ದೇಹದೊಳಗೆಲ್ಲ ಕಹಿ ಕಹಿ ಅನುಭವ!

| ಡಾ. ವಸುಂಧರಾ ಭೂಪತಿ

ನನ್ನ ವಯಸ್ಸು 72. ಸುಮಾರು ವರ್ಷಗಳಿಂದ ಆಸಿಡಿಟಿ ತೊಂದರೆ ಇದೆ. ಕೆಳಹೊಟ್ಟೆಯ ಎಡಭಾಗ-ಹಿಂಬದಿಯಲ್ಲಿ ಒತ್ತಿದಂತೆ (ಉಂಡೆ ಓಡಾಡಿದಂತೆ) ಎಡಗಾಲು ಪಾದದವರೆಗೂ ಎಳೆತ, ನೋವು. ತಪಾಸಣೆ ಮಾಡಿಸಿದೆ. ಡಯಾಜಿನ್, ಆಯುರ್ವೆದದ ಆಮ್ಲಪಿತ್ತ ಮಿಶ್ರಣ ತೆಗೆದುಕೊಳ್ಳುತ್ತಿದ್ದೇನೆ. ಖಾರ, ಕಾಫಿ, ಟೀ ಸೇವನೆ ಮಾಡೋದಿಲ್ಲ. ಕಳೆದ ತಿಂಗಳಿನಲ್ಲಿ ಸೈನಸ್ ತೊಂದರೆ ಆಗಿತ್ತು. ಔಷಧ ತೆಗೆದುಕೊಳ್ಳಬೇಕಾಯಿತು. ಅದು ಕಡಿಮೆ ಆದ ನಂತರ ಶರೀರದೊಳಗೆಲ್ಲ ಕಹಿ ಕಹಿ ಅನುಭವ. ಗಂಟಲಿನಲ್ಲಿ, ಬಾಯಿ, ಮೂಗಿನಲ್ಲಿ ಕಹಿರಸ. ಏನು ತಿಂದರೂ ಸಮಾಧಾನವಿಲ್ಲ. ಊಟ ಜೀರ್ಣವಾಗುವುದಿಲ್ಲ. ಬಿಪಿ, ಶುಗರ್ ತೊಂದರೆ ಇಲ್ಲ. ಎಡಭುಜ, ಕುತ್ತಿಗೆ, ಕಾಲುನೋವು ಇತ್ಯಾದಿ ತೊಂದರೆಗಳಿವೆ. ಬಾಯಿಂದ ಹೊಟ್ಟೆಯವರೆಗೆ ಈ ಕಹಿ ರುಚಿಯಿಂದ ತುಂಬ ಬಳಲುತ್ತಿದ್ದೇನೆ, ಇದಕ್ಕೊಂದು ಪರಿಹಾರ ತಿಳಿಸಿ.

| ಕಮಲಮ್ಮ ದಾವಣಗೆರೆ

ನೀವು ಜೀರಕಾದ್ಯರಿಷ್ಟವನ್ನು ದಿನಕ್ಕೆರಡು ಬಾರಿ ಮೂರು ಚಮಚೆಯಷ್ಟನ್ನು ನೀರು ಬೆರೆಸಿ ಊಟದ ನಂತರ ಸೇವಿಸಿ. ಕಹಿಯ ರುಚಿ ಹೋಗಲು ಜೀರಿಗೆ, ಬೆಲ್ಲವನ್ನು ಕುಟ್ಟಿ ಚಿಕ್ಕ ಮಾತ್ರೆಯಂತೆ ತಯಾರಿಸಿ ಆಗಾಗ ಬಾಯಿಗೆ ಹಾಕಿ ಚಪ್ಪರಿಸುತ್ತಿರಿ. ನೀರನ್ನು ಕಾಯಿಸಿ ಕುಡಿಯಿರಿ. ಕುದಿಸುವಾಗ ಚಿಕ್ಕ ಶುಂಠಿ ತುಂಡು ಹಾಕಿ. ಅವಿಪತ್ತಿಕರ ಚೂರ್ಣವನ್ನು ಒಂದು ಚಮಚೆಯಷ್ಟನ್ನು ಬೆಚ್ಚಗಿನ ನೀರಿಗೆ ಬೆರೆಸಿ ಊಟಕ್ಕೆ ಮುಂಚೆ ಸೇವಿಸಿ. ಬೆಲ್ಲ ಹಾಕಿ ತಯಾರಿಸಿದ ಹೆಸರುಬೇಳೆ ಪಾಯಸ, ರವೆ ಪಾಯಸವನ್ನು ದಿನಕ್ಕೊಮ್ಮೆ ಸೇವಿಸಿ. ಪಪ್ಪಾಯ, ಬಾಳೆಹಣ್ಣು, ಸೌತೆಕಾಯಿ, ಕ್ಯಾರೆಟ್​ಗಳನ್ನು ಸೇವಿಸಬಹುದು.

