More

    ರೋಡ್ ಶೋಗೆ ಜನ ಮರುಳಾಗಲ್ಲ

    ಶಿಡ್ಲಘಟ್ಟ: ರಾಜ್ಯದಲ್ಲಿ ಬಿಜೆಪಿ ಶಕ್ತಿ ಕುಂದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಗೊತ್ತಾಗಿದೆ. ಹೀಗಾಗಿ ಕರ್ನಾಟಕದಲ್ಲಿ ನಿರಂತರ ರೋಡ್ ಶೋ ಮಾಡುತ್ತಿದ್ದಾರೆ. ರೋಡ್ ಶೋ ಮಾಡಿ ಜನರನ್ನು ಮರುಳು ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

    ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿನ ಮೈದಾನದಲ್ಲಿ ಶನಿವಾರ ಜೆಡಿಎಸ್ ಅಭ್ಯರ್ಥಿ ಬಿ.ಎನ್ ರವಿಕುಮಾರ್ ಪರವಾಗಿ ಮತಯಾಚಿಸಿ ಮಾತನಾಡಿ, ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿಲ್ಲ. ಆದರೂ ಪ್ರಧಾನಮಂತ್ರಿಗಳು ಸತತವಾಗಿ ರೋಡ್ ಶೋ ಮಾಡುತ್ತಿದ್ದಾರೆ. ಆ ಪಕ್ಷಕ್ಕೆ ಯಾವ ಸ್ಥಿತಿ ಬಂದಿದೆ ಎಂಬುದು ಇದರಿಂದ ಅರ್ಥವಾಗುತ್ತದೆ. ರಾಜ್ಯದ ಜನರು ಬುದ್ಧಿವಂತರಿದ್ದಾರೆ, ರೋಡ್ ಶೋನಿಂದ ಇಲ್ಲಿನ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ. ಬಿಜೆಪಿ ಆಡಳಿತ ಇರುವ ಯಾವುದೇ ರಾಜ್ಯದಲ್ಲೂ ಒಬ್ಬ ಮುಸ್ಲಿಂ ಮಂತ್ರಿ ಇಲ್ಲ. ನಾವು ಭಾರತಾಂಬೆಯ ಮಕ್ಕಳು, ನಾವೆಲ್ಲರೂ ಒಂದು. ಏಕೆ ಈ ತಾರತಮ್ಯ ಎಂದು ಪ್ರಶ್ನಿಸಿದರು.

    ಕರ್ನಾಟಕದಲ್ಲಿ ಜಾತ್ಯಾತೀತ ಸರ್ಕಾರ ರಚನೆ ಮಾಡುವ ಸಲುವಾಗಿ ಕಾಂಗ್ರೆಸ್‌ನೊಂದಿಗೆ ಬೇಷರತ್ತಾಗಿ ಸಮ್ಮಿಶ್ರ ಸರ್ಕಾರವನ್ನು ಕುಮಾರಸ್ವಾಮಿ ನೇತೃತ್ವದಲ್ಲಿ ರಚಿಸಲಾಯಿತು. ಆದರೆ ಕೆಲ ಕಾಂಗ್ರೆಸ್ ಮುಖಂಡರು ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಪ್ರಾರಂಭದಿಂದ ಷಡ್ಯಂತ್ರ ಮತ್ತು ಹುನ್ನಾರಗಳನ್ನು ನಡೆಸುತ್ತಾ ಬಂದರು. ಕೊನೆಯದಾಗಿ ಸರ್ಕಾರ ಬೀಳಿಸಲು 18 ಜನರನ್ನು ಮುಂಬೈ ಕಳುಹಿಸಿದವರು ಯಾರು ಎಂದು ಆತ್ಮಾವಲೋಕನ ಮಾಡಿಕೊಳಲಿ ಎಂದರು. ಕರ್ನಾಟಕದಲ್ಲಿ ಜಾತ್ಯತೀತ ಸರ್ಕಾರ ಅಧಿಕಾರಕ್ಕೆ ಬರಲು ಕೆಲ ಕಾಂಗ್ರೆಸ್ಸಿಗರಿಗೆ ಇಷ್ಟವಿಲ್ಲ. ಹೀಗಾಗಿ ಅವರು ಸಮ್ಮಿಶ್ರ ಸರ್ಕಾರ ಪತನಗೊಳಿಸಿದರು ಎಂದು ಆರೋಪಿಸಿದರು.

    ಜೆಡಿಎಸ್ ಅಭ್ಯರ್ಥಿ ಬಿ.ಎನ್.ರವಿಕುಮಾರ್ ಮಾತನಾಡಿ, ಹಣ ಸಂಪಾದಿಸಲು ನಾನು ರಾಜಕಾರಣ ಮಾಡಿದವನಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯಾದ ನಾನು ನಾಲ್ಕು ಸಾರ್ವತ್ರಿಕ ಚುನಾವಣೆ ಎದುರಿಸುವಲ್ಲಿ ಸಾಕಷ್ಟು ಕಷ್ಟಪಟ್ಟಿದ್ದೇನೆ. ಎಂದಿಗೂ ಅಧಿಕಾರಕ್ಕೆ ನಾನು ಕಣ್ಣೀರಿಟ್ಟಿಲ್ಲ, ಹತ್ತಿರದವರಿಗೆ, ನನ್ನನ್ನು ನಂಬಿದವರಿಗೆ ಕಷ್ಟ ಬಂದಾಗ ಮಾತ್ರ ಕಣ್ಣಲ್ಲಿ ನೀರು ಬರುತ್ತದೆ ಎಂದರು.

    ಜೆಡಿಎಸ್ ಅಭ್ಯರ್ಥಿ ಭಾಷಣ ಮಾಡುವ ವೇಳೆ ಮಸೀದಿಗಳಲ್ಲಿ ಅಜಾನ್ ಕೇಳಿಸಿ ಮಾತು ನಿಲ್ಲಿಸಿ ಗೌರವ ಸಲ್ಲಿಸಿದರು. ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಜ್ರುಲ್ಲಾ ಖಾನ್, ಜೆಡಿಎಸ್ ವಕ್ತಾರೆ ಯುಟಿ ಫರ್ಝಾನ ಖಾನ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮುಖಂಡರಾದ ಬಂಕ್‌ಮುನಿಯಪ್ಪ, ಹುಜಗೂರು ರಾಮಣ್ಣ, ಶಿವಾರೆಡ್ಡಿ, ತಾಲೂಕು ಜೆಡಿಎಸ್ ಅಧ್ಯಕ್ಷ ಡಿ.ಬಿ.ವೆಂಕಟೇಶ್, ನಗರಸಭೆ ಅಧ್ಯಕ್ಷೆ ಸುಮಿತ್ರ ರಮೇಶ್, ಹೈದರ್‌ಅಲೀ, ರಹಮತ್ತುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

    ಎತ್ತಿನಹೊಳೆ ಯೋಜನೆ ಬರ್ತಾಯಿದೆ: ರಾಜ್ಯದ ಮುಖ್ಯಮಂತ್ರಿಯಾಗಿ ದೇಶದ ಪ್ರಧಾನಮಂತ್ರಿಯಾಗಿ ಮಹಿಳೆಯರಿಗೆ, ಮುಸ್ಲಿಂ ಮತ್ತು ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಕಲ್ಪಿಸಿದ್ದೇನೆ. ರಾಜ್ಯದ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕೆಲಸ ಮಾಡಿದ್ದೇನೆ. ಆದರೆ, ಹಿಂದಿನ ಸರ್ಕಾರಗಳಿಂದ ಕರ್ನಾಟಕದ ಬಯಲುಸೀಮೆ ಪ್ರದೇಶಗಳಿಗೆ ಎತ್ತಿನಹೊಳೆ ಯೋಜನೆ ಬರ್ತಾಯಿದೆ, ಬರ್ತಾಯಿದೆ, ಬರ್ತಾಯಿದೆ ಎಂದು ಮಾಜಿ ಪ್ರಧಾನಿ ವ್ಯಂಗ್ಯವಾಡಿದರು.

