ಮಳೆ ಸಂತ್ರಸ್ತರ ರಕ್ಷಣೆಗಾಗಿ ಅವಿರತ ಶ್ರಮಿಸುತ್ತಿದ್ದೇವೆ:ಎಚ್​.ಡಿ. ಕುಮಾರಸ್ವಾಮಿ

ಬೆಂಗಳೂರು: ಮಳೆ ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಪಡೆಗಳು ಅವಿರತ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರ ಸೇರಿ ಮಳೆಯಿಂದ ಹಾನಿಗೀಡಾದ ಜಿಲ್ಲೆಗಳ ಅಧಿಕಾರಿಗಳು, ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ರಾಜ್ಯದಲ್ಲಿ ಎದುರಾಗಿರುವ ವಿಷಮ ಪರಿಸ್ಥಿತಿಯನ್ನು ನಿಭಾಯಿಸಲು ಕೈಗೊಂಡಿರುವ ಕ್ರಮಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದರು.

ರಕ್ಷಣಾ ತಂಡಗಳಿಂದ ಅವಿರತ ಕಾರ್ಯಾಚರಣೆ

“ಭೂಕುಸಿತದಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ರಕ್ಷಣಾ ತಂಡಗಳು ಅವಿರತ ಕಾರ್ಯಾಚರಣೆ ನಡೆಸುತ್ತಿವೆ. 1000ಕ್ಕಿಂತ ಹೆಚ್ಚು ರಕ್ಷಣಾ ಸಿಬ್ಬಂದಿ, 50 ಜೆಸಿಬಿಗಳು, 75 ಸೇನಾ ಇಂಜಿನಿಯರ್​ಗಳು, NDRFನ 31, 550 ಮಂದಿ ಹೋಮ್‌ಗಾರ್ಡ್​ಗಳು, ಅಗ್ನಿಶಾಮಕ ದಳ, ನೌಕಾ ಪಡೆ, NCC ಕೆಡೆಟ್​ಗಳೂ ಸೇರಿ 920 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸುಮಾರು 2,500ಕ್ಕಿಂತ ಹೆಚ್ಚು ಜನರನ್ನು ಈ ವರೆಗೆ ರಕ್ಷಿಸಲಾಗಿದೆ. ಸಂತ್ರಸ್ತರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವಂತೆ ಸೂಚಿಸಲಾಗಿದೆ. ಸಂತಸ್ತರಿಗೆ ಆಹಾರದ ಪೊಟ್ಟಣಗಳನ್ನು ರವಾನೆ ಮಾಡಲಾಗುತ್ತಿದೆ. ಅಧಿಕಾರಿಗಳು 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ,” ಎಂದು ತಿಳಿಸಿದರು.

11 ಸಾವಿರ ಮನೆಗಳ ಹಾನಿ

ರಾಜ್ಯದಲ್ಲಿ ತೀವ್ರ ಮಳೆಯಿಂದಾಗಿ 11 ಸಾವಿರ ಮನೆಗಳು ಹಾನಿಗೊಳಗಾಗಿವೆ. ಈ ವರೆಗೆ 6 ಮಂದಿ ಸಾವಿಗೀಡಾಗಿದ್ದಾರೆ. ಹಾನಿಗೊಳಗಾದ ಪ್ರದೇಶಗಳ ಎಟಿಎಂಗಳಲ್ಲಿ ಸದಾ ಕಾಲ ಹಣ ಇರುವಂತೆ ನೋಡಿಕೊಳ್ಳಲು ಬ್ಯಾಂಗ್​ಗಳಿಗೆ ತಿಳಿಸಲಾಗಿದೆ. ಹಾನಿಗೊಳಗಾದ ರಸ್ತೆಗಳನ್ನು ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೇರೆ ಬೇರೆ ಪ್ರದೇಶಗಳಲ್ಲಿರುವ ಅಧಿಕಾರಿಗಳನ್ನು ರಕ್ಷಣಾ ಕಾರ್ಯಾಚರಣೆಗಾಗಿ ಕೊಡಗಿನಲ್ಲಿ ನಿಯೋಜಿಸಲಾಗಿದೆ ಎಂದು ಸಿಎಂ ತಿಳಿಸಿದರು.

ಹಾನಿ ಪರಿಹಾರಕ್ಕೆ 200 ಕೋಟಿ ರೂ.

“ಕೊಡಗು ಜಿಲ್ಲೆ ಮಳೆ ಹಾನಿ ನಿರ್ವಹಣೆಗಾಗಿ ಈಗಾಗಲೇ 200 ಕೋಟಿ ರೂ.ಗಳನ್ನು ಘೋಷಿಸಲಾಗಿದೆ. ಈಗಾಗಲೇ 100 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ಮನೆ ಕಳೆದುಕೊಂಡವರ ಪಟ್ಟಿ ಸಿದ್ಧಪಡಿಸುವಂತೆ ಸೂಚಿಸಿದ್ದೇವೆ. ನಿರಾಶ್ರಿತರಿಗೆ ಶೀಘ್ರವಾಗಿ ಮನೆ ಕಟ್ಟಿಕೊಡಲು ತೀರ್ಮಾನಿಸಲಾಗಿದ್ದು, ಇದಕ್ಕೆ ಹಣದ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುವುದು,” ಎಂದು ಹೇಳಿದರು.

ಕೊಡಗಿನಲ್ಲಿ 30, ರಾಜ್ಯದಲ್ಲಿ 70 ಗಂಜಿ ಕೇಂದ್ರ

ಕೊಡಗಿನಲ್ಲಿ ಪ್ರವಾಹದಿಂದ ನಿರಾಶ್ರಿತರಾದವರಿಗೆ 30 ಗಂಜಿಕೇಂದ್ರಗಳೂ ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿ 70 ಗಂಜಿಕೇಂದ್ರಳನ್ನು ಸ್ಥಾಪಿಸಲಾಗಿದೆ. ಪ್ರವಾಹ ಪೀಡಿತ ಜಿಲ್ಲೆಗಳ ವಿದ್ಯುಚ್ಛಕ್ತಿ, ಟೆಲಿಕಾಂ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಯಾವುದೇ ಕಾರಣಕ್ಕೂ ವಿದ್ಯುತ್, ದೂರವಾಣಿ ಸಂಪರ್ಕ ಕಡಿತಗೊಳ್ಳದಂತೆ ಸೂಚಿಸಲಾಗಿದೆ. ಔಷಧಗಳ ವಿತರಣೆಗೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ. ರಕ್ಷಣಾ ಕಾರ್ಯಕ್ಕೆ ಹಣದ ತೊಂದರೆ ಆಗದಂತೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾನಿ ಬಗ್ಗೆ ವರದಿ ನೀಡಿದ್ದಾರೆ. ಸಚಿವರಾದ ಜಾರ್ಜ್‌, ಜಯಮಾಲಾ, ಡಿ.ಸಿ.ತಮ್ಮಣ್ಣ ಮಳೆ ಹಾನಿಯ ವರದಿ ನೀಡಿದ್ದಾರೆ ಎಂದರು.

ಇನ್ನು ಶಿವಮೊಗ್ಗ, ಚಿಕ್ಕಮಗಳೂರಿನ ಅಡಕೆ, ಕಾಫಿ ಬೆಳೆ ಹಾನಿಯ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದಿರುವುದಾಗಿ ತಿಳಿಸಿದ ಸಿಎಂ, ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇದೇ ವೇಳೆ ಸಿಎಂ ಪರಿಹಾರ ನಿಧಿಗೆ ಧನ ಸಹಾಯ ಮಾಡಿದವರಿಗೆ ಅವರು ಧನ್ಯವಾದ ಅರ್ಪಿಸಿದರು.

ಸಭೆ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಳೆ ಹಾನಿ ವೀಕ್ಷಣೆಗಾಗಿ ಕೊಡಗಿಗೆ ತೆರಳಿದರು.

ಕೊಡಗಿಗೆ ಹೆಲಿಕಾಪ್ಟರ್​ ಮೂಲಕ ಪ್ರಯಾಣ ಕೈಗೊಂಡ ಸಿಎಂ ಎಚ್ಡಿಕೆ

ಸ್ಥಳೀಯ ಸಂಸ್ಥೆ ಚುನಾವಣೆ ಮುಂದೂಡಿಕೆ?

ಕೊಡಗು ಜಿಲ್ಲೆಯಲ್ಲಿ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಉಂಟಾಗಿರುವ ಸಮಸ್ಯೆಯಿಂದಾಗಿ ಕುಶಾಲನಗರ, ವಿರಾಜಪೇಟೆ, ಸೋಮವಾರಪೇಟೆ ನಗರಸಭೆ, ಪುರಸಭೆಗಳಿಗೆ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡುವ ಸಾಧ್ಯತೆಗಳಿವೆ. ಈ ಕುರಿತು ಚುನಾವಣೆ ಆಯೋಗ ಶೀಘ್ರದಲ್ಲೇ ಆದೇಶ ಹೊರಡಿಸುವ ಸಾಧ್ಯತೆಗಳಿವೆ.