ಆರೋಗ್ಯ ಜಾಗೃತಿಗೂ ಇವೆ ಅಡ್ಡ ಪರಿಣಾಮಗಳು

blank

ಆರೋಗ್ಯ ಜಾಗೃತಿಗೂ ಇವೆ ಅಡ್ಡ ಪರಿಣಾಮಗಳು

ಕೆಲ ವರ್ಷಗಳ ಹಿಂದೆ ಊರಿಗೆ ಹೋಗಿದ್ದಾಗ ನನ್ನ ಸಹಪಾಠಿಯೊಬ್ಬ ತಾನು ಆರಂಭಿಸುತ್ತಿರುವ ನೂತನ ಜಿಮ್ ಉದ್ಘಾಟನೆಗೆ ನನ್ನನ್ನೂ ಆಹ್ವಾನಿಸಿದ್ದ. ಸಾಲ ಮಾಡಿಕೊಂಡು ಲಕ್ಷಾಂತರ ರೂಪಾಯಿಗಳ ಹೊಸ ಉಪಕರಣಗಳನ್ನು ಖರೀದಿಸಿದರೂ ಅವೆಲ್ಲವನ್ನೂ ತಾನು ತೀರಿಸಬಲ್ಲೆ ಎಂಬ ಆತ್ಮವಿಶ್ವಾಸ ಆತನಲ್ಲಿ ಅಂದು ನಾನು ಕಂಡಿದ್ದೆ. ಇದಾದ ನಂತರ ಕಳೆದ ವರ್ಷ ಮತ್ತೆ ಆತನ ಜಿಮ್ೆ ಭೇಟಿ ನೀಡಿದಾಗ ಉಪಕರಣಗಳು ಅವೇ ಇದ್ದರೂ ಮೂಲೆಯಲ್ಲಿ ದೊಡ್ಡದೊಂದು ಕಪಾಟಿನ ತುಂಬ ಪೋ›ಟೀನ್ ಉತ್ಪನ್ನಗಳ ದೊಡ್ಡ ಡಬ್ಬಗಳನ್ನು ಕಂಡೆ. ವಿಚಾರಿಸಿದಾಗ ಜಿಮ್ಳಲ್ಲಿ ಉಪಕರಣಗಳಷ್ಟೇ ಪೋ›ಟೀನ್ ಸಪ್ಲಿಮೆಂಟ್​ಗಳನ್ನು ತಂದು ಮಾರಾಟಕ್ಕಿಡುವುದನ್ನು ಗ್ರಾಹಕರು ನಿರೀಕ್ಷಿಸುತ್ತಾರೆ ಎಂದು ಆತ ಹೇಳಿದ.

blank

ಇದು ಹೇಳಿಕೇಳಿ ಬಯೋ ಹ್ಯಾಕಿಂಗ್ ಜಮಾನಾ. ಸರಳವಾಗಿ ಹೇಳುವುದಾದರೆ ನಾವು ನಮ್ಮ ಆರೋಗ್ಯದ ಕುರಿತು ವೈದ್ಯರ ಸಲಹೆ ಮೇರೆಗೆ ಔಷಧ ಸೇವಿಸುತ್ತ ವ್ಯಾಯಾಮದಂಥ ಚಟುವಟಿಕೆಗಳನ್ನು ಮಾಡುವುದು ವೈದ್ಯಕೀಯ ಪದ್ಧತಿಯಾದರೆ ತಮ್ಮ ದೇಹಪ್ರಕೃತಿಯ ಕುರಿತು ಅತ್ಯಾಧುನಿಕ ಇಲೆಕ್ಟ್ರಾನಿಕ್ ಗ್ಯಾಜೆಟ್​ಗಳನ್ನು ಬಳಸುತ್ತ ಇಂಟರನೆಟ್ ಮೂಲಕ ಪರಿಣತರೆನ್ನಿಸಿಕೊಂಡವರ ವಿಡಿಯೋ, ಉಪನ್ಯಾಸಗಳನ್ನು ಕೇಳಿ ಅವುಗಳನ್ನು ಅನುಸರಿಸುತ್ತ ತಮ್ಮ ದೇಹವನ್ನು ಹೆಚ್ಚು ಹೆಚ್ಚು ಅರಿತುಕೊಂಡು ತಮಗೆ ತಾವೇ ವೈದ್ಯರಾಗುವುದು ಬಯೋ ಹ್ಯಾಕಿಂಗ್. ಇದರ ಪರಿಣಾಮವೇ ಕಳೆದ ಕೆಲವು ವರ್ಷಗಳಲ್ಲಿ ಇದುವರೆಗೆ ಕೇಳರಿಯದ ಮಧ್ಯಂತರ ಉಪವಾಸ ಅಂದರೆ ಇಂಟರ್ವಿುಟ್ಟೆಂಟ್ ಫಾಸ್ಟಿಂಗ್, ಐಸ್​ಬಾತ್, ಬುಲ್ಲೆಟ್ ಕಾಫಿಯಂತಹ ಹೊಸ ಹೊಸ ವಿಷಯಗಳನ್ನು ನಾವಿಂದು ಕೇಳುತ್ತಿದ್ದೇವೆ. ಈ ಕ್ರೇಜ್ ಮೊದಲು ನಗರಕೇಂದ್ರಿತವಾಗಿತ್ತಾದರೂ ಇದೀಗ ಎಲ್ಲೆಡೆ ಹಬ್ಬುತ್ತಿದೆ. ಚಿಕ್ಕ ಚಿಕ್ಕ ಊರುಗಳಲ್ಲಿಯೂ ತಮ್ಮ ದೇಹದ ಸಕ್ಕರೆಯ ಪ್ರಮಾಣ, ಬಿಪಿಯಂತಹ ನಿಯತಾಂಕಗಳನ್ನು ಹೇಳುವ, ಅವುಗಳ ಮೇಲೆ ನಿಗಾ ಇಡುವ ಇಲೆಕ್ಟ್ರಾನಿಕ್ ಉಪಕರಣಗಳನ್ನು, ಆಪ್​ಗಳನ್ನು ಬಳಸುತ್ತಿರುವ ಜನರ ಸಂಖ್ಯೆಯಲ್ಲಾಗುತ್ತಿರುವ ಏರುಗತಿಯೇ ಈ ಬಯೋ ಹ್ಯಾಕಿಂಗ್​ನ ಜನಪ್ರಿಯತೆ ಹರಡುತ್ತಿರುವ ಪರಿಯನ್ನು ಸಾರಿ ಹೇಳುತ್ತವೆ.

ಬಯೋ ಹ್ಯಾಕಿಂಗ್ ಹೊಸದಲ್ಲವಾದರೂ ಅದು ಹೆಚ್ಚು ವೇಗ ಪಡೆದದ್ದು ಕೋವಿಡ್ ನಂತರದ ದಿನಗಳಲ್ಲಿ. ಚಟುವಟಿಕೆಗಳಿಲ್ಲದೆ ಮನೆಯಲ್ಲೇ ಹೆಚ್ಚು ಕಾಲ ಕಳೆದ ಜನ ಆ ನಂತರದ ದಿನಗಳಲ್ಲಿ ಆರೋಗ್ಯದ ಕಡೆ ಹೆಚ್ಚು ಲಕ್ಷ ್ಯ ವಹಿಸತೊಡಗಿದ್ದು ನಾವೆಲ್ಲ ಗಮನಿಸಿದ ಸಂಗತಿ. ಇದರ ಮುಂದುವರಿದ ಅಧ್ಯಾಯವಾಗಿ ಆರೋಗ್ಯದ ಕುರಿತು ಮಾರ್ಗದರ್ಶನ ನೀಡುವ ವೆಬ್​ಸೈಟ್​ಗಳು, ಗಂಟೆಗಟ್ಟಲೇ ಉಪನ್ಯಾಸ ನೀಡುವ ಆನ್​ಲೈನ್ ಆರೋಗ್ಯ ಗುರುಗಳು ಹುಟ್ಟಿಕೊಂಡರು. ಅದರಲ್ಲಿ ಏನೂ ತಪ್ಪಿಲ್ಲ ಬಿಡಿ. ಅಷ್ಟಕ್ಕೂ ವ್ಯಾಪಾರವೆಂದರೆ ಗ್ರಾಹಕರ ಇಚ್ಛೆಯನ್ನು ಪೂರೈಸುವುದು ತಾನೇ. ಇದೇ ಸಮಯದಲ್ಲಿ ಆರೋಗ್ಯದ ಮೇಲೆ ನಿಗಾ ಇಡುವ ಬ್ಯಾಂಡ್​ಗಳು, ಧರಿಸಬಹುದಾದಂಥ ಇಲೆಕ್ಟ್ರಾನಿಕ್ ಉಪಕರಣಗಳೂ ಮಾರುಕಟ್ಟೆಗೆ ಲಗ್ಗೆ ಇಟ್ಟವು. ಪೈಪೋಟಿಯ ಇಂದಿನ ಜಮಾನಾದಲ್ಲಿ ಇವುಗಳ ದರಗಳೂ ಸಾಮಾನ್ಯರಿಗೆ ಎಟಕುವಂತಾಗಿದ್ದು ಇವುಗಳ ಜನಪ್ರಿಯತೆಗೆ ಮತ್ತೊಂದು ಪ್ರಮುಖ ಕಾರಣ. ಯಾವುದೋ ದೇಶದ ಅಂಗಡಿಯ ಮೂಲೆಯಲ್ಲಿ ತೆಪ್ಪಗೆ ಮಲಗಿದ್ದ ಬ್ರೋಕೋಲಿಯಂಥ ನಾವೆಂದೂ ಕೇಳದ ತರಕಾರಿಗಳು ಈ ಟ್ರೆಂಡ್ ಪರಿಣಾಮವಾಗಿ ಆರೋಗ್ಯಕರವೆಂಬ ಹಣೆಪಟ್ಟಿ ಹಚ್ಚಿಕೊಂಡು ನಮ್ಮ ಅಂಗಡಿಯ ಮುಂದಿನ ಸಾಲಿನಲ್ಲಿ ಬಂದು ಕುಳಿತವು. ಜೊತೆಗೆ ಬಂದಿದ್ದು ದೇಹವನ್ನು ಸದೃಢವಾಗಿರಿಸುವ ಪೇಯಗಳು, ಸಪಿ್ಲಮೆಂಟ್​ಗಳು. ಹೀಗೆ ಬಯೋ ಹ್ಯಾಕಿಂಗ್​ನ ಮಾರುಕಟ್ಟೆ ವಿಸ್ತಾರವಾಗುತ್ತ ಹೋಯಿತು.

ಜನರಲ್ಲಿ ಕಂಡುಬರುತ್ತಿರುವ ಈ ಹೊಸ ಆರೋಗ್ಯ ಜಾಗೃತಿಯನ್ನು ಎನ್​ಕ್ಯಾಶ್ ಮಾಡಿಕೊಳ್ಳಲು ಇದೀಗ ಸಿದ್ಧಆಹಾರ ತಯಾರಿಕಾ ಕಂಪನಿಗಳು ಫೀಲ್ಡಿಗೆ ಎಂಟ್ರಿ ಕೊಟ್ಟಿವೆ. ಕೆಲ ದಿನಗಳ ಹಿಂದೆ ಭಾರತದ ಪ್ರತಿಷ್ಠಿತ ಐಸ್ಕ್ರೀಂ ಕಂಪನಿಯೊಂದು ಹೆಚ್ಚಿನ ಪೋ›ಟೀನ್​ಯುುಕ್ತ ಕುಲ್ಪಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಇತ್ತೀಚೆಗೆ ಇದೇ ಕಂಪನಿ ಮಾರುಕಟ್ಟೆಗೆ ಪರಿಚಯಿಸಿದ ಪೋ›ಟೀನ್​ಯುುಕ್ತ ಲಸ್ಸಿ, ಮೊಸರು, ಮಜ್ಜಿಗೆ, ಪನೀರ್​ಗಳ ಪಟ್ಟಿಗೆ ನೂತನ ಸೇರ್ಪಡೆ. ಹಾಗೆಂದ ಮಾತ್ರಕ್ಕೆ ಇದು ಈ ಕಂಪನಿಯೇ ಆರಂಭಿಸಿದ ಹೊಸ ಟ್ರೆಂಡ್ ಏನಲ್ಲ. ಈಗಾಗಲೇ ಪ್ರಮುಖ ಬಿಸ್ಕತ್ತು ತಯಾರಿಕಾ ಕಂಪನಿಯೊಂದು ಹೆಚ್ಚಿನ ಪೋ›ಟೀನ್ ಉಳ್ಳ ಬಿಸ್ಕತ್ತುಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಯಶಸ್ಸನ್ನು ಕಂಡಿದೆ. ಅಷ್ಟಕ್ಕೂ ಈ ಹೊಸ ಪೋ›ಟೀನ್ ಹುಚ್ಚು ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಈ ಹೊಸ ಟ್ರೆಂಡ್​ನ್ನು ವಿಶ್ಲೇಷಕರು ಗಮನಿಸಿದ್ದಾರೆ. ಅಷ್ಟಕ್ಕೂ ಇದ್ದಕ್ಕಿದ್ದಂತೆಯೇ ಈ ಪೋ›ಟೀನಿನ ನಸೀಬು ಖುಲಾಯಿಸಲು ಕಾರಣವೇನು. ಯಾಕಿದು ಪೋ›ಟೀನ್ ಕ್ರೇಜ್ ನೋಡೋಣ.

ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ವಯಸ್ಕರಿಗೆ ಪ್ರತಿದಿನ ಅರವತ್ತು ಗ್ರಾಂ ಪೋ›ಟೀನಿನ ಅವಶ್ಯಕತೆಯಿದೆ ಎಂದು ಗೊತ್ತುಮಾಡಿದೆ. ಆದರೆ ಆ ಸಂಸ್ಥೆಯೇ ನಡೆಸಿದ ಗಣತಿಯ ಪ್ರಕಾರ ನಗರವಾಸಿ ಭಾರತೀಯನೊಬ್ಬ ದಿನಕ್ಕೆ ಸರಾಸರಿ ಮೂವತ್ತೇಳು ಗ್ರಾಂ ಪೋ›ಟೀನನ್ನು ಸೇವಿಸುತ್ತಾನೆ. ಇದರ ಕಾರಣ ಕಡಿಮೆ ತೂಕ, ಅಪೌಷ್ಟಿಕತೆಯಂತಹ ತೊಂದರೆಗಳು ಭಾರತೀಯರಲ್ಲಿ ಕಂಡುಬರುತ್ತಿವೆ. ಇದರ ಪ್ರಮಾಣ ಮಕ್ಕಳು ಮತ್ತು ಮಹಿಳೆಯರಲ್ಲಿ ಸ್ವಲ್ಪ ಜಾಸ್ತಿಯೇ ಇದ್ದು, ಈ ನಿಟ್ಟಿನಲ್ಲಿ ಸರ್ಕಾರಗಳು ಜಾರಿಗೆ ತಂದ ಕೆಲ ಕಾರ್ಯಕ್ರಮಗಳ ಪರಿಣಾಮ ಸ್ವಲ್ಪಮಟ್ಟಿಗಿನ ಚೇತರಿಕೆ ಕಂಡುಬರುತ್ತಿದ್ದರೂ ಸಾಧಿಸುವುದು ಬಹಳಷ್ಟಿದೆ. ಪೋ›ಟೀನ್ ಕೊರತೆಯ ಇನ್ನೊಂದು ಮಜಲೂ ಇದೆ. ಈ ತೊಂದರೆ ಇದ್ದ ಕೆಲವರು ನೋಡಲು ಆರೋಗ್ಯವಂತರಂತೇ ಕಂಡರೂ ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಮತ್ತು ಸ್ನಾಯು ಸಂಬಂದಿ ತೊಂದರೆಗಳು ಕಂಡುಬರುವ ಸಾಧ್ಯತೆ ಹೆಚ್ಚು. ಹೀಗಾಗಿ ಸರ್ಕಾರಿ ಸಂಸ್ಥೆಗಳೂ ಸೇರಿ ಎಲ್ಲ ಸಂಘಸಂಸ್ಥೆಗಳು, ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿಯನ್ನು ಮೂಡಿಸಲು ಪ್ರಯತ್ನಿಸುತ್ತಿವೆ. ಈ ಎಲ್ಲ ಪ್ರಯತ್ನದ ಫಲವಾಗಿ ಸಾರ್ವಜನಿಕರಲ್ಲಿ ಪೋ›ಟೀನ್ ಕುರಿತು ಹೆಚ್ಚುತ್ತಿರುವ ಅರಿವನ್ನು ಗಮನಿಸಿದ ಸಿದ್ಧಆಹಾರ ತಯಾರಿಕಾ ಕಂಪನಿಗಳು ಅಲ್ಲಿ ವ್ಯಾಪಾರಿ ಸಾಧ್ಯತೆಯನ್ನು ಕಂಡಿರುವ ಪರಿಣಾಮವೇ ಇದೀಗ ಎಲ್ಲ ಉತ್ಪನ್ನಗಳೂ ಹೆಚ್ಚಿನ ಪೋ›ಟೀನ್ ಎಂಬ ಹೊಸ ಅಂಗಿಯನ್ನು ತೊಟ್ಟು ಮಾರುಕಟ್ಟೆಗೆ ಇಳಿದಿವೆ. ಹೆಚ್ಚುಕಮ್ಮಿ ಈ ಎಲ್ಲ ಉತ್ಪನ್ನಗಳೂ ಪೋ›ಟೀನ್ ಜೊತೆಗೆ ತಮ್ಮ ದರವನ್ನೂ ಒಂದು ಸುತ್ತು ಏರಿಸಿಕೊಂಡಿರುವುದು ಇಲ್ಲಿ ಗಮನಿಸಬೇಕಾಗಿರುವ ಸಂಗತಿ.

ಅಷ್ಟಕ್ಕೂ ಈ ಹೆಚ್ಚಿನ ಪೋ›ಟೀನ್​ಯುುಕ್ತ ಸಿದ್ಧ ಆಹಾರಗಳು ಭಾರತೀಯರ ಪೋ›ಟೀನ್ ಖೋತಾವನ್ನು ಸರಿತೂಗಿಸಬಲ್ಲವೇ ಅನ್ನೋದೊಂದು ಯಕ್ಷಪ್ರಶ್ನೆ. ಆಹಾರ ತಜ್ಞರು ಹೇಳುವ ಪ್ರಕಾರ, ಭಾರತೀಯರಲ್ಲಿ ಪೋ›ಟೀನ್ ಕೊರತೆ ಕಾಣಿಸಿಕೊಳ್ಳುವುದಕ್ಕೆ ಒಂದು ಪ್ರಮುಖ ಕಾರಣವೆಂದರೆ ನಮ್ಮ ತಲಾದಾಯ. ಹೆಚ್ಚಿನ ಪೋ›ಟೀನ್ ಹೊಂದಿರುವ ಆಹಾರ ಪದಾರ್ಥಗಳು ಸಾಮಾನ್ಯವಾಗಿ ತುಟ್ಟಿಯಾಗಿರುವ ಕಾರಣಕ್ಕೆ ನಮ್ಮಲ್ಲಿ ಸೋವಿಯಾಗಿರುವ ಪಿಷ್ಟ ಮತ್ತು ಕಾಬೋಹೈಡ್ರೇಟ್​ಗಳನ್ನು ಹೊಂದಿರುವ ಆಹಾರ ಪದಾರ್ಥಗಳನ್ನೇ ಬಳಸುವುದು ಹೆಚ್ಚು. ಆದರೆ ಇದೀಗ ಪರಿಸ್ಥಿತಿ ಬದಲಾಗುತ್ತಿದ್ದು ಸಾಮಾನ್ಯ ಭಾರತೀಯನ ತಲಾದಾಯ ಏರಿಕೆ ಕಾಣುತ್ತಿದೆ. ಆತ ತನ್ನಿಷ್ಟದ ಆಹಾರವನ್ನು ಖರೀದಿಸಿ ಸೇವಿಸತೊಡಗಿದ್ದಾನೆ. ವಿಷಯ ಇರೋದು ಇಲ್ಲಿ.