ನನಗೆ 34 ವರ್ಷ. ಕಳೆದ ಒಂದು ವರ್ಷದಿಂದ ಫಂಗಸ್ ಇನ್​ಫೆಕ್ಷನ್ ಆಗಿದೆ. ಬೆನ್ನು, ತೊಡೆ ಸಂದಿಯಲ್ಲಿ ಆಗಿದೆ. ಒಂದು ವರ್ಷ ಹೋಮಿಯೋಪಥಿ ಚಿಕಿತ್ಸೆ ಪಡೆದೆ. ಸ್ವಲ್ಪ ವಾಸಿಯಾಗಿದ್ದು, ಪೂರ್ತಿ ಹೋಗಿಲ್ಲ. ಇದಕ್ಕೆ ದಯಮಾಡಿ ಪರಿಹಾರ ಹೇಳಿ. ಈ ಕಾಯಿಲೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತೆಯಾ ತಿಳಿಸಿ.

| ಹೆಸರು, ಊರು ಬೇಡ

ಫಂಗಸ್ ಆಗಿರುವ ಭಾಗಕ್ಕೆ ಮಧುಯಷ್ಟಿ ತೈಲ ಮತ್ತು ಬೇವಿನ ಎಣ್ಣೆಯ ಸಮಭಾಗ ಬೆರೆಸಿ ಲೇಪಿಸಿ. ಬೇವಿನೆಲೆ ಪುಡಿ, ಚಂದನ, ಗುಲಾಬಿ ದಳಗಳ ಪುಡಿ, ಮೆಂತ್ಯ ಪುಡಿ, ನೆಲ್ಲಿಕಾಯಿ ಪುಡಿ ಸಮಭಾಗ ಬೆರೆಸಿಟ್ಟುಕೊಂಡು ಸ್ನಾನದ ನಂತರ ಸಿಂಪಡಿಸಿಕೊಳ್ಳಬೇಕು. ಮಹಾಮಂಜಿಷ್ಟಾದಿ ಕಷಾಯವನ್ನು ದಿನಕ್ಕೆರಡು ಬಾರಿ ಮೂರು ಚಮಚೆಯಷ್ಟನ್ನು ನೀರು ಬೆರೆಸಿ ಊಟದ ನಂತರ ಸೇವಿಸಿ. ನೀವು ಧರಿಸುವ ಒಳ ಉಡುಪನ್ನು ಬಿಸಿನೀರಿನಲ್ಲಿ ಒಗೆದು ಬಿಸಿಲಿನಲ್ಲಿ ಒಣಗಿಸಿ ಇಲ್ಲವೇ ಇಸ್ತ್ರಿ ಮಾಡಿ ಧರಿಸಿ.

ನನ್ನ ವಯಸ್ಸು 61. 9 ವರ್ಷಗಳಿಂದ ರಕ್ತಮೂಲವ್ಯಾಧಿಯಿಂದ ಬಳಲುತ್ತಿದ್ದೇನೆ. ಮೊದಲು ರಕ್ತ ಬೀಳುತ್ತಿತ್ತು. ಈಗ ಉಟುರು ಮತ್ತು ಕೀವು ಸೋರುತ್ತವೆ. ಎರಡು ಸಲ ಆಪರೇಷನ್ ಮಾಡಿಸಿದ್ದೇನೆ. ಆದರೂ ಕಡಿಮೆಯಾಗಿಲ್ಲ. ಮತ್ತೆ 6 ಗಂಟುಗಳಾಗಿವೆ. ದೇಹ ನಿತ್ರಾಣವಾಗಿದೆ. ಚಿಂತೆಯೂ ಬಿಟ್ಟುಬಿಡದೆ ಕಾಡುತ್ತಿದೆ. ದಯಮಾಡಿ ಸಲಹೆ ನೀಡಿ.

| ಶ್ರೀಮಂತ ಸಿಂದಗಿ ವಿಜಯಪುರ

ನಿಮಗೆ ಫಿಸ್ತುಲಾ ಸಮಸ್ಯೆ ಇರಬಹುದು. ಮೂಲವ್ಯಾಧಿಯೊಡನೆ ಫಿಸ್ತುಲಾ ಕೂಡ ಆಗಿರುತ್ತದೆ. ಅದು ಸೋಂಕಾದಾಗಲೆಲ್ಲ ಕೀವು ಬರುತ್ತದೆ. ಆದ್ದರಿಂದ ಅದಕ್ಕೆ ಕ್ಷಾರಸೂತ್ರ ಚಿಕಿತ್ಸೆ ಉತ್ತಮವಾದುದು. ಔಷಧವನ್ನು ಆ ಜಾಗದಲ್ಲಿರಿಸಿ ನಂತರ ಆಗಾಗ ಬದಲಾಯಿಸಿ ಮಾಯುವಂತೆ ಮಾಡಲಾಗುತ್ತದೆ. ಒಮ್ಮೆ ನೀವು ನಿಮ್ಮ ಹತ್ತಿರದ ಚಿಕಿತ್ಸೆ ಲಭ್ಯವಿರುವ ಆಯುರ್ವೆದ ಆಸ್ಪತ್ರೆಗೆ ಭೇಟಿ ಕೊಟ್ಟು ಚಿಕಿತ್ಸೆ ಪಡೆಯಿರಿ.

Leave a Reply

Your email address will not be published. Required fields are marked *