ಎಚ್‌ಡಿಡಿ ಕೊಡುಗೆ ಗೆಲುವಿಗೆ ಸಹಕಾರಿ

ರಕಲಗೂಡು: ಜಿಲ್ಲೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕೊಡುಗೆ ಅಪಾರವಾಗಿದ್ದು, ಜೆಡಿಎಸ್ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ತಾನು ಸ್ಪರ್ಧಿಸಿರುವ 8 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಈ ಬಗ್ಗೆ ಅನುಮಾನ ಬೇಡ ಎಂದರು.
ದೇವೇಗೌಡರು ತಮ್ಮ 60 ವರ್ಷದ ರಾಜಕೀಯ ಜೀವನದಲ್ಲಿ ರೈತರು, ಬಡವರ ನೋವಿಗೆ ಸ್ಪಂದಿಸಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡರೆ ಸ್ಪರ್ಧಿಸಬೇಕು ಎಂಬುದು ಈಗಲೂ ನಮ್ಮೆಲ್ಲರ ಬಯಕೆಯಾಗಿದೆ ಎಂದು ಹೇಳಿದರು.

ಕಷ್ಟ ಕಾಲದಲ್ಲಿ ದೇವೇಗೌಡರಿಗೆ ರಾಜಕೀಯವಾಗಿ ಮರುಜನ್ಮ ನೀಡಿದ ಈ ತಾಲೂಕಿನ ಮತದಾರರ ಬಗ್ಗೆ ತಮ್ಮ ಕುಟುಂಬಕ್ಕೆ ಅತ್ಯಂತ ಗೌರವದ ಭಾವನೆ ಇದೆ. ತಾಲೂಕಿನ ಅಭಿವೃದ್ಧಿ ವಿಚಾರ ಬಂದಾಗ ಯಾವುದೇ ತಾರತಮ್ಯಮಾಡುವುದಿಲ್ಲ. ಕಳೆದ 10 ವರ್ಷಗಳಲ್ಲಿ ಹಿಂದಿನ ಸಚಿವರು ಮಾಡಿದಾದರು ಏನು ಎಂದು ಎ.ಮಂಜು ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಚುನಾವಣೆಯಲ್ಲಿ ಪ್ರಜ್ವಲ್ ಸ್ಪರ್ಧಿಸಿಲ್ಲ. ದೇವೇಗೌಡರೆ ಸ್ಪರ್ಧಿಸಿದ್ದಾರೆ ಎಂದು ಭಾವಿಸಿ ಹೆಚ್ಚಿನ ಬಹುಮತದಿಂದ ಗೆಲವು ದೊರಕಿಸಿಕೊ ಡಲು ತಾಲೂಕಿನ ಜನತೆ ಹಾಗೂ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಲೋಕಸಭೆಯ ಸಂಭವನೀಯ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ತಾತ ದೇವೇಗೌಡರ ಮಾರ್ಗದರ್ಶನದಲ್ಲಿ ನಡೆದು ಜಿಲ್ಲೆಗೆ ಕೀರ್ತಿ ತರುವಂತೆ ಕೆಲಸ ಮಾಡುತ್ತೇನೆ. ಜಿಲ್ಲೆಯ ಸಮಸ್ಯೆಗಳನ್ನು ಅರ್ಥೈಸಿಕೊಂಡು ಕಾರ್ಯ ನಿರ್ವಹಿಸುತ್ತೇನೆ ಎಂದರು.

ಶಾಶಕ ಎ.ಟಿ. ರಾಮಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಪುಟ್ಟಸೋಮಪ್ಪ, ರಂಗಸ್ವಾಮಿ, ಸಾಧಿಕ್ ಸಾಬ್, ರವಿಕುಮಾರ್, ಲೋಕೇಶ್, ಅನಿಲ್ ಕುಮಾರ್, ಲೋಕನಾಥ್, ರಾಜೇಗೌಡ, ಚೌಡೇಗೌಡ ಮುಂತಾದವರು ಉಪಸ್ಥಿತರಿದ್ದರು.