More

    ಹೀರೋಗಳ ಹೀರೋ, ಅತ್ಯಪರೂಪದ ಸೆಲೆಬ್ರಿಟಿ ಇವನು!

    ಹೀರೋಗಳ ಹೀರೋ, ಅತ್ಯಪರೂಪದ ಸೆಲೆಬ್ರಿಟಿ ಇವನು!ಆಂಟನಿ ಫ್ರೆಡರಿಕ್ ವೈಲ್ಡಿಂಗ್! ಶತಮಾನದ ಹಿಂದೆ ಆಗಿಹೋದ ನ್ಯೂಜಿಲೆಂಡ್​ನ ಈ ಹೀರೋ ಜಗತ್ತು ನೆನಪಿಟ್ಟುಕೊಳ್ಳಲೇಬೇಕಾದ ಸಾಧಕ. ಟೆನಿಸ್ ಲೋಕದ ಪ್ರಪ್ರಥಮ ಸೂಪರ್​ಸ್ಟಾರ್ ಆತ. ಒಂದಾದ ಮೇಲೊಂದು ಗ್ರಾ್ಯಂಡ್​ಸ್ಲಾಮ್ಳನ್ನು ಗೆಲ್ಲುತ್ತ ಹೋದ ವೈಲ್ಡಿಂಗ್ ಕ್ರೀಡಾಜಗತ್ತಿನ ಕಣ್ಮಣಿ ಆಗಿದ್ದವನು. ಆದರೂ ಜನಪ್ರಿಯತೆ, ಶ್ರೀಮಂತಿಕೆಯ ಬೆಚ್ಚನೆಯ ಕಂಬಳಿಯನ್ನು ಹೊದ್ದು ಸ್ವಇಚ್ಛೆಯಿಂದ ಯುದ್ಧರಂಗಕ್ಕೆ ಜಿಗಿದವನು. ಟೆನಿಸ್ ಮೈದಾನದಲ್ಲಿ ಅನಭಿಷಕ್ತ ರಾಜನೆನಿಸಿಕೊಂಡವನು ಯುದ್ಧಭೂಮಿಯಲ್ಲಿ ಸೈನಿಕನಾಗಿ ವೀರಮರಣವನ್ನಪ್ಪಿದ ಅದ್ಭುತ ಘಟನೆ ಖಂಡಿತ ಜಗತ್ತಿನ ಇತಿಹಾಸದಲ್ಲಿ ಪದೇಪದೆ ಜರುಗುವಂತಹುದ್ದಲ್ಲ.

    ಆಂಟನಿ ವೈಲ್ಡಿಂಗ್ ಹುಟ್ಟಿದ್ದು 1883ರ ಅಕ್ಟೋಬರ್ 31, ನ್ಯೂಜಿಲೆಂಡ್​ನಲ್ಲಿ. ಆಗ ಅದು ಇಂಗ್ಲೆಂಡಿನ ವಸಾಹತಾಗಿತ್ತು. ತಂದೆ ಫ್ರೆಡರಿಕ್ ವೈಲ್ಡಿಂಗ್ ಇಂಗ್ಲೆಂಡಿನಿಂದ ವಲಸೆ ಬಂದ ಶ್ರೀಮಂತ ವಕೀಲ. ಮನೆಯಲ್ಲಿ ಬೇಸಿಗೆಗೊಂದು, ಚಳಿಗಾಲಕ್ಕೊಂದು ಎಂದು ಎರಡೆರಡು ಸ್ವಂತ ಟೆನಿಸ್ ಕೋರ್ಟ್ ಹೊಂದಿದ್ದ ಅವರು ದೇಶದ ಪ್ರತಿಷ್ಠಿತ ಟೆನಿಸ್ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಡಬಲ್ಸ್​ನಲ್ಲಿ ಬಹುಮಾನ ಪಡೆದ ಟೆನಿಸ್ ಪಟುವೂ ಹೌದು. ಅಷ್ಟೇ ಅಲ್ಲ, ಕ್ರಿಕೆಟ್​ನಲ್ಲಿ ನ್ಯೂಜಿಲೆಂಡ್​ನ್ನು ಪ್ರತಿನಿಧಿಸಿದವರು ಕೂಡ. ಜತೆಗೆ ಫುಟ್​ಬಾಲ್, ರೈಡಿಂಗ್ ಮತ್ತು ರೋವಿಂಗ್​ಗಳಲ್ಲೂ ಪರಿಣಿತರು! ಹಾಗಾಗಿ ಅಪ್ಪನಂತೆ ಮಗನೂ ಸವ್ಯಸಾಚಿಯೇ ಆದ!

    ಚಿಕ್ಕಂದಿನಿಂದಲೂ ಆಂಟನಿಗೆ ಆಟಗಳಲ್ಲಿ ಆಸಕ್ತಿ. ತಂದೆಯಂತೆ ಟೆನಿಸ್ ಇಷ್ಟದ ಕ್ರೀಡೆ. ಹಾಗಾಗಿ ಆರರ ಎಳೆಯ ಪ್ರಾಯದಲ್ಲೇ ಆಂಟನಿ ರ್ಯಾಕೆಟ್ ಹಿಡಿದ. ಈಜಿನಲ್ಲಿಯೂ ಆಸಕ್ತಿ. ಹನ್ನೆರಡರ ಹರಯದಲ್ಲಿ ಶಾಲೆಯ ಫುಟ್​ಬಾಲ್ ಟೀಮ್ ಕ್ಯಾಪ್ಟನ್ ಆದ. ಆದರೆ ಹೆಚ್ಚಿನ ಓದಿಗಾಗಿ ಕೇಂಬ್ರಿಡ್ಜ್​ಗೆ ಹೋದಾಗ ಮತ್ತೆ ಟೆನಿಸ್ ಆಸಕ್ತಿ ಮರಳಿತು. ಕೇಂಬ್ರಿಡ್ಜ್​ನ ಟ್ರಿನಿಟಿ ಕಾಲೇಜಿಗೆ ಕಾನೂನು ಓದಿಗೆ ತೆರಳಿದ ಆಂಟನಿ, ಕಾನೂನು ಕೋರ್ಟುಗಳಿಗಿಂತ ಟೆನಿಸ್ ಕೋರ್ಟ್​ಗಳಲ್ಲಿ ಕಾಣಿಸಿಕೊಳ್ಳತೊಡಗಿದ. ಕ್ಯಾಂಟರ್​ಬರಿ ಚಾಂಪಿಯನ್​ಶಿಪ್ ಸೇರಿ ಇಂಗ್ಲೆಂಡಿನ ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲತೊಡಗಿದ. ಕೆಲವೆಡೆಯಂತೂ ತಂದೆ-ಮಗ ಒಟ್ಟಿಗೇ ಡಬಲ್ಸ್ ಆಡಿ ಗೆಲ್ಲುತ್ತಿದ್ದರು!

    1905ರಲ್ಲಿ ಪದವಿ ಪಡೆದ ಮೇಲೆ ತಂದೆಯ ಜತೆ ಪ್ರಾಕ್ಟೀಸ್ ಆರಂಭಿಸಿದ ಆಂಟನಿ ಮರುವರ್ಷವೇ ನ್ಯೂಜಿಲೆಂಡ್​ನ ರಾಷ್ಟ್ರೀಯ ಟೆನಿಸ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆದ. ನಂತರ ಟೆನಿಸ್​ನಲ್ಲಿ ಮುಂದುವರಿಯಲು ಇಂಗ್ಲೆಂಡಿಗೆ ಮರಳಿದ. ಅಲ್ಲಿ ಯುರೋಪಿನ ಹತ್ತಾರು ಪಂದ್ಯಾವಳಿಗಳಲ್ಲಿ ಜಯಿಸಿದ. 1907ರಿಂದ ಸತತ ಮೂರು ವರ್ಷ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿ ಡೇವಿಸ್ ಕಪ್ ಗೆದ್ದ! 1910ರಿಂದ 1913ರರವರೆಗೆ ಸತತ ನಾಲ್ಕು ವಿಂಬಲ್ಡನ್ ಗೆದ್ದ ದಾಖಲೆಯನ್ನಂತೂ 1979 ರವರೆಗೂ ಅಂದರೆ 66 ವರ್ಷ ಯಾರೂ ಸರಿಗಟ್ಟಿರಲಿಲ್ಲ! 1913ರಲ್ಲಿ ಪ್ಯಾರಿಸ್​ನ ಮಣ್ಣಿನ ಅಂಕಣ, ವಿಂಬಲ್ಡನ್​ನ ಹುಲ್ಲಿನ ಅಂಕಣ ಮತ್ತು ಸ್ಟಾಕ್​ಹೋಮ್ ಒಳಾಂಗಣ ಅಂಕಣ, ಈ ಮೂರು ಕೋರ್ಟ್​ಗಳಲ್ಲಿ ನಡೆವ ಪ್ರಮುಖ ಪಂದ್ಯಾವಳಿಗಳಲ್ಲೂ ಗೆದ್ದು ಆಂಟನಿ ಟ್ರಿಪಲ್ ವಿಶ್ವ ಚಾಂಪಿಯನ್ ಎನಿಸಿಕೊಂಡ! ಇವೇ ನಂತರ ಗ್ರಾ್ಯಂಡ್​ಸ್ಲಾಮ್ ಎನಿಸಿಕೊಂಡವು.  

    ಹೀಗೆ ಒಂದರ ಮೇಲೊಂದು ಪಂದ್ಯಾವಳಿಗಳನ್ನು ಗೆದ್ದ ಆಂಟನಿ ವೈಲ್ಡಿಂಗ್​ನ ಸಾಧನೆಗಳ ಪಟ್ಟಿ ಅಚ್ಚರಿ ಹುಟ್ಟಿಸುವಂಥದ್ದು. ಎರಡು ಸಲ ಆಸ್ಟ್ರೇಲಿಯನ್ ಓಪನ್, ನಾಲ್ಕು ಸಲ ವಿಂಬಲ್ಡನ್ ಸೇರಿ ಆರು ಬಾರಿ ಸಿಂಗಲ್ಸ್ ಕಿರೀಟ, ಡಬಲ್ಸ್​ನಲ್ಲಿ ಐದು ಬಾರಿ ವಿಜೇತ, ಮಿಕ್ಸಡ್ ಡಬಲ್ಸ್ ಒಮ್ಮೆ ಹೀಗೆ ಒಂದು ಡಜನ್ ಪ್ರಮುಖ ಟ್ರೋಫಿಗಳು! ಈಗಿನ ಕಾಲದ ಪ್ರಕಾರ ಹನ್ನೆರಡು ಗ್ರಾ್ಯಂಡ್​ಸ್ಲಾಮ್ ಚಾಂಪಿಯನ್​ಶಿಪ್! 1911ರಲ್ಲಿ ಟೆನಿಸ್ ರ್ಯಾಂಕಿಂಗ್​ನಲ್ಲಿ ಜಗತ್ತಿನ ನಂಬರ್ ಒನ್ ಪಟ್ಟ! ನಾಲ್ಕು ಸಲ ಡೇವಿಸ್ ಕಪ್, ಒಲಂಪಿಕ್ಸ್​ನಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿ ಕಂಚಿನ ಪದಕ!

    ಟೆನಿಸ್​ಗೆ ಅಪರೂಪದ ಕೊಡುಗೆ ಸಲ್ಲಿಸಿದ ವೈಲ್ಡಿಂಗ್​ಗೆ 1978ರಲ್ಲಿ ಪ್ರಸಿದ್ಧ ಅಂತಾರಾಷ್ಟ್ರೀಯ ‘ಹಾಲ್ ಆಫ್ ಫೇಮ್ ಗೌರವ ನೀಡಲಾಯಿತು. 1990ರಲ್ಲಿ ನ್ಯೂಜಿಲೆಂಡ್ ಹಾಲ್ ಆಫ್ ಫೇಮ್ ಗೌರವ ಕೂಡ ದೊರಕಿತು.

    ದಣಿವರಿಯದ ಹುಡುಗನಾತ. ವಿಭಿನ್ನ ಆಸಕ್ತಿ ಹೊಂದಿರುವುದಷ್ಟೇ ಅಲ್ಲ, ಆಸಕ್ತಿಯ ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಸಾಧನೆಯನ್ನೇ ಮಾಡಿದ. ಆಟದ ನಡುವೆಯೇ ಓದು ಮುಗಿಸಿ ತಂದೆಯ ಜತೆ ಕಾನೂನು ಪ್ರಾಕ್ಟೀಸ್​ಗೂ ತೊಡಗಿದ್ದ! 1909ರಲ್ಲಿ ಆಂಟನಿ ನ್ಯೂಜಿಲೆಂಡ್​ಗೆ ಮರಳಿ ಸುಪ್ರೀಂ ಕೋರ್ಟ್ ವಕೀಲನಾಗಿ ಆಯ್ಕೆಯಾದ! ಜತೆಗೇ ಟ್ರೆಕ್ಕಿಂಗ್​ನಲ್ಲೂ ಬಹು ಉತ್ಸಾಹದಿಂದ ಪಾಲ್ಗೊಂಡ! ಮತ್ತೆರಡೇ ವರ್ಷಕ್ಕೆ ಇಂಗ್ಲೆಂಡಿಗೆ ವಾಪಾಸಾದ. ‘ಕೋರ್ಟಿನ ಒಳಹೊರಗೆ’ (On the Court and Of) ಎಂಬ ಪುಸ್ತಕವನ್ನೂ ಬರೆದು ಪ್ರಕಟಿಸಿದ. ಅದಲ್ಲದೆ ಕ್ಯಾಂಟರ್​ಬರಿ ಕ್ರಿಕೆಟ್ ತಂಡದ ಆಟಗಾರನಾಗಿ ಎರಡು ಮೊದಲದರ್ಜೆಯ ಕ್ರಿಕೆಟ್ ಪಂದ್ಯಗಳಲ್ಲೂ ಆಂಟನಿ ಭಾಗವಹಿಸಿದ್ದ! ಮೋಟರ್ ಸೈಕಲ್ ಓಡಿಸುವುದೂ ಪ್ರೀತಿಯ ಸಂಗತಿ. ಯುರೋಪಿನಾದ್ಯಂತ ಏಕಾಂಗಿಯಾಗಿ ಮೋಟರ್ ಬೈಕ್​ನಲ್ಲಿ ಸುತ್ತಿದ ಮೊದಲಿಗ. ದೀರ್ಘದೂರದ (1,500 ಕಿಮೀ) ಮೋಟರ್ ಸೈಕಲ್ ರೇಸ್​ನಲ್ಲಿ ಚಿನ್ನದ ಪದಕ ವಿಜೇತನೂ ಹೌದು!

    ಆಗಿನ ಕಾಲದಲ್ಲಿ ಅಷ್ಟಾಗಿ ಪ್ರಚಲಿತವಲ್ಲದ ಫಿಟ್​ನೆಸ್​ಗೂ ಆತ ಮಹತ್ವ ಕೊಟ್ಟ. ದೀರ್ಘ ನಡಿಗೆ ಸೇರಿ ದೇಹ ದಂಡಿಸುತ್ತಿದ್ದ. ಜತೆಗೆ ಟೆನಿಸ್​ನಲ್ಲಿ ತನ್ನ ದೌರ್ಬಲ್ಯ ಯಾವ ಥರದ್ದು ಎಂದು ತಿಳಿದುಕೊಂಡು ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಬಹು ಆಸಕ್ತಿದಾಯಕ ವಿಚಾರವೆಂದರೆ ವೈಲ್ಡಿಂಗ್ ಟೆನಿಸ್​ನಲ್ಲಿ ಹುಟ್ಟು ಪ್ರತಿಭಾವಂತನೇನಲ್ಲ! ಆದರೆ ತನ್ನ ಆಟವನ್ನು ಉತ್ತಮಪಡಿಸಿಕೊಳ್ಳಲು ವೈಲ್ಡಿಂಗ್ ಮಾಡಿದ ಸತತ ಅಭ್ಯಾಸ, ಪ್ರಯತ್ನ ಆತನನ್ನು ಚಾಂಪಿಯನ್ ಆಗಿಸಿತು ಎನ್ನುತ್ತಾರೆ ತಜ್ಞರು.

    1914ರಲ್ಲಿ ವಿಶ್ವಯುದ್ಧ ಪ್ರಾರಂಭವಾದಾಗ ವೈಲ್ಡಿಂಗ್​ಗೆ ಸೇನೆಗೆ ಸೇರುವ ಹೆಬ್ಬಯಕೆ ಕಾಡಿತು. ಆಂಟನಿ ಈಗಾಗಲೇ ಯುರೋಪಿನಾದ್ಯಂತ ಹೀರೋ ಆಗಿದ್ದ. ತನ್ನ ಅಭೂತಪೂರ್ವ ಪ್ರತಿಭೆ, ಆ ಪ್ರತಿಭೆಗೆ ಶ್ರಮದ ನೀರೆರೆದು ಯಶಸ್ಸಿನ ಫಲವನ್ನು ಪಡೆದ ರೀತಿ ಎಲ್ಲವೂ ಯುವಜನರಿಗಷ್ಟೇ ಅಲ್ಲ ಪ್ರತಿಯೊಬ್ಬರಿಗೂ ಸ್ಪೂರ್ತಿಯ ಸೆಲೆಯಾಗಿತ್ತು. ಆತನ ಮೇಲೆ ಸೇನೆ ಸೇರುವ ಯಾವ ಒತ್ತಡವೂ ಇರಲಿಲ್ಲ. ಆದರೆ ವೈಲ್ಡಿಂಗ್ ಸಾಹಸಪ್ರಿಯ. ಹಾಗಾಗಿ ವಯಸ್ಸು ಮೂವತ್ತು ತಲುಪುವುದರೊಳಗೇ ಹತ್ತಾರು ಸಾಹಸ ಮಾಡಿಯಾಗಿತ್ತು! ಯುದ್ಧಭೂಮಿಗೆ ಕಾಲಿಟ್ಟಿದ್ದೂ ಆ ಸಾಹಸದ ಒಂದು ಭಾಗವೇ! ಅದಕ್ಕೇ ಈ ಮೂವತ್ತರ ಬಿಸಿರಕ್ತದ ತರುಣ ತನ್ನ ಸ್ಟಾರ್​ಗಿರಿಯನ್ನು ಬದಿಗಿಟ್ಟು ಯುದ್ಧಭೂಮಿಗೆ ಸ್ವಇಚ್ಛೆಯಿಂದ ಧುಮುಕಿದ.

    ಆಗ ನೌಕಾಪಡೆಯ ಉನ್ನತ ಅಧಿಕಾರಿಯಾಗಿದ್ದ ವಿನ್​ಸ್ಟನ್ ರ್ಚಚಿಲ್ ಸಲಹೆಯಂತೆ ಇಂಗ್ಲೆಂಡಿನ ನೌಕಾಪಡೆ ‘ರಾಯಲ್ ಮರೈನ್ಸ್’ ಸೇರಿದ ವೈಲ್ಡಿಂಗ್. ನಂತರ ಮೋಟರ್ ಸೈಕಲ್ ಮತ್ತು ಕಾರ್ ಓಡಿಸುವುದರಲ್ಲಿನ ಆತನ ಪ್ರೀತಿ ಯುದ್ಧದ ಶಸ್ತ್ರಸಜ್ಜಿತ ಕಾರುಗಳ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಡಿತು. ‘ಕುದುರೆಗಳು ಈಗ ನಿಷ್ಪ್ರಯೋಜಕ, ಇದು ಕಾರುಗಳ ಕಾಲ’ ಎಂದಿದ್ದನಾತ. ಮಿತ್ರಪಕ್ಷಗಳ ಪರವಾಗಿ ಹೋರಾಡಲು 1915ರ ಮಾರ್ಚ್​ನಲ್ಲಿ ಆತನಿಗೆ ಲೆಫ್ಟಿನೆಂಟ್ ಹುದ್ದೆ ನೀಡಿ ಫ್ರಾನ್ಸ್​ಗೆ ಕಳಿಸಲಾಯಿತು. ಮೇ 2ರಂದು ಕ್ಯಾಪ್ಟನ್ ಆಗಿ ಪ್ರಮೋಷನ್ ಕೂಡ ಆಯಿತು. ಆದರೆ 1915ರ ಮೇ 9ರಂದು ಶೆಲ್ ದಾಳಿಯಲ್ಲಿ ಕ್ಯಾಪ್ಟನ್ ಆಂಟನಿ ವೈಲ್ಡಿಂಗ್ ಹುತಾತ್ಮನಾದ!

    ಟೆನಿಸ್ ಆಗ ಶ್ರೀಮಂತರ ಆಟವೆಂದು ಕರೆಯಿಸಿಕೊಳ್ಳುತ್ತಿತ್ತು. ಈತ ಕೂಡ ಬೆಳ್ಳಿ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದವನೇ, ಆದರೆ ಆಟದೆಡೆಗಿನ ಆತನ ಸಮರ್ಪಣಾ ಮನೋಭಾವ, ಕಠಿಣ ತರಬೇತಿ, ಶ್ರೀಮಂತ ಅಪ್ಪಂದಿರ ಮುದ್ದು ಮಕ್ಕಳಂತೆ ಸಿಗರೇಟು ಸೇದದೆ, ಕುಡಿಯದೆ ಶಿಸ್ತಿನಿಂದಿದ್ದ ರೀತಿ, ಪರಿಶ್ರಮದಿಂದ ದೇಹಧಾರ್ಡ್ಯ ಕಾದುಕೊಂಡ ಪರಿ, ಒಳ್ಳೆಯ ನಡವಳಿಕೆ ಇವೆಲ್ಲ ಗುಣಗಳಿಂದ ಆಂಟನಿ ಮಕ್ಕಳು, ಯುವಕರು, ಮಹಿಳೆಯರೆನ್ನದೆ ಎಲ್ಲರ ಡಾರ್ಲಿಂಗ್ ಆಗಿದ್ದ.  

    ಸಾಮಾಜಿಕ ಮಾಧ್ಯಮಗಳು, ಟಿ.ವಿ. ವಾಹಿನಿಗಳು ಇವೆಲ್ಲ ಇಲ್ಲದ ಆ ಕಾಲದಲ್ಲೇ ಆಂಟನಿ ಜನಪ್ರಿಯನಾಗಿದ್ದ. ಆಕರ್ಷಕ ವ್ಯಕ್ತಿತ್ವದವನೂ, ಪ್ರತಿಭಾವಂತನೂ ಆಗಿದ್ದ ಈ ಸೂಪರ್​ಸ್ಟಾರ್ ಟೆನಿಸ್ ಕೋರ್ಟಿನ ಒಳಗೆ ಹೊರಗೆ ಎಲ್ಲೆಡೆ ನೋಡುಗರೆದೆಯಲ್ಲಿ ಬೆಚ್ಚನೆಯ ಅನುಭೂತಿ ಮೂಡಿಸುತ್ತಿದ್ದ. ಈ ಪರಿಯ ಜನಪ್ರಿಯತೆ ಮತ್ತು ಜನರ ಪ್ರೀತಿ ಪಡೆದ ಪ್ರಪ್ರಥಮ ಸೆಲೆಬ್ರಿಟಿ ಟೆನಿಸ್ ಆಟಗಾರನಾತ!

    ಆದರೆ ಇಷ್ಟೆಲ್ಲ ಸಾಧನೆ, ತ್ಯಾಗ ಮಾಡಿದರೂ ನ್ಯೂಜಿಲೆಂಡ್​ನಲ್ಲಿ ಅವನಿಗೆ ಸಿಗಬೇಕಾದ ಗೌರವ ಸಿಗಲಿಲ್ಲ. ಕಾರಣ ಆತ ಹೆಚ್ಚಿನ ಸಮಯವನ್ನು ಇಂಗ್ಲೆಂಡಿನಲ್ಲಿ ಕಳೆದಿದ್ದ ಎಂಬುದು! ಅಂತಾರಾಷ್ಟ್ರೀಯ ಹಾಲ್ ಆಫ್ ಫೇಮ್ ಆತನನ್ನು ಗುರುತಿಸಿದ ಹನ್ನೆರಡು ವರ್ಷದ ಬಳಿಕ ನ್ಯೂಜಿಲೆಂಡ್ ಹಾಲ್ ಆಫ್ ಫೇಮ್ ಗೌರವ ನೀಡಿದ್ದೇ ಇದಕ್ಕೆ ಸಾಕ್ಷಿ. ಇಂಗ್ಲೆಂಡ್ ಸರ್ಕಾರ ಕೂಡ ಈ ಹೀರೋಗೆ ಸಲ್ಲಬೇಕಾದ ಅರ್ಹ ಗೌರವ ನೀಡಲಿಲ್ಲ ಕಾರಣ ಆತ ತನ್ನ ವಸಾಹತಾದ ನ್ಯೂಜಿಲೆಂಡ್​ನವನು ಎಂದು!

    ಹೀರೋಗಳ ಹೀರೋ ಆದಂಥ ಅತ್ಯಪರೂಪದ ಸೆಲೆಬ್ರಿಟಿ ಇವನು. ತಮ್ಮ ಸುತ್ತ ನೂರಾರು ಸಂಗತಿಗಳು ನಡೆಯುತ್ತಿದ್ದರೂ ತಮಗೆ ಸಂಬಂಧವಿಲ್ಲದಂತೆ ಇರುವ ಸೆಲೆಬ್ರಿಟಿಗಳ ಮಧ್ಯೆ ಆಂಟನಿಯಂಥವರು ಬದುಕಿನ ಮೇಲೆ ಭರವಸೆ ಇಡಲು ಕಾರಣವಾಗುತ್ತಾರೆ. ತಾನು ತನ್ನದು ಎಂಬ ಸ್ವಾರ್ಥವನ್ನು ನಿಜವಾಗಿ ಮೀರುವುದು ಹೇಗೆ ಎಂದರೆ ವೈಲ್ಡಿಂಗ್​ನಂತೆ ಎಂದು ಹೇಳಬಹುದೇನೋ! ಸದಾ ಸಾಹಸದಲ್ಲೇ ಇದ್ದು ಯುದ್ಧರಂಗಕ್ಕೆ ತೆರಳಿ ಮತ್ತೆಂದೂ ಮರಳದ ಈ ಸಾಹಸಿಗೆ ಮನಸು ಮಣಿಯದೆ ಇದ್ದೀತೇ? ಕ್ಯಾಪ್ಟನ್ ಆಂಟನಿ ವೈಲ್ಡಿಂಗ್ ನಿಮಗೊಂದು ಸೆಲ್ಯೂಟ್!

    ನಾನು ನೀವು ಮತ್ತು..| ಮೌಲ್ಯಗಳ ಬಲದ ಮೇಲೆ ಉದ್ಯಮಸಾಮ್ರಾಜ್ಯ ಕಟ್ಟಿದ ಟಾಟಾ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts