ಲೋಕಸಭೆ ಸೀಟು ಹಂಚಿಕೆಯಲ್ಲಿ 28ರಲ್ಲಿ 12 ನಮಗೆ ಸಿಗಬೇಕು: ಮಾಜಿ ಪ್ರಧಾನಿ ಎಚ್​ಡಿಡಿ

ಬೆಂಗಳೂರು: ಲೋಕಸಭೆ ಸೀಟು ಹಂಚಿಕೆಯಲ್ಲಿ 28ರಲ್ಲಿ 12 ನಮಗೆ ಸಿಗಬೇಕು. ಯಾವುದೇ ಸಮಸ್ಯೆ ಇಲ್ಲದಂತೆ ಈ ಹಂಚಿಕೆ ಮಾಡಿಕೊಳ್ಳುತ್ತೇವೆ. ಜ.8ರಂದು ಲೋಕಸಭೆ ಅಧಿವೇಶನ ಮುಗಿಯಲಿದ್ದು, ಜ.15ರೊಳಗೆ ರಾಹುಲ್​ ಗಾಂಧಿ ಜತೆ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಸಿ ಅಂತಿಮ ಮಾಡುತ್ತೇವೆ ಎಂದು ಎಂದು ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಇದಾದ ನಂತರ ಏಳೆಂಟು ಜಿಲ್ಲೆಗಳಿಗೆ ನಾವು ಪ್ರವಾಸ ಮಾಡುತ್ತೇವೆ. ಮಾರ್ಚ್ ಮೊದಲ ವಾರದಲ್ಲೇ ಪ್ರವಾಸ ಆರಂಭಿಸುತ್ತೇವೆ. ಮೈತ್ರಿ ಸರ್ಕಾರ ಮಾಡಿದ್ದೇವೆ ಅಂತ ಫುಲ್ ಸಲಿಗೆ ಬಿಡಲ್ಲ. ಪ್ರಾದೇಶಿಕ ಪಕ್ಷದ ಉಳಿವು ಮುಖ್ಯ ಎಂದರು.

ಉಪ ಸಭಾಪತಿ, ಸಚೇತಕ ಸ್ಥಾನ ನಮಗೆ ಬಿಟ್ಟುಕೊಟ್ಟಿದ್ದಾರೆ. ಅಂತಿಮ ಕ್ಷಣದವರೆಗೂ ಸಭಾಪತಿ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದೆವು. ಆದರೆ, ಆಗಲಿಲ್ಲ. ಇದಕ್ಕಾಗಿ ಸರ್ಕಾರಕ್ಕೆ ಸಂಚಕಾರ ತಂದುಕೊಳ್ಳಲು ಆಗುತ್ತಾ ಎಂದು ಗೌಡರು ಪ್ರಶ್ನಿಸಿದರು.

ಪರಮೇಶ್ವರ್ ಗೃಹ ಖಾತೆಯಿಂದ ಕೈಬಿಟ್ಟಿದ್ದಕ್ಕೆ ರೇವಣ್ಣ ಬೇಸರ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಪಕ್ಷದ ನಿರ್ಧಾರ ಅವರಿಗೆ ಸೇರಿದೆ. ನಮಗೆ ಖಾತೆ ಹಂಚಿಕೆಯಲ್ಲಿ ಅಸಮಾಧಾನವಿಲ್ಲ. ರೇವಣ್ಣ ಅವರು ಅವರ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರಷ್ಟೆ ಎಂದರು.

ಉಳಿದುಕೊಂಡಿರುವ ನಮ್ಮ ಎರಡು ಖಾತೆಗಳನ್ನು ಹಂಚುವುದು ಸ್ವಲ್ಪ ತಡವಾಗಬಹುದು. ಮೊದಲು ಲೋಕಸಭಾ ಚುನಾವಣೆಗೆ ಗಮನಕೊಡಬೇಕಿದೆ ಎಂದರು.

ಸ್ವಲ್ಪ ಗೊಂದಲ ಇದೆ
ನಿಗಮ ಮಂಡಳಿ ನೇಮಕದಲ್ಲಿ ಸ್ವಲ್ಪ ಗೊಂದಲ ಆಗಿದೆ. ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಹೊರತುಪಡಿಸಿ, ನಿಗಮ ಮಂಡಳಿ ನೇಮಕದ ಬಗ್ಗೆ ಅಸಮಾಧಾನ ಇಲ್ಲ. 20 ಸ್ಥಾನ ಕಾಂಗ್ರೆಸ್, 10 ಸ್ಥಾನ ನಮಗೆ ಬಂದಿದೆ ಎಂದರು. (ದಿಗ್ವಿಜಯ ನ್ಯೂಸ್)