ಫೋನ್​ ಕದ್ದಾಲಿಕೆ ಮಾಡುವುದು ದೊಡ್ಡ ನೀಚತನ ಎಂದು ಕಿಡಿಕಾರಿದ ಅನರ್ಹ ಶಾಸಕ ಎಚ್​. ವಿಶ್ವನಾಥ್​

ಮೈಸೂರು: ಫೋನ್​ ಕದ್ದಾಲಿಕೆ ಮಾಡುವುದು ದೊಡ್ಡ ನೀಚತನ ಎಂದು ಹೇಳಿರುವ ಅನರ್ಹ ಶಾಸಕ ಎಚ್​.ವಿಶ್ವನಾಥ್​ ಪ್ರಕರಣದ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

ಟೆಲಿಫೋನ್​ ಟ್ಯಾಪಿಂಗ್​ ಕುರಿತಾಗಿ ನಿರಂತವಾಗಿ ಮಾತನಾಡುತ್ತಿರುವ ವಿಶ್ವನಾಥ್​ ಅವರು ಇಂದು ಕೂಡ ಈ ಬಗ್ಗೆ ಧ್ವನಿ ಎತ್ತಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಕೆಲಸವನ್ನು ಯಾರೇ ಮಾಡಿರಲಿ. ಅದು ದೊಡ್ಡ ತಪ್ಪು ಎಂದು ಹೇಳಿದರು. ಅಲ್ಲದೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಸಿಎಂ ಆಗಿದ್ದ ರಾಮಕೃಷ್ಣ ಅವರೇ ಫೋನ್ ಕದ್ದಾಲಿಕೆಯಲ್ಲಿ ಸಿಕ್ಕಿಬಿದ್ದಿದ್ದರು. ಅವರು ಚಾಣಾಕ್ಷ ರಾಜಕಾರಣಿ ಎನಿಸಿಕೊಂಡಿದ್ದರೂ, ಫೋನ್​ ಕದ್ದಾಲಿಕೆ ಪ್ರಕರಣದಲ್ಲಿ ರಾಜೀನಾಮೆ ಕೊಡುವ ಸಂದರ್ಭ ಎದುರಾಯಿತು. ಪ್ರಕರಣದ ಬಗ್ಗೆ ಸಮಗ್ರವಾದ ತನಿಖೆಗೆ ಒಕ್ಕೊರಲ ಒತ್ತಾಯ ಕೇಳಿ ಬರುತ್ತಿದೆ. ಖಾಸಗಿ ವಿಚಾರ ಬಹಿರಂಗ ಮಾಡುವುದು ನೀಚತನದ ಕೆಲಸ ಎಂದು ಪರೋಕ್ಷವಾಗಿ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.

ಕಾಲಾಯ ತಸ್ಮೈ ನಮಃ
ಹುಣಸೂರು ಉಪಚುನಾವಣೆಯಲ್ಲಿ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು ನಮ್ಮ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಪ್ರಕರಣ ಇತ್ಯರ್ಥವಾಗಲಿ, ನಂತರ ಆ ಬಗ್ಗೆ ನೋಡೋಣ, ಕಾಲಾಯ ತಸ್ಮೈ ನಮಃ ಎನ್ನುವಂತೆ ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)