೆಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ. ಗ್ರಾಮೀಣ ಪತ್ರಕರ್ತರಿಗೆ ಆರ್ಥಿಕ ಭದ್ರತೆ ಇಲ್ಲದೆ ಇಂದಿಗೂ ಸಂಕಷ್ಟದ ಜೀವನ ನಡೆಸುತ್ತಿದ್ದು, ಗ್ರಾಮೀಣ ಪತ್ರಕರ್ತರಿಗೆ ಸೌಲಭ್ಯ ಒದಗಿಸಲು ಸರ್ಕಾರಗಳು ಕೂಡ ಜಾಣ ಮೌನ ವಹಿಸಿವೆ. ಗ್ರಾಮೀಣ ಪತ್ರಕರ್ತರು ಮತ್ತು ಅವರು ಮತ್ತು ಕುಟುಂಬದವರಿಗೆ ಆರೋಗ್ಯದಲ್ಲಿ ಏರುಪೇರಾದಲ್ಲಿ ಹಣಕಾಸಿಗೆ ಪರದಾಡಬೇಕಾಗಿದೆ. ಪತ್ರಕರ್ತರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರಿಗೆ ಆರ್ಥಿಕ ನೆರವನ್ನು ನೀಡುವ ನಿಟ್ಟಿನಲ್ಲಿ ಹೃದಯವಂತರಿಂದ ಹಣ ಸಂಗ್ರಹಿಸಿ ವಿದ್ಯಾನಿಧಿ ಸ್ಥಾಪಿಸುವ ಗುರಿ ಇದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಜಿ.ವಿ. ರವಿಕುಮಾರ್, ಸುರೇಶ್ ಬಿಳಿಗೇರಿ, ಕುಡೆಕಲ್ ಸಂತೋಷ್, ತಾಲೂಕು ಸಮಿತಿಯ ಕವನ್ ಕಾರ್ಯಪ್ಪ, ಡಿ.ಪಿ.ಲೋಕೇಶ್, ದುಷ್ಯಂತ್ ಕುಮಾರ್, ಟಿ.ಜೆ. ಪ್ರವೀಣ್, ಖಲೀಲ್ ಇದ್ದರು.