ಹಾನಗಲ್ಲ: ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಸಾರ್ವಜನಿಕರೇ ಮುಚ್ಚಿದ ಘಟನೆ ತಾಲೂಕಿನ ಹಿರೇಕಾಂಶಿ ಗ್ರಾಮದಲ್ಲಿ ನಡೆದಿದೆ.

ಹಿರೇಕಾಂಶಿ ಗ್ರಾಮದ ಹೊರವಲಯದಲ್ಲಿರುವ ಶಿರಸಿಹರಿಹರ ರಾಜ್ಯ ಹೆದ್ದಾರಿಯಲ್ಲಿ ನಿರಂತರ ಮಳೆಯಿಂದಾಗಿ ದೊಡ್ಡ ಪ್ರಮಾಣದ ಗುಂಡಿ ಬಿದ್ದಿದ್ದವು. ರಸ್ತೆ ಗುಂಡಿಯಿಂದ ಹಲವು ವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಳ್ಳುತ್ತಿರುವ ಘಟನೆಗಳು ಸಾಮಾನ್ಯವಾಗಿದ್ದವು.
ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷ್ಯಂದ ಬೇಸತ್ತ ಗ್ರಾಮಸ್ತರು ತಮ್ಮ ಸ್ವಂತ ಹಣದಿಂದ ಖಡಿ, ಮರಳು, ಸಿಮೆಂಟ್ ತಂದು ರಸ್ತೆ ಗುಂಡಿ ಮುಚ್ಚಿ ಮಾದರಿಯಾಗಿದ್ದಾರೆ. ತಾಲೂಕಿನ ಹಿರೇಕಾಂಶಿ ಗ್ರಾಮಸ್ಥರಾದ ಅಬ್ರಾರ್ ನೆಗಳೂರ, ಮಕಬುಲ್ ಲೋಹಾರ, ಸಿರಾಜ್ಅಹ್ಮದ್ ಬೊಮ್ಮನಹಳ್ಳಿ, ಚಂದ್ರಗೌಡ ಓದೇಗೌಡರ, ವಿನಾಯಕ ತಳವಾರ, ಗೌಸ್ಅಹ್ಮದ್ ಶೀರಗೋಡ, ಜಾಫರಸಾಬ್ ಬ್ಯಾಡಗಿ ಇತರರು ವಾಹನ ಸವಾರರಿಗೆ ಸಮಸ್ಯೆಯಾಗಿದ್ದ ರಸ್ತೆ ಗುಂಡಿಯನ್ನು ಮುಚ್ಚಿ ತಾವೇ ದುರಸ್ತಿಗೊಳಿಸಿದ್ದಾರೆ.
ಹೆದ್ದಾರಿ ದುರಸ್ತಿಗೆ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಡಿದ ಮನವಿಗಳು ಪ್ರಯೋಜನ ನೀಡಲಿಲ್ಲ. ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಗ್ರಾಮದ ಸಾರ್ವಜನಿಕರನ್ನು ಆಕ್ರೋಶಕ್ಕೀಡು ಮಾಡಿದೆ.