ಯಾವುದೇ ಕಾರಣಕ್ಕೂ ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಸೋಲಲು ಬಿಡುವುದಿಲ್ಲ: ಎಚ್​ಡಿಕೆ

ಕಾರ್ಕಳ: ಮಂಡ್ಯ ರಾಜಕೀಯ ಮೈಸೂರಿನಲ್ಲಿ ಪರಿಣಾಮ ಬೀರುವುದಿಲ್ಲ. ಅಲ್ಲಿ ಮೈತ್ರಿ ಅಭ್ಯರ್ಥಿ ವಿಜಯ್​ ಶಂಕರ್​ ಅವರು ಸೋಲಲು ಬಿಡುವುದಿಲ್ಲ. ಈ ಸಂಬಂಧ ನಾವು ಎಲ್ಲ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಎಚ್​.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಮೈಸೂರಿನಲ್ಲಿ ದೋಸ್ತಿ ಅಭ್ಯರ್ಥಿಗೆ ಹಿನ್ನಡೆಯಾಗಿಲ್ಲ, ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ವಿಜಯಶಂಕರ್​ ಅವರ ಗೆಲುವಿಗಾಗಿ ಎಲ್ಲರೂ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಒಗ್ಗಟ್ಟು ಪ್ರದರ್ಶಿಸಿದ ಜೆಡಿಎಸ್​-ಕಾಂಗ್ರೆಸ್​ ಮುಖಂಡರು

ಮೈಸೂರಿನಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಮುಖಂಡರು ಒಟ್ಟಿಗೆ ಸುದ್ದಿಗೋಷ್ಠಿ ನಡೆಸಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಈ ವೇಳೆ ಮಾತನಾಡಿದ ಸಚಿವ ಜಿ.ಟಿ. ದೇವೇಗೌಡ ಅವರು ಮೈತ್ರಿ ಅಭ್ಯರ್ಥಿ ಗೆಲುವಿಗೆ ನಾವು ಹಳೆಯದನ್ನೆಲ್ಲ ಮರೆಯಲು ನಿರ್ಧರಿಸಿದ್ದೇನೆ. ನಾನು ