ರಾಜಕಾರಣ ಮೀರಿದ ಸ್ನೇಹ ಸಂಬಂಧ ಹೊಂದಿದ್ದ ಆತ್ನೀಯ ಗೆಳೆಯನನ್ನು ನಾನು ಕಳೆದುಕೊಂಡಿದ್ದೇನೆ: ಸಿಎಂ

ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ರಾಜಕಾಣ ಮೀರಿದ ಸ್ನೇಹ ನಮ್ಮ ಕುಟುಂಬಗಳ ನಡುವೆ ಇತ್ತು. ಸ್ನೇಹಕ್ಕೆ ಅತ್ಯಂತ ಮಹತ್ವ ನೀಡುತ್ತಿದ್ದ ವ್ಯಕ್ತಿ ಅವರಾಗಿದ್ದರು. ಇಂದು ಓರ್ವ ಆತ್ಮೀಯ ಗೆಳೆಯನನ್ನು ಕಳೆದುಕೊಂಡಂತಾಗಿದೆ ಎಂದು ಎಚ್​ಡಿಕೆ ಕಂಬನಿ ಮಿಡಿದಿದ್ದಾರೆ.
ಮೌಲ್ಯಾಧಾರಿತ ರಾಜಕಾರಣದಲ್ಲಿ ನಂಬಿಕೆಯಿಟ್ಟಿದ್ದ ಅವರು ಸಂಸದರಾಗಿ, ಕೇಂದ್ರ ಸಚಿವರಾಗಿ ದೇಶಕ್ಕೆ ನೀಡಿದ ಕೊಡುಗೆ ಆನನ್ಯ. ತಮ್ಮ ಜನಪರ ಕಾಳಜಿ, ಕಾರ್ಯಚಟುವಟಿಕೆಗಳಿಂದಾಗಿ ಬೆಂಗಳೂರಿಗರ ಕಣ್ಮಣಿ ಆಗಿದ್ದರು. ಭಗವಂತನು ಅವರ ಆತ್ಮಕ್ಕೆ ಚಿರ ಶಾಂತಿಯನ್ನು ನೀಡಲಿ. ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡೆ: ದೇವೇಗೌಡ ಕಂಬನಿ

ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್​ ಅವರ ನಿಧನಕ್ಕೆ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಅವರು ಕಂಬನಿ ಮಿಡಿದಿದ್ದಾರೆ.
ನಾನು ಪ್ರಧಾನಿಯಾಗಿದ್ದಾಗ ಅನಂತ ಕುಮಾರ್ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು. ಅಂದಿನಿಂದ ಇಂದಿನವರೆಗೂ ಅವರು ಸಮಾಜಕ್ಕೆ ಉತ್ತಮ ಸೇವೆಸಲ್ಲಿಸುತ್ತಿದ್ದರು. ನಾವೆಲ್ಲ ಒಬ್ಬ ಸೃಜನಶೀಲ ವ್ಯಕ್ತಿಯನ್ನು ಕಳೆದುಕೊಂಡಿದ್ದೀವೆ ನನ್ನ ಮತ್ತು ಅವರ ಸಂಬಂಧ ಸುಮಾರು 3 ದಶಕಗಳದ್ದು. ನನ್ನ ಒಬ್ಬ ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ವಯಕ್ತಿಕವಾಗಿ ನನ್ನ ಮನಸ್ಸಿಗೆ ಬಹಳ ನೋವುಂಟಾಗಿದೆ. ಅವರ ಅಗಲಿಕೆಯಿಂದ ದೇಶಕ್ಕೆ ತುಂಬಲಾಗದ ನಷ್ಟವುಂಟಾಗಿದೆ. ಆ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಭಗವಂತ ಅವರ ಕುಟುಂಬಕ್ಕೆ ಮತ್ತು ಅವರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ತುಂಬಲಿ.

ಅನಂತ್​ಕುಮಾರ್​ ಅವರ ಅಗಲಿಕೆ ನೋವು ತಂದಿದೆ: ಪರಮೇಶ್ವರ್​ ಬೇಸರ

ಬೆಂಗಳೂರು: ಕೇಂದ್ರ ಸಂಸದೀಯ ವ್ಯವಹಾರ ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಅವರ ನಿಧನದ ಸುದ್ದಿ ನೋವು ತರಿಸಿದೆ ಎಂದು ಪರಮೇಶ್ವರ್​ ಹೇಳಿದ್ದಾರೆ. ಬೆಂಗಳೂರು ದಕ್ಷಿಣದಿಂದ ಸತತವಾಗಿ ಲೋಕಸಭೆಗೆ ಆಯ್ಕೆಯಾಗಿದ್ದ ಹಿರಿಯ ರಾಜಕಾರಣಿ ಅನಂತಕುಮಾರ್‌ ಅವರು ಉತ್ತಮ ಸಂಸದೀಯ ಪಟು. ಭಾರತೀಯ ಜನತಾ ಪಕ್ಷದ ಪ್ರಮುಖ ನಾಯಕರಾಗಿದ್ದ ಅನಂತ ಕುಮಾರ್‌ ಯಶಸ್ವಿ ರಾಜಕಾರಣಿಯಾಗಿದ್ದರು. ಅವರ ನಿಧನದ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ಕರುಣಿಸಲಿ.

ಕರ್ನಾಟಕ ಮತ್ತು ದೆಹಲಿಯ ನಡುವಿನ ಕೊಂಡಿಯೊಂದು ಕಳಚಿದೆ: ಸಿದ್ದರಾಮಯ್ಯ

ಕೇಂದ್ರ ಸಚಿವ ಅನಂತ್‌ಕುಮಾರ್ ಸಾವಿನ ಸುದ್ದಿ ಕೇಳಿ‌ ಆಘಾತಗೊಂಡಿದ್ದೇನೆ. ಕರ್ನಾಟಕ ಮತ್ತು ದೆಹಲಿ ನಡುವಿನ ಕೊಂಡಿಯೊಂದು‌ ಕಳಚಿಬಿದ್ದಿದೆ. ರಾಜಕೀಯವಾಗಿ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಅನಂತ್​ಕುಮಾರ್​ ಅವರಿಗೆ ಅವಕಾಶ ಮತ್ತು ವಯಸ್ಸಿತ್ತು. ಅವರ ಕುಟುಂಬ ವರ್ಗದ ದು:ಖದಲ್ಲಿ‌ ನಾನೂ ಭಾಗಿಯಾಗಿದ್ದೇನೆ ಎಂದು ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.