Indian Cricket Superstars : ಬಡತನದ ಹಿನ್ನೆಲೆಯಿಂದ ಬೆಳೆದು ಕಲೆ, ಕ್ರೀಡೆ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ ಅನೇಕ ಪ್ರತಿಭೆಗಳು ನಮ್ಮ ಸುತ್ತಲೂ ಇದಾರೆ. ಮುಂಬೈ ಇಂಡಿಯನ್ಸ್ ಮಾಲಕಿ ಮತ್ತು ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಅವರು ಅಂತಹ ಇಬ್ಬರು ಪ್ರತಿಭೆಗಳ ಹೆಸರನ್ನು ಇದೀಗ ಬಹಿರಂಗಪಡಿಸಿದ್ದಾರೆ. ಐಪಿಎಲ್‌ನಲ್ಲಿ ಮಿಂಚಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಬಗ್ಗೆ ಮಾತನಾಡಿದ್ದಾರೆ.
ಬೋಸ್ಟನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿದ್ದರ ಬಗ್ಗೆ ನೀತಾ ಅಂಬಾನಿ ಮುಕ್ತವಾಗಿ ಮಾತನಾಡಿದರು.
ಅಂದು ಕ್ರಿಕೆಟ್ ಶಿಬಿರವೊಂದರಲ್ಲಿ ನಾನು ಮೊದಲು ಇಬ್ಬರನ್ನು ಭೇಟಿಯಾದೆ. ಕಳೆದ ಮೂರು ವರ್ಷಗಳಿಂದ ಹಣವಿಲ್ಲದ ಕಾರಣ ಕೇವಲ ಮ್ಯಾಗಿ ನೂಡಲ್ಸ್ ಮಾತ್ರ ತಿನ್ನುತ್ತಿದ್ದೇವೆ ಎಂದು ಅವರು ನನಗೆ ಹೇಳಿದ್ದರು. ಇದನ್ನು ಕೇಳಿ ನನ್ನ ಮನಸ್ಸಿಗೆ ನೋವಾಯಿತು. ಕ್ರಿಕೆಟ್ ಬಗ್ಗೆ ಅವರಲ್ಲಿದ್ದ ಉತ್ಸಾಹ ಮತ್ತು ಚುರುಕುತನವನ್ನು ನಾನು ಗಮನಿಸಿದೆ. ಅದೇ ಗುಣ ಅವರನ್ನು ಇಂದು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಬಂದಿದೆ. ಆ ಇಬ್ಬರು ಯುವಕರು ಬೇರೆ ಯಾರೂ ಅಲ್ಲ, ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಎಂದು ನೀತಾ ಅಂಬಾನಿ ಹೇಳಿದರು.
ಐಪಿಎಲ್‌ನಲ್ಲಿ ಆಟಗಾರರನ್ನು ಖರೀದಿಸಲು ನಿಗದಿತ ಬಜೆಟ್ ಇದೆ. ಆದ್ದರಿಂದ, ಹೊಸ ಆಟಗಾರರನ್ನು ಹುಡುಕಲು ನಾವು ಹೊಸ ಮಾರ್ಗಗಳನ್ನು ಹುಡುಕಬೇಕಾಗಿತ್ತು. ಅದಕ್ಕಾಗಿ, ನನ್ನ ತಂಡವು ರಣಜಿ ಟ್ರೋಫಿ ಸೇರಿದಂತೆ ದೇಶೀಯ ಕ್ರಿಕೆಟ್ ಪಂದ್ಯಗಳಿಗೆ ಹೋಗುತ್ತಿತ್ತು. ಒಂದು ದಿನ, ನನ್ನ ತಂಡದ ಸದಸ್ಯರು ಇಬ್ಬರು ತೆಳ್ಳಗಿರುವ ಆಟಗಾರರೊಂದಿಗೆ ಶಿಬಿರಕ್ಕೆ ಬಂದಿದ್ದರು ಎಂದು ನೀತಾ ಅಂಬಾನಿ ನೆನಪಿಸಿಕೊಂಡರು.
ಹಾರ್ದಿಕ್ ಪಾಂಡ್ಯ 2015ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿದರು. ಮುಂಬೈ ಇಂಡಿಯನ್ಸ್, ಐಪಿಎಲ್ ಹರಾಜಿನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು 10,000 ಅಮೆರಿಕನ್ ಡಾಲರ್‌ಗೆ ಖರೀದಿಸಿತು. ಮರುವರ್ಷವೇ ಹಾರ್ದಿಕ್, ಭಾರತೀಯ ಕ್ರಿಕೆಟ್‌ನ ಭಾಗವಾದರು. ಇಂದು ಹಾರ್ದಿಕ್ ಪಾಂಡ್ಯ, ಮುಂಬೈ ಇಂಡಿಯನ್ಸ್‌ನ ಹೆಮ್ಮೆಯ ನಾಯಕ ಎಂದು ನೀತಾ ಅಂಬಾನಿ ಹೇಳಿದರು. (ಏಜೆನ್ಸೀಸ್)