ಊಟ ಮತ್ತು ತಿಂಡಿಯ ವಿಷಯ ಬಂದಾಗ ನಾವು ಭಾರತೀಯರು ಕೊಂಚ ಸಂಪ್ರದಾಯಸ್ಥರೇ. ನಮ್ಮ ಕಂಫರ್ಟ್ ಜೋನ್ ಬಿಟ್ಟು ಬರುವುದು ಸ್ವಲ್ಪ ಕಡಿಮೆಯೇ. ನಾವು ಆಗಾಗ ಈ ಲಕ್ಷ ್ಮರೇಖೆಯನ್ನು ದಾಟುವುದು ಬಾಯಿ ಚಪ್ಪರಿಸುವ ಖಾದ್ಯಗಳ ವಿಷಯದಲ್ಲಿ ಮಾತ್ರ. ಉದಾಹರಣೆಗೆ ಪೋ›ಟೀನ್​ಯುುಕ್ತ ಆಹಾರವನ್ನು ಸೇವಿಸಬೇಕು ಎಂಬ ಅರಿವಿರುವ ಜನಸಾಮಾನ್ಯನೊಬ್ಬ ಆರು ಮೊಟ್ಟೆ ಮತ್ತು ಹೆಚ್ಚು ಪೋ›ಟೀನ್ ಹೊಂದಿರುವ ಪಿಜ್ಜಾ ನಡುವೆ ಆಯ್ಕೆ ಕೊಟ್ಟಾಗ ಆತ ಆಯ್ಕೆ ಮಾಡುವುದು ಪಿಜ್ಜಾವನ್ನೇ. ಜನರ ಈ ಮನೋಸ್ಥಿತಿಯ ಅರಿವಿರುವ ಖಾದ್ಯ ತಯಾರಿಕಾ ಕಂಪನಿಗಳು ಇಂತಹ ಚಿಪ್ಸ್, ಜ್ಯೂಸ್, ಮಿಲ್ಕ್ಶೇಕ್, ಪಿಜ್ಜಾಗಳಂತಹ ಕುರುಕಲು ತಿಂಡಿಗಳಿಗೆ ಹೆಚ್ಚುವರಿ ಪೋ›ಟೀನ್ನಿನ ಒಗ್ಗರಣೆ ಹಾಕಿ ಮಾರುಕಟ್ಟೆಗೆ ಮರುಪರಿಚಯಿಸುತ್ತಿವೆ. ಇದೀಗ ಹೆಚ್ಚು ಕೊಳ್ಳುವ ಶಕ್ತಿ ಹೊಂದಿರುವ ಗ್ರಾಹಕರು ಇದಕ್ಕೆ ಹೆಚ್ಚು ಬೆಲೆ ತೆತ್ತು ಬಾಯಿಚಪ್ಪರಿಸುತ್ತ ಅಧಿಕ ಪೋ›ಟೀನ್ ಜೀರ್ಣಿಸಿರುವ ಸಂತೃಪ್ತಿಯೊಂದಿಗೆ ನಿರುಮ್ಮಳವಾಗುತ್ತಿದ್ದಾರೆ.

ಇದೆಲ್ಲ ಓಕೆ. ಆದರೆ ಈ ಕುರುಕಲುಗಳಿಂದ ಭಾರತದ ಪೋ›ಟೀನ್ ಕೊರತೆ ನೀಗಲಿದೆಯೇ? ಈ ಕುಲ್ಪಿಯ ಲೆಕ್ಕಾಚಾರವನ್ನೇ ತೆಗೆದುಕೊಳ್ಳೋಣ. ಅರವತ್ತು ಗ್ರಾಂ ತೂಕದ ಈ ಕುಲ್ಪಿ ಹೊಂದಿರುವುದು ಹತ್ತು ಗ್ರಾಂ ಪೋ›ಟೀನ್ . ಸಾಮಾನ್ಯ ಬಿಸ್ಕತ್ತು ಎರಡು ಗ್ರಾಂ ಪೋ›ಟೀನ್ ಹೊಂದಿದ್ದರೆ ಅಧಿಕ ಪೋ›ಟೀನ್ ಬಿಸ್ಕತ್ತು ಇದಕ್ಕಿಂತ ಒಂದು ಗ್ರಾಂ ಹೆಚ್ಚು ಪೋ›ಟೀನ್ ಹೊಂದಿರುತ್ತದೆ. ಬರಿ ಇವುಗಳಿಂದಲೇ ನಾವು ನಮ್ಮ ದಿನನಿತ್ಯದ ಗುರಿ ತಲುಪಬೇಕಾದಲ್ಲಿ ಪ್ರತಿದಿನ ಆರು ಕುಲ್ಪಿ ಅಥವಾ ಇಪ್ಪತ್ತು ಬಿಸ್ಕತ್ತನ್ನು ತಿನ್ನಬೇಕಾಗುತ್ತದೆ. ಇದು ಆಗಹೋಗದ ಮಾತು. ಆಹಾರತಜ್ಞರು ಹೇಳುವಂತೆ ನಮ್ಮ ಊಟದತಾಟಿನಲ್ಲಿ ತರಕಾರಿಗಳ ಜೊತೆಗೆ ಪೋ›ಟೀನ್ ಮೂಲವಾಗಿರುವ ಬೇಳೆಕಾಳುಗಳು, ಸೋಯಾ, ಪನೀರ್, ಹಾಲು, ಮೊಟ್ಟೆ, ಮೀನು, ಮಾಂಸಗಳನ್ನು ಸರಿಪ್ರಮಾಣದಲ್ಲಿ ನಿಯಮಿತವಾಗಿ ಬಳಸಿದರೆ ಅದಕ್ಕಿಂತ ಉತ್ತಮ ಉಪಾಹಾರ ಇನ್ನೊಂದಿಲ್ಲ. ಇನ್ನೂ ಸರಳವಾಗಿ ಹೇಳುವುದಾದಲ್ಲಿ ಒಬ್ಬ ಸಾಮಾನ್ಯ ಆರೋಗ್ಯವಂತನಿಗೆ ಪ್ರತಿದಿನ ಆತನ ಪ್ರತಿ ಕಿಲೋ ದೇಹತೂಕಕ್ಕೆ 1.2 ಗ್ರಾಂ ಹಾಗೂ ದೇಹದಂಡಿಸುವ ಬಾಡಿಬಿಲ್ಡರ್​ಗಳಿಗೆ 1.6 ಗ್ರಾಂ ಪೋ›ಟೀನ್ ಸೇವನೆ ಅವಶ್ಯ. ಈ ಗುರಿಯನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಸೂಕ್ತ ದವಸಧಾನ್ಯಗಳ ಬಳಕೆಯಿಂದಲೇ ತಲುಪಲು ಸಾಧ್ಯ. ಇದರ ಮೇಲೆ ಬೇಕಾದರೆ ಬಾಯಿಚಪಲಕ್ಕೆ ಕುಲ್ಪಿ ಚಪ್ಪರಿಸೋಣ ಬಿಡಿ.

(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)

Share This Article
blank

ನೀವು ತುಂಬಾ ಚಹಾ ಕುಡಿಯುತ್ತಿದ್ದೀರಾ? tea ರಕ್ತಹೀನತೆ, ನಿದ್ರಾಹೀನತೆ ಮಾತ್ರವಲ್ಲ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ..

tea: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ದಿನವನ್ನು ಪ್ರಾರಂಭಿಸಲು ಒಂದು ಕಪ್ ಚಹಾ ಕುಡಿಯುವುದು ಅತ್ಯಗತ್ಯ.…

ಸೇಬು ತಿಂದ ನಂತರ ಈ ಆಹಾರಗಳನ್ನು ಸೇವಿಸಬೇಡಿ..ಹಾಗೇನಾದರೂ ಮಾಡಿದರೆ ಅಪಾಯ ಖಂಡಿತ!Apple

Apple: ಸೇಬುಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಆದರೆ ಸೇಬನ್ನು ತಿಂದ ನಂತರ ಜೀರ್ಣಿಸಿಕೊಳ್ಳಲು 30 ರಿಂದ 40…

blank