ನಿಗಮಮಂಡಳಿ ಅಧ್ಯಕ್ಷರ ನೇಮಕಾತಿಯಲ್ಲಿ ನನ್ನ ಹಸ್ತಕ್ಷೇಪವಿಲ್ಲ: ಎಚ್​.ಡಿ.ರೇವಣ್ಣ

ಹಾಸನ: ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ವಿಚಾರದಲ್ಲಿ ನಾನು ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಅದು ಎಚ್​.ಡಿ.ದೇವೇಗೌಡರು ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬಿಟ್ಟ ವಿಚಾರ ಎಂದು ಸಚಿವ ಎಚ್​. ಡಿ.ರೇವಣ್ಣ ಹೇಳಿದರು.

ನಾನು ನಿಗಮ ಮಂಡಳಿ ನೇಮಕದಲ್ಲಾಗಲಿ, ಯಾವುದೇ ಖಾತೆಯಲ್ಲಾಗಲಿ ಹಸ್ತಕ್ಷೇಪ ಮಾಡಿಲ್ಲ. ಈ ಬಗ್ಗೆ ಕಾಂಗ್ರೆಸ್​ ಹೈಕಮಾಂಡ್​ ಕೇಳಿದರೆ ಹೇಳುತ್ತೇನೆ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದರು.

ಸಚಿವ ಪುಟ್ಟರಂಗಶೆಟ್ಟಿ ಕುರಿತು ಮಾತನಾಡಿದ ಅವರು, ಪುಟ್ಟರಂಗಶೆಟ್ಟಿ ಹಿಂದುಳಿದ ವರ್ಗದ ನಾಯಕ. ವಿಧಾನಸೌಧದಲ್ಲಿ ಸಿಕ್ಕ ಹಣಕ್ಕೂ, ಅವರಿಗೂ ಯಾವುದೇ ಸಂಬಂಧವಿಲ್ಲ. ಯಾರಾದರೂ ಹಣ ತಂದು ಸಚಿವರ ಹೆಸರು ಹೇಳಿದರೆ. ಅದಕ್ಕೆ ಅವರೇಕೆ ಹೊಣೆಯಾಗುತ್ತಾರೆ. ಇದರ ಹಿಂದೆ ಯಾವುದೋ ಷಡ್ಯಂತ್ರ ಇದೆ ಎಂದು ರೇವಣ್ಣ ಪುಟ್ಟರಂಗಶೆಟ್ಟಿ ಪರ ಮಾತನಾಡಿದರು.