ನವದೆಹಲಿ: ಹಲವಾರು ಬಾರಿ ಕೋವಿಡ್-19 ಪರೀಕ್ಷೆಗೆ ಒಳಗಾದ ಈತ 43 ಸಲ ಪಾಸಿಟಿವ್ ಎಂದಾಗಿದ್ದಾನೆ. ಮಾತ್ರವಲ್ಲ, ಏಳು ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮೊದಲ ಅಲೆಯಲ್ಲೇ ಕರೊನಾ ಸೋಂಕಿಗೆ ಒಳಗಾದ ಈತ ಎರಡನೇ ಅಲೆ ಬಂದರೂ ಸೋಂಕುಮುಕ್ತನಾಗಿರಲಿಲ್ಲ. ಒಟ್ಟಿನಲ್ಲಿ ಈತ ಜಗತ್ತಿನಲ್ಲೇ ಅತಿ ಹೆಚ್ಚು ಕಾಲ ಕೋವಿಡ್ನಿಂದ ಬಳಲಿದ ವ್ಯಕ್ತಿ.
ಹೀಗೆ ಅತಿಹೆಚ್ಚು ಕಾಲ ಕೋವಿಡ್ನಿಂದ ಬಳಲಿದ ಈ ಬ್ರಿಟಿಷ್ ವ್ಯಕ್ತಿಯ ಹೆಸರು ಡೇವ್ ಸ್ಮಿತ್. ಬ್ರಿಸ್ಟಲ್ನ 72 ವರ್ಷದ ಈತ ತನ್ನ ಪರಿಸ್ಥಿತಿ ಕುರಿತು ಹೀಗೆ ಹೇಳಿಕೊಂಡಿದ್ದಾನೆ. ಯಾವಾಗೆಲ್ಲ ನನ್ನ ಪರಿಸ್ಥಿತಿ ಗಂಭೀರವಾಗಿತ್ತೋ ಆಗೆಲ್ಲ ನಾನು ತೀರಾ ಚಿಂತಾಜನಕ ಸ್ಥಿತಿಗೆ ತಲುಪಿದ್ದೆ. ಎಷ್ಟೆಂದರೆ ಪ್ರತಿಸಲವೂ ಸಾವಿನ ಬಾಗಿಲನ್ನು ತಟ್ಟಿ ಬಂದಿದ್ದೇನೆ. ಎಷ್ಟರಮಟ್ಟಿಗೆ ಎಂದರೆ ಪತ್ನಿ ಐದು ಸಲ ನನ್ನ ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಳು ಎಂದು ತಮ್ಮ ಕೋವಿಡ್ ಅನುಭವ ಹೇಳಿಕೊಂಡಿದ್ದಾನೆ ಡೇವ್ ಸ್ಮಿತ್.
ಇದನ್ನೂ ಓದಿ: ಕರೊನಾ ಮೂರನೇ ಅಲೆಯನ್ನು ತಡೆಯಬಹುದಂತೆ!; ಅದಕ್ಕಾಗಿ ಏನು ಮಾಡಬೇಕು? ಇಲ್ಲಿದೆ ಮಾಹಿತಿ…
2019ರಲ್ಲಿ ಲ್ಯೂಕೇಮಿಯಾದಿಂದ ಬಳಲುತ್ತಿದ್ದ ನಾನು 2020ರ ಮಾರ್ಚ್ನಲ್ಲಿ ಕೋವಿಡ್ ಸೋಂಕಿಗೆ ಒಳಗಾದೆ. ಆದರೆ ಏಪ್ರಿಲ್ವರೆಗೂ ನಾನು ಪರೀಕ್ಷೆಗೆ ಒಳಗಾಗಿಲ್ಲ. ಕೊನೆಗೆ ಎದೆಯಲ್ಲಿ ಸೋಂಕು ವ್ಯಾಪಿಸಿಕೊಂಡ ಬಳಿಕ ಆಸ್ಪತ್ರೆಗೆ ಸೇರಬೇಕಾಯಿತು. ಆದರೆ ಸ್ವಲ್ಪ ಚೇತರಿಸಿಕೊಂಡು ಮನೆಗೆ ಬಂದರೂ ಮತ್ತೆ ಆರೋಗ್ಯ ಪರಿಸ್ಥಿತಿ ಹದಗೆಟ್ಟು ಆಸ್ಪತ್ರೆಗೆ ಸೇರುವಂತಾಗಿತ್ತು. ಹೀಗೆ 43 ಸಲ ಕೋವಿಡ್ ಪಾಸಿಟಿವ್ ಆಗಿ, 7 ಸಲ ಆಸ್ಪತ್ರೆಗೆ ದಾಖಲಾಗುವಂತಾಗಿತ್ತು. ಒಟ್ಟಿನಲ್ಲಿ ಕರೊನಾ ಸೋಂಕಿತನಾಗಿ 305 ದಿನಗಳ ಕಾಲ ಆಸ್ಪತ್ರೆಯಲ್ಲಿ ಕಳೆದಿದ್ದೇನೆ. ಒಟ್ಟಿನಲ್ಲಿ ಸುಮಾರು ಹತ್ತು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದು, ಒಂದು ಸಮಯದಲ್ಲಂತೂ 2-3 ತಿಂಗಳವರೆಗೂ ನಿರಂತರವಾಗಿ ಆಸ್ಪತ್ರೆಯಲ್ಲಿ ಇರುವಂತಾಗಿತ್ತು. ಇಷ್ಟು ಸುದೀರ್ಘವಾದ ಸೋಂಕಿನಿಂದಾಗಿ ನಾನು ಸಂಪೂರ್ಣ ನಿತ್ರಾಣಗೊಂಡಿದ್ದು, ಕಳೆದುಕೊಂಡಿರುವ ಬಾಯಿರುಚಿ ಇನ್ನೂ ವಾಪಸ್ ಬಂದಿಲ್ಲ. ಕೋವಿಡ್ ಸೋಂಕಿಗೆ ಒಳಗಾಗುವ ಮುನ್ನ 117 ಕೆ.ಜಿ. ಇದ್ದ ನನ್ನ ದೇಹತೂಕ ಈಗ 63 ಕೆ.ಜಿ.ಗೆ ಇಳಿದಿದೆ ಎಂದು ಡೇವ್ ಹೇಳಿದ್ದಾನೆ.
ಇದನ್ನೂ ಓದಿ: ‘ನಾಯಿಗೆ ರಕ್ತ ಬೇಕಾಗಿದೆ!’; ಅಪಘಾತಕ್ಕೀಡಾಗಿ ಮೂಳೆ ಮುರಿದ ಶ್ವಾನಕ್ಕೆ ನಡೆಯಲಿದೆ ಸರ್ಜರಿ..
ಸದ್ಯ ಡೇವ್ ಸ್ಮಿತ್ ಕೋವಿಡ್ ಪಾಸಿಟಿವ್ ಟೆಸ್ಟ್ ನೆಗೆಟಿವ್ ಬಂದಿದ್ದು, ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾನೆ. ಇದೊಂದು ವಿಶೇಷ ಪ್ರಕರಣವಾಗಿದ್ದು, ಸ್ಮಿತ್ ಸೋಂಕಿನ ಕುರಿತು ಬ್ರಿಸ್ಟಲ್ ಯುನಿವರ್ಸಿಟಿಯ ವೈರಾಲಜಿಸ್ಟ್ ಆ್ಯಂಡ್ರ್ಯೂಡೇವಿಡ್ಸನ್ ಅಧ್ಯಯನ ನಡೆಸಲು ಮುಂದಾಗಿದ್ದಾರೆ. (ಏಜೆನ್ಸೀಸ್)
ಸೀಟ್ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ
ಕೆಎಸ್ಆರ್ಟಿಸಿ ಬಸ್ನಲ್ಲಿ ಹಾವು!; ಲಾಕ್ಡೌನ್ ಇಫೆಕ್ಟ್, ಚಾಲಕರಲ್ಲಿ ಭಯ…