ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಅವಧಿ ಪೂರ್ಣಗೊಂಡಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಅಕ್ಟೋಬರ್ 3ರಂದು ಚುನಾವಣೆ ನಿಗದಿಯಾಗಿದೆ.
ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟಣ್ಣವರ ಈ ಕುರಿತು ಆದೇಶ ಹೊರಡಿಸಿದ್ದಾರೆ. ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆಗೆ ನಾಮಪತ್ರ ಸಲ್ಲಿಸಲು ಅವಕಾಶವಿರುತ್ತದೆ. ಮಧ್ಯಾಹ್ನ 3 ಗಂಟೆಯ ಬಳಿಕ ನಾಮಪತ್ರಗಳ ಪರಿಶೀಲನೆ, ನಾಮಪತ್ರ ಹಿಂತೆಗೆದುಕೊಳ್ಳುವಿಕೆ, ಅಗತ್ಯವಿದ್ದಲ್ಲಿ ಮತಪತ್ರಗಳ ಮೂಲಕ ಚುನಾವಣೆ, ಬಳಿಕ ಮತ ಎಣಿಕೆ ಹಾಗೂ ಫಲಿತಾಂಶ ಘೊಷಣೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಪಾಲಿಕೆಯ ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಮತ್ತು ಲೆಕ್ಕಗಳ ಸ್ಥಾಯಿ ಸಮಿತಿಗಳಿಗೆ ತಲಾ 7 ಸದಸ್ಯರ ಆಯ್ಕೆ ನಡೆಯಬೇಕು. ಇಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿ ಪಕ್ಷ ಕಾಂಗ್ರೆಸ್ ನಡುವೆ 4-3ರ ಸೂತ್ರದಡಿ ಸದಸ್ಯ ಸ್ಥಾನ ಹಂಚಿಕೆಯಾಗುತ್ತದೆ.
ಈ ನಾಲ್ಕು ಸ್ಥಾಯಿ ಸಮಿತಿಗಳ ಅಧಿಕಾರಾವಧಿ ಆಗಸ್ಟ್ 16ರಂದು ಕೊನೆಗೊಂಡಿತ್ತು. ಸ್ಥಾಯಿ ಸಮಿತಿಗಳ ನೂತನ ಸದಸ್ಯರ ಆಯ್ಕೆ ಚುನಾವಣೆಗೆ ದಿನಾಂಕ ನಿಗದಿಪಡಿಸುವಂತೆ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಆಗಸ್ಟ್ 13ರಂದೇ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದರು.
ಪ್ರತಿ ವರ್ಷ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಯಂತೆ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಚುನಾವಣೆಯನ್ನು ಪ್ರಾದೇಶಿಕ ಆಯುಕ್ತರೇ ನಡೆಸಿಕೊಡುವುದು ರೂಢಿ. 4 ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವುದಿಲ್ಲ. ಸದಸ್ಯರ ಆಯ್ಕೆಯಾದ ಕೆಲ ದಿನಗಳ ಬಳಿಕ ಮೇಯರ್-ಉಪ ಮೇಯರ್ ಹಾಗೂ ಆಡಳಿತಾರೂಢ ಪಕ್ಷದ ಮುಖಂಡರ ಶಿಫಾರಸ್ಸಿನ ಮೇಲೆ ಸರ್ವಾನುಮತದಿಂದ ಆಯ್ಕೆ ನಡೆಯುತ್ತದೆ.