    ನನ್ನ ಆಸೆ ಈಡೇರಿಸಿ: ನನಗೆ 90 ವರ್ಷ ವಯಸ್ಸಾದರೂ ಪ್ರತಿನಿತ್ಯ ಹತ್ತರಿಂದ ಹನ್ನೆರಡು ಸಭೆಯಲ್ಲಿ ಭಾಗವಹಿಸಿ ರಾತ್ರಿ 3 ಗಂಟೆಗೆ ಮಲಗುತ್ತಿದ್ದೇನೆ. ರಾಜ್ಯದ ಹಿಂದು-ಮುಸ್ಲಿಂ ಎಂಬ ಭೇದಭಾವವಿಲ್ಲದೆ ಭಾರತಾಂಬೆಯ ಮಕ್ಕಳಾಗಿ ಎಲ್ಲರೂ ಅನ್ಯೋನ್ಯದಿಂದ ಬದುಕಬೇಕು. ಕರ್ನಾಟಕದ ಅಭಿವೃದ್ಧಿಗಾಗಿ ಮತ್ತೊಮ್ಮೆಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಮತ್ತು ಶಿಡ್ಲಘಟ್ಟ ಕ್ಷೇತ್ರದ ಶಾಸಕರಾಗಿ ಬಿ.ಎನ್.ರವಿಕುಮಾರ್ ಅವರನ್ನು ಕಾಣಬೇಕು ಎಂಬ ನನ್ನ ಆಸೆ ಈಡೇರಿಸಿ ಎಂದು ದೇವೇಗೌಡ ಮನವಿ ಮಾಡಿದರು.

    ಜನರಿಗೆ ರಾಜಕೀಯ ಪ್ರಬುದ್ಧತೆ ಇದೆ: ಜೆಡಿಎಸ್‌ಗೆ ಮತ ನೀಡಬೇಡಿ, ಅತಂತ್ರ ಸರ್ಕಾರ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ವಿಚಾರವಾಗಿ ದೇವೇಗೌಡರು ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ತೀರ್ಮಾನ ಮಾಡುವ ರಾಜಕೀಯ ಪ್ರಬುದ್ಧತೆ ನಾಡಿನ ಜನರಿಗಿದೆ. ಮೋದಿ ಹೇಳಿಕೆಗೆ ಪ್ರತಿಕ್ರಿಯೆ ಅಗತ್ಯ ಇಲ್ಲ. ಏಳೂವರೆ ಕೋಟಿ ಜನರಿಗೆ ತೀರ್ಪು ಕೊಡುವ ಶಕ್ತಿ ಇದೆ. ಜೆಡಿಎಸ್‌ಗೆ ಮತ ಕೊಡಬೇಡಿ ಎಂಬ ಅಧಿಕಾರ ಮೋದಿ ಅವರಿಗಿದೆಯೇ. ಕರ್ನಾಟಕಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದು ಜನರಿಗೆ ತಿಳಿದಿದೆ. ಅದರ ಬಗ್ಗೆ ತೀರ್ಪು ಕೊಡುವ ಅಧಿಕಾರ ಜನರಿಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಉತ್ತರಿಸಿದರು.

    ಬೆನ್ನಿಗೆ ಚೂರಿ: ಕಳೆದ ಚುನಾವಣೆಯಲ್ಲಿ ಬಿ.ಎನ್.ರವಿಕುಮಾರ್ ಸೋಲುವನೆಂದುಕೊಂಡಿರಲಿಲ್ಲ. ಜೆಡಿಎಸ್ ಬೆನ್ನಿಗೆ ಚೂರಿ ಹಾಕಿ ಹೊರಗೆ ಹೋದವರು ನಡೆದುಕೊಂಡ ರೀತಿ ನನ್ನ ಕಣ್ಣಿಗೆ ಕಟ್ಟಿದಂತಿದೆ. ಅದನ್ನು ನೆನೆದಾಗ ನನ್ನ ಹೃದಯ ನೋವಿನಿಂದ ಅರಗಿಸುತ್ತಿದೆ. ಈ ಬಾರಿ ಬಿ.ಎನ್.ರವಿಕುಮಾರ್ ಕೈ ಹಿಡಿಯಿರಿ ಎಂದು ಜನರಲ್ಲಿ ಎಚ್.ಡಿ.ದೇವೇಗೌಡ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts