ನೂರು ಕೋಟಿ ರೂ. ಕ್ಲಬ್​ನತ್ತ ವಿಲನ್!

ಬೆಂಗಳೂರು: ಶಿವರಾಜ್​ಕುಮಾರ್-ಸುದೀಪ್ ಅಭಿನಯದ ‘ದಿ ವಿಲನ್’ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ನಾಗಾಲೋಟ ಮುಂದುವರಿಸಿದೆ. ಸ್ಯಾಂಡಲ್​ವುಡ್ ಮಟ್ಟಿಗೆ ಹೊಸದೊಂದು ದಾಖಲೆಯನ್ನು ಬರೆದಿದೆ. ಚಿತ್ರ ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ 50 ಕೋಟಿ ರೂ.ಗಳಿಗೂ ಅಧಿಕ ಹಣ ಗಳಿಸಿದ್ದು, ನಿರ್ಮಾಪಕರಿಗೆ 30 ಕೋಟಿ ರೂ. ಷೇರು ತಂದುಕೊಟ್ಟಿದೆ. ಅಷ್ಟೇ ಅಲ್ಲ, ಇನ್ನು ಕೆಲವೇ ದಿನಗಳಲ್ಲಿ 100 ಕೋಟಿ ರೂ. ಗಳಿಕೆ ಮಾಡಲಿದ್ದು, ಶತಕೋಟಿ ಕ್ಲಬ್​ಗೆ ಸೇರಿದ ಮೊದಲ ಕನ್ನಡ ಸಿನಿಮಾ ಎಂಬ ಖ್ಯಾತಿಯೂ ‘ವಿಲನ್’ಗೆ ಸಿಗಲಿದೆ ಎಂಬುದು ಚಿತ್ರತಂಡದ ಭರವಸೆಯ ಮಾತು.

‘ನಾಲ್ಕು ದಿನಗಳಿಗೆ ನಿರ್ವಪಕರ ಪಾಲಿಗೆ 30 ಕೋಟಿ ರೂ. ಸಿಕ್ಕಿದೆ. ಗುರುವಾರದಿಂದ ಭಾನುವಾರದವರೆಗೆ ರಜೆ ಇತ್ತು. ಹಾಗಾಗಿ, ಎಲ್ಲ ಕಡೆಗಳಲ್ಲೂ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಂಡಿದೆ. ಸೋಮವಾರದಿಂದ ಕಲೆಕ್ಷನ್ ಬಿದ್ದುಹೋಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ನಮ್ಮ ಸಿನಿಮಾ ಸೋಮವಾರವೂ ಎಂದಿನಂತೆ ಹೌಸ್​ಫುಲ್ ಪ್ರದರ್ಶನ ಮುಂದುವರಿಸಿದೆ. ಮುಂದಿನ ದಿನಗಳಲ್ಲೂ ಒಳ್ಳೆಯ ಕಲೆಕ್ಷನ್ ಆಗಲಿದೆ’ ಎನ್ನುತ್ತಾರೆ ನಿರ್ವಪಕ ಸಿ.ಆರ್. ಮನೋಹರ್. ಈ ಮೊದಲು ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಈ ಸಿನಿಮಾ ತೆರೆಕಾಣಲಿದೆ ಎಂದು ಹೇಳಲಾಗಿತ್ತು. ಅದರಲ್ಲೀಗ ಸಣ್ಣ ಬದಲಾವಣೆಯಾಗಿದ್ದು, ಸದ್ಯ ಕನ್ನಡ ವರ್ಷನ್ ಮಾತ್ರ ತೆರೆಕಂಡಿದೆ. ಮುಂದಿನ ದಿನಗಳಲ್ಲಿ ತಮಿಳು- ತೆಲುಗಿನಲ್ಲೂ ಸಿನಿಮಾ ರಿಲೀಸ್ ಆಗಲಿದೆಯಂತೆ.

ಆಡಿಕೊಂಡವರ ಮೇಲೆ ಅಬ್ಬರಿಸಿದ ಪ್ರೇಮ್

‘ದಿ ವಿಲನ್’ ಸಿನಿಮಾ ವೀಕ್ಷಿಸಿದ ಕೆಲವರು ನಿರ್ದೇಶಕ ‘ಜೋಗಿ’ ಪ್ರೇಮ್ ಮೇಲೆ ಮುಗಿಬಿದ್ದಿದ್ದರು. ಅವಾಚ್ಯ ಶಬ್ದಗಳಿಂದ ಬೈದು ವಿಡಿಯೋ ಮಾಡಿ ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಲಾಗಿತ್ತು. ಈ ಬಗ್ಗೆ ಬೇಸರಗೊಂಡಿರುವ ಪ್ರೇಮ್ ‘ಈ ರೀತಿ ವಿಡಿಯೋ ಮೂಲಕ ಅವಹೇಳನ ಮಾಡುವವರು ವಿಕೃತ ಮನಸ್ಥಿತಿಯುಳ್ಳವರು’ ಎಂದಿದ್ದಾರೆ. ಮಂಗಳವಾರ (ಅ.23) ಪೊಲೀಸ್ ಅಧಿಕಾರಿ ರವಿ ಚನ್ನಣ್ಣವರ್ ಅವರನ್ನು ಭೇಟಿ ಮಾಡಿದ್ದ ಪ್ರೇಮ್ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನ ಮಾಡಿರುವವರ ವಿರುದ್ಧ ದೂರು ನೀಡಿದ್ದಾರೆ. ‘9ಕ್ಕೂ ಅಧಿಕ ವಿಡಿಯೋಗಳನ್ನು ಪೊಲೀಸರಿಗೆ ನೀಡಿದ್ದೇನೆ. ಅದರಲ್ಲಿ ಮೂರು ಜನರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ. ಸಿನಿಮಾ ಬಗ್ಗೆ ಟೀಕೆ ಟಿಪ್ಪಣಿ ಏನೇ ಇದ್ದರೂ ಸ್ವೀಕರಿಸುತ್ತೇನೆ. ಆದರೆ, ವೈಯಕ್ತಿಕವಾಗಿ ತೇಜೋವಧೆ ಮಾಡಿರುವುದು ನನಗೆ ನೋವು ತಂದಿದೆ. ಕೆಲವರು ಲೈಕ್ಸ್, ಕಾಮೆಂಟ್ಸ್​ಗೋಸ್ಕರ ವಿಕೃತಿ ಮೆರೆಯುತ್ತಿದ್ದಾರೆ’ ಎಂದು ಪ್ರೇಮ್ ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಿನಿಮಾ ಮಾರುಕಟ್ಟೆಯ ವ್ಯಾಪ್ತಿ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಈ ಹಿಂದೆ ‘ಹೆಬ್ಬುಲಿ’ ಚಿತ್ರ ಕರ್ನಾಟಕದ ಹೊರಗೆ 28 ಸ್ಕ್ರೀನ್​ಗಳಲ್ಲಿ ಪ್ರದರ್ಶನ ಕಂಡಿತ್ತು. ‘ದಿ ವಿಲನ್’ ಚಿತ್ರ ಹೊರರಾಜ್ಯದ 70 ಕಡೆಗಳಲ್ಲಿ ಪ್ರದರ್ಶನವಾಗುತ್ತಿದೆ.

| ಜಾಕ್ ಮಂಜು ವಿತರಕ