ಆಸ್ಟ್ರೇಲಿಯಾದಲ್ಲಿ ಒಳ್ಳೇ ಹುದ್ದೆಯಲ್ಲಿದ್ದ ಇವರು ಮೋದಿಯನ್ನು ಗೆಲ್ಲಿಸಲು ಕೆಲಸಕ್ಕೇ ರಾಜೀನಾಮೆ ನೀಡಿ ಬಂದರು

ಮಂಗಳೂರು: ಸುರತ್ಕಲ್​ನ ನಿವಾಸಿ ಸುಧೀಂದ್ರ ಹೆಬ್ಬಾರ್​ ಎಂಬುವರು ಮೋದಿಯವರಿಗೆ ಮತಹಾಕಲು ಆಸ್ಟ್ರೇಲಿಯಾದಿಂದ ಬಂದಿದ್ದಾರೆ. ಅದರಲ್ಲೇನು ವಿಶೇಷ ಎನ್ನಬೇಡಿ, ಇವರು ಬಂದಿದ್ದು ಕೆಲಸಕ್ಕೆ ರಾಜೀನಾಮೆ ನೀಡಿ. ರಜೆ ಕೊಡದ ಕಂಪನಿಯನ್ನೇ ಬಿಟ್ಟು ಬಂದಿದ್ದಾರೆ.

ಸುಧೀಂದ್ರ ಹೆಬ್ಬಾರ್​ ಸಿಡ್ನಿ ಏರ್​ಪೋರ್ಟ್​ನಲ್ಲಿ ಏವಿಯೇಶನ್​ ಸ್ಕ್ರೀನಿಂಗ್​ ಅಧಿಕಾರಿಯಾಗಿದ್ದರು. ಚುನಾವಣೆಯಲ್ಲಿ ಮತ ಚಲಾಯಿಸಲು ರಜೆ ಕೇಳಿದ್ದರು. ಆದರೆ ಕಂಪನಿ ಏ.5ರಿಂದ 12ರವರೆಗೆ ಮಾತ್ರ ರಜೆ ನೀಡಿತ್ತು. ಆದರೆ ಮತದಾನ ಇರುವುದು ಏ.18ಕ್ಕೆ ಆಗಿರುವುದರಿಂದ ಅಂತಿಮವಾಗಿ ರಾಜೀನಾಮೆ ನೀಡಿ ಬಂದಿದ್ದಾರೆ.

ದಿಗ್ವಿಜಯ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ನಾನು ದೇಶಕ್ಕಾಗಿಯೇ ಕೆಲಸ ಬಿಟ್ಟು ಬಂದಿದ್ದೇನೆ. ನಮ್ಮ ದೇಶದ ಅಭಿವೃದ್ಧಿಗಾಗಿ ದಿನಕ್ಕೆ 18 ತಾಸು ಕೆಲಸ ಮಾಡುತ್ತಿರುವ ಮೋದಿಯವರಿಗೆ ಬೆಂಬಲ ನೀಡಿ ಗೆಲ್ಲಿಸುವುದೇ ಮುಖ್ಯವೆನಿಸಿತು. ಮೇ 23ರ ಮತ ಎಣಿಕೆಯ ಬಳಿಕ ವಾಪಸ್​ ಆಸ್ಟ್ರೇಲಿಯಾಕ್ಕೆ ಹೋಗಿ ಹೊಸ ಕೆಲಸ ಹುಡುಕುತ್ತೇನೆ ಎಂದಿದ್ದಾರೆ.

ಭಾರತ ಈಗ ಬದಲಾಗುತ್ತಿದೆ. ದುಬೈನಲ್ಲಿರುವ ನನ್ನ ಕೆಲವು ಸ್ನೇಹಿತರು ವಾಪಸ್​ ಭಾರತಕ್ಕೆ ಬರಲು ನಿರ್ಧರಿಸಿದ್ದಾರೆ. ಮೊದಲಿನಂತೆ ಹಿಂದುಳಿದಿಲ್ಲ. ಭಾರತಕ್ಕೆ ಒಳ್ಳೆ ಭವಿಷ್ಯವಿದೆ ಎಂದು ವಿದೇಶದಲ್ಲಿ ಹಲವರು ಹೇಳಿದ್ದನ್ನು ಕೇಳಿದ್ದೇನೆ. ತುಂಬ ಖುಷಿಯಾಗುತ್ತದೆ ಎಂದು ಹೇಳಿದ್ದಾರೆ.

ಕುಟುಂಬದವರಿಗೆ ನಾನು ಕೆಲಸ ಬಿಟ್ಟಿದ್ದರ ಬಗ್ಗೆ ಬೇಸರವಿದೆ. ಒಂದು ವೋಟಿಗಾಗಿ ಒಳ್ಳೆ ಜಾಬ್​ ಬಿಟ್ಟೆ ಎಂಬ ಅಸಮಾಧಾನವಿದೆ. 2014ರಲ್ಲೂ ನಾನು ಮತ ಹಾಕಿಯೇ ರಾತ್ರಿ ತೆರಳಿದ್ದೆ. ಈ ಕಂಪನಿ ತುಂಬ ಚೆನ್ನಾಗಿತ್ತು. ನಾನು ಈಗ ರಾಜೀನಾಮೆ ನೀಡುವ ಪರಿಸ್ಥಿತಿ ಬಾರದೆ ಇದ್ದಿದ್ದರೆ ತುಂಬ ಸಮಯಗಳ ಕಾಲ ಅಲ್ಲಿಯೇ ಮುಂದುವರಿಯುತ್ತಿದ್ದೆ. ಪ್ರತಿಯೊಬ್ಬರೂ ಮತದಾನ ಮಾಡಬೇಕು. ಅವರಿಷ್ಟದ ಅಭ್ಯರ್ಥಿಗೆ ವೋಟು ಹಾಕಲಿ. ಬರೀ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆ ಬಗ್ಗೆ ಪೋಸ್ಟ್ ಹಾಕದೆ ಮತದಾನ ಮಾಡಲು ಮುಂದಾಗಿ ಎಂದು ಕರೆ ನೀಡಿದ್ದಾರೆ.