ಔರಾದ್: ಆರೋಗ್ಯದ ಅರಿವು ಮೊದಲು ಮನೆಯಿಂದಲೇ ಆರಂಭವಾಗಬೇಕು. ತಮ್ಮ ಓಣಿ ಸ್ವಚ್ಛವಾದರೆ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ ಹೇಳಿದರು.
ಪಟ್ಟಣದ ಸಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯ ಅರಿವು ಮತ್ತು ಸ್ವಚ್ಛತೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡೆಂಘೆ, ಚಿಕೂನ್‌ಗುನ್ಯಾ, ಮಲೇರಿಯಾ ಅಂತಹ ರೋಗ ತಡೆಗೆ ಪ್ರತಿಯೊಬ್ಬರೂ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಶುದ್ಧ ನೀರು ಕಾಯಿಸಿ ಕುಡಿಯಬೇಕು. ಈಗಾಗಲೇ ಇಲಾಖೆ ಕಾರ್ಯಕರ್ತರು ಆರೋಗ್ಯದ ಅರಿವು ಮೂಡಿಸುತ್ತಿದ್ದು, ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಓಂಪ್ರಕಾಶ ದಡ್ಡೆ ಮಾತನಾಡಿ, ನಾವು ಎಷ್ಟೇ ಸಂಪಾದನೆ ಮಾಡಿದರೂ ಆರೋಗ್ಯದ ಸಂಪತ್ತು ಶ್ರೇಷ್ಠವಾದದ್ದು, ಆರೋಗ್ಯವಿಲ್ಲದೇ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಅದಕ್ಕಾರಿ ವಿದ್ಯಾರ್ಥಿಗಳು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕೆಂದು ಹೇಳಿದರು.
ವೈದ್ಯಾಧಿಕಾರಿಗಳು ೧೫೦ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಿದರು. ಉಪನ್ಯಾಸಕ ಉತ್ತಮ ಸಂಗನಾಯಕ, ಡಾ.ಶಿವರಾಜ ನಿಟ್ಟೂರೆ, ಡಾ.ಶಾಂತಕುಮಾರ ಇತರರಿದ್ದರು.