More

    ಮತಕ್ಕಾಗಿ ಬಿಎಸ್‌ವೈ ಪರ ಕೈ ನಾಯಕರು: ಕಾಂಗ್ರೆಸ್ ವಿರುದ್ಧ ಎಚ್‌ಡಿಕೆ ಆರೋಪ ನಿರ್ದಿಷ್ಟ ಸಮುದಾಯದ ಓಲೈಕೆಗೆ ಯತ್ನ

    ರಾಮನಗರ : ಒಂದು ಸಮುದಾಯದ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟು ಕಾಂಗ್ರೆಸ್‌ನವರು ಯಡಿಯೂರಪ್ಪ ಅವರ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
    ನಗರದ ಕರಗ ಮಹೋತ್ಸವ ಹಿನ್ನೆಲೆಯಲ್ಲಿ ಪತ್ನಿ
    ಅನಿತಾ ಕುಮಾರಸ್ವಾಮಿ ಜತೆ ಮಂಗಳವಾರ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಪರವಾಗಿ ಕಾಂಗ್ರೆಸ್ ನಾಯಕರು ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದರೆ ಇದು ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ಟವಲ್ ಹಾಕಿರುವವರು ಬಿಎಸ್‌ವೈ ಪರ ಮೃದು ಧೋರಣೆ ಹೊಂದಿರುವಂತೆ ಮಾತನಾಡುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಯಡಿಯೂರಪ್ಪ ಅವರಲ್ಲ, ಬದಲಿಗೆ ಅವರ ಮೂಲಕ ಒಂದು ಸಮುದಾಯವನ್ನು ಓಲೈಸಿಕೊಳ್ಳಬಹುದು ಎನ್ನುವ ಲೆಕ್ಕಾಚಾರದಲ್ಲಿ ಇದ್ದಾರೆ ಎಂದು ಟಾಂಗ್ ನೀಡಿದರು.
    ಇದರ ಜತೆಗೆ ಮತ್ತೊಬ್ಬ ಕಾಂಗ್ರೆಸ್ ನಾಯಕರು ಈಗಿದ್ದ ಸಿಎಂ ಭ್ರಷ್ಟರು, ಮುಂದೆ ಬರುವವರು ಭ್ರಷ್ಟರೇ ಎಂದು ಹೇಳುತ್ತಾರೆ.

    ಈ ರೀತಿ ದ್ವಂದ್ವ ಏಕೆ ಎಂದು ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ತಿರುಗೇಟು ನೀಡಿದರು.ಪ್ರಸ್ತುತ ರಾಜ್ಯದಲ್ಲಿ ಎದುರಾಗಿರುವ ಬೆಳವಣಿಗೆಯನ್ನು ಜೆಡಿಎಸ್ ಎಂದೂ ರಾಜಕೀಯ ಲಾಭಕ್ಕೆ ಬಳಕೆ ಮಾಡಿಕೊಳ್ಳುವುದಿಲ್ಲ. ಈ ಚಿಂತನೆಯೂ ಇಲ್ಲ. ಯಾವುದೇ ಸರ್ಕಾರ ಇದ್ದರೂ ಜನಪರವಾಗಿ ಚಿಂತಿಸಲಿ ಎಂದಷ್ಟೇ ಹೇಳುತ್ತೇನೆ. ಪ್ರಸ್ತುತ ಬೆಳವಣಿಗೆಯಿಂದ ರಾಜ್ಯದ ಜನತೆಗೆ ತೊಂದರೆ ಆಗಬಾರದು ಅಷ್ಟೇ ಎಂದು ತಿಳಿಸಿದರು.

    ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದು ಆ ಪಕ್ಷದ ಆಂತರಿಕ ವಿಚಾರ. ಪಕ್ಷದ ಬೆಳವಣಿಗೆ, ಹಿಂದಿನ ಸರ್ಕಾರದ ಸಾಧನೆ, ವೈಫಲ್ಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ತರಿಸಿಕೊಂಡಿರುತ್ತಾರೆ. ಆ ಪಕ್ಷದ ವರಿಷ್ಠರು ತೀರ್ಮಾನ ಮಾಡಲಿದ್ದಾರೆ, ಅದಕ್ಕೂ ನಮಗೂ ಸಂಬಂಧವಿಲ್ಲ ಎಂದರು.
    ಜನತೆ ಎಚ್ಚರಿಕೆಯಿಂದಿರಿ: ಕರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಸತತ ಎರಡನೇ ವರ್ಷವೂ ಚಾಮುಂಡೇಶ್ವರಿ ಕರಗದ ಅದ್ದೂರಿ ಮಹೋತ್ಸವಕ್ಕೆ ತಡೆಯಾಗಿದೆ. ಆದರೆ ಜನತೆ ಈಗಲೂ ಮೈಮರೆಯಬಾರದು. ಈಗಾಗಲೇ ತಜ್ಞರು ಮೂರನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಪ್ರತಿಯೊಬ್ಬರೂ ತಪ್ಪದೇ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಉತ್ಸವ ಆಚರಿಸಬೇಕು ಎಂದು ಎಚ್‌ಡಿಕೆ ತಿಳಿ ಹೇಳಿದರು.
    ಶಾಸಕಿ ಅನಿತಾ ಕುಮಾರಸ್ವಾಮಿ, ಮುಖಂಡರಾದ ರಾಜಶೇಖರ್, ಬಿ.ಉಮೇಶ್, ಗೂಳಿಗೌಡ, ಹೋಟೆಲ್ ಉಮೇಶ್, ಅಶ್ವತ್ಥ, ಪ್ರಕಾಶ್, ಲಿಂಗೇಶ್‌ಕುಮಾರ್, ಜಿ.ಟಿ.ಕೃಷ್ಣ, ಮೋಹನ್‌ಗೌಡ, ಗ್ಯಾಬ್ರಿಯಲ್, ಎ.ರವಿ, ಚೇತನ್, ವೆಂಕಟೇಶ್, ಮಹೇಶ್, ಆಡಿಟರ್ ಕುಮಾರ್, ಪ್ರಸನ್ನ ಮುಂತಾದವರು ಇದ್ದರು.

    ಸ್ವತಂತ್ರವಾಗಿ ಅಧಿಕಾರಕ್ಕೆ :  ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದೇನೆ, ಆದರೆ ಎಂದೂ ಜನರ ಸಂಪೂರ್ಣ ಆಶೀರ್ವಾದ ಪಡೆದುಕೊಂಡು ಅಧಿಕಾರ ನಡೆಸಿಲ್ಲ, ಅದೃಷ್ಟದ ಮೂಲಕ ಅಧಿಕಾರಕ್ಕೆ ಬಂದಿದ್ದೇನೆ. ಆದರೆ ಮುಂದಿನ ದಿನಗಳಲ್ಲಿ ಜೆಡಿಎಸ್‌ಗೆ ಭವಿಷ್ಯವಿದೆ ಎನ್ನುವ ವಿಶ್ವಾಸವಿದೆ ಎಂದರು. ಭವಿಷ್ಯದಲ್ಲಿ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಮಾಡಿ ಸಂಪೂರ್ಣ ಬಹುಮತದೊಂದಿಗೆ ಜೆಡಿಎಸ್‌ಗೆ ಅಧಿಕಾರ ನೀಡುತ್ತಾಳೆ. ಪಕ್ಷ ಎಂದಿಗೂ ರೈತರ, ದೀನ ದಲಿತರ ಪರವಾಗಿ ಕೆಲಸ ಮಾಡಲಿದ್ದು, ಜೆೆಡಿಎಸ್‌ಗೆ ಭವಿಷ್ಯವಿಲ್ಲ, ಮುಳುಗೇ ಹೋಯ್ತು ಎನ್ನುವವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ಸಿಗಲಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts