ಅಧಿಕಾರ ಹೋಗಲಿದೆ ಎಂಬ ಮೌಢ್ಯ ಮೀರಿ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಸಿಎಂ ಎಚ್ಡಿಕೆ

ತಲಕಾವೇರಿ (ಕೊಡಗು): ಮುಖ್ಯಮಂತ್ರಿಯಾಗಿರುವವರು ತಲಕಾವೇರಿಗೆ ಭೇಟಿ ಕೊಟ್ಟರೆ ಅಧಿಕಾರ ಹೋಗುತ್ತೆ ಎಂಬ ಮೂಢ್ಯವನ್ನೂ ಮೀರಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಅವರು ಇಂದು ತಲಕಾವೇರಿಯಲ್ಲಿ ಕಾವೇರಿಗೆ ಪೂಜೆ ಸಲ್ಲಿಸಿದರು.

ಪತ್ನಿ ಅನಿತಾ ಕುಮಾರಸ್ವಾಮಿ, ಸಚಿವರಾದ ಡಿ.ಕೆ ಶಿವಕುಮಾರ್​, ಸಾ.ರಾ ಮಹೇಶ್​ ಮತ್ತು ಕೆ.ಜಿ ಬೋಪಯ್ಯ ಅವರೊಂದಿಗೆ ಮೊದಲಿಗೆ ಭಗಂಡೇಶ್ವರ ದೇಗುಲಕ್ಕೆ ತೆರಳಿದ ಸಿಎಂ ಎಚ್ಡಿಕೆ ಪೂಜೆ ಸಲ್ಲಿಸಿದರು. ನಂತರ ಕಾವೇರಿ ನದಿ ಉಗಮಸ್ಥಾನ ತಲಕಾವೇರಿಯಲ್ಲಿ ಅಗಸ್ತ್ಯೇಶ್ವರ, ಕಾವೇರಿ ಕುಂಡಿಕೆ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಈ ವೇಳೆ ಎಚ್ಡಿಕೆ ದಂಪತಿ ಪಕ್ಕದಲ್ಲೇ ಸಚಿವ ಡಿಕೆಶಿ ಕೂಡ ಆಸೀನರಾಗಿದ್ದದ್ದು ವಿಶೇಷವಾಗಿತ್ತು.

19 ವರ್ಷಗಳ ಹಿಂದೆ ಜೆ.ಎಚ್.​ ಪಟೇಲ್​ ಅವರು ಮುಖ್ಯಮಂತ್ರಿಯಾಗಿದ್ದಾಗ ತಲಕಾವೇರಿಗೆ ಭೇಟಿ ಕೊಟ್ಟಿದ್ದು ಬಿಟ್ಟರೆ ನಂತರ ಯಾವುದೇ ಮುಖ್ಯಮಂತ್ರಿಗಳೂ ತಲಕಾವೇರಿಗೆ ಬಂದಿರಲಿಲ್ಲ. ಎಸ್​.ಎಂ ಕೃಷ್ಣ ಅವರೂ ಇದೇ ಕಾರಣಕ್ಕೆ ಇಲ್ಲಿಗೆ ಬರಲು ಹಿಂದೇಟು ಹಾಕಿದ್ದರೆನ್ನಲಾಗಿದೆ. ಇಲ್ಲಿಗೆ ಭೇಟಿ ಕೊಟ್ಟರೆ ಅಧಿಕಾರ ಹೋಗುತ್ತದೆ ಎಂಬ ಮೌಢ್ಯ ಆಗಿನಿಂದಲೂ ರಾಜಕಾರಣಿಗಳಲ್ಲಿ ಮನೆ ಮಾಡಿತ್ತು. ಆದರೆ, ಅವೆಲ್ಲವನ್ನು ಮೀರಿ ಸಿಎಂ ಎಚ್ಡಿಕೆ ಇಂದು ಪೂಜೆ ಸಲ್ಲಿಸಿದ್ದಾರೆ. ಈ ಮೂಲಕ 19 ವರ್ಷಗಳ ಮೌಢ್ಯಕ್ಕೆ ಕೊನೆ ಹಾಡಿದ್ದಾರೆ.

ತಲಕಾವೇರಿಗೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಮಾಧ್ಯಮಗಳಲ್ಲಿನ ವರದಿಯನ್ನು ಗಮನಿಸಿದ್ದೇನೆ. ಆದರೆ, ಮೂಢನಂಬಿಕೆಗಳಿಗೆ ನಾನು ಬೆಲೆ ಕೊಡುವವನಲ್ಲ. ಅವುಗಳಿಗೆ ಮಹತ್ವ ಕೊಡುವ ಅಗತ್ಯವೂ ಇಲ್ಲ. ಇಂದು ಕೆಆರ್‌ಎಸ್, ಕಬಿನಿಗೆ ಭೇಟಿ ನೀಡಿ ಬಾಗಿನ ಅರ್ಪಿಸುತ್ತೇನೆ ಎಂದರು.
|ಎಚ್​.ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