ಜಿಲ್ಲಾಡಳಿತ ಪ್ರಾಮಾಣಿಕತೆ ತೋರಲಿ

ಹಾಸನ: ತಾಲೂಕಿನ ಸೋಮನಹಳ್ಳಿ ಕಾವಲು ವ್ಯಾಪ್ತಿಯ ಸರ್ಕಾರಿ ಬೀಳು ಭೂಮಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರು ಕುಟುಂಬದ ಹೆಸರಿಗೆ ಬರೆಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೋರ್ಟ್ ವರದಿ ಕೇಳಿದ್ದು, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಎ.ಮಂಜು ಒತ್ತಾಯಿಸಿದರು.
ನಾನು ಈ ಹಿಂದೆಯೇ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದೆ. ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದೆ. ಅಕ್ರಮ ಎಲ್ಲಿ ನಡೆದಿದೆ ಎಂಬ ಅರಿವಾಗಿ ಅವರು ಸೂಕ್ತ ಉತ್ತರ ನೀಡಲಿಲ್ಲ. ಹೀಗಾಗಿ ನ್ಯಾಯಾಲಯದ ಮೆಟ್ಟಿಲೇರಿದೆ ಎಂದು ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದರು.
69 ಎಕರೆ ಸರ್ಕಾರಿ ಭೂಮಿ ಮಂಜೂರು ಮಾಡಿಸಿಕೊಂಡಿರುವುದಾಗಿ ದಾಖಲೆ ಸಮೇತ ಕೋರ್ಟ್‌ಗೆ ಹೇಳಿದ್ದೆ. ಆದ್ದರಿಂದ ವರದಿ ಸಲ್ಲಿಸಲು ಕೋರ್ಟ್ ಆದೇಶಿಸಿದೆ. ಗ್ರಾಮ ಲೆಕ್ಕಾಧಿಕಾರಿಗಳನ್ನು ವರ್ಗ ಮಾಡುವ ಅಧಿಕಾರ ಜಿಲ್ಲಾಧಿಕಾರಿಗೆ ಮಾತ್ರ ಇರುತ್ತದೆ. ಆದರೆ ಈ ಪ್ರಕರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಅಕ್ರಮ ಎಸಗಿದ್ದ ಕಂದಾಯ ಅಧಿಕಾರಿ ಸುಪ್ರೀಂಕೋರ್ಟ್ ಆದೇಶದಂತೆ ಹಿಂಬಡ್ತಿ ಆದೇಶದಡಿ ಬೇರೆ ಕಡೆ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಜನಪ್ರತಿನಿಧಿಗಳ ಪ್ರಭಾವದಿಂದ ಅಧಿಕಾರಿ ಮರಳಿ ಅದೇ ಸ್ಥಾನಕ್ಕೆ ಬಂದಿದ್ದಾರೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಜಿಲ್ಲಾಧಿಕಾರಿ ಕಾನೂನು ಪಾಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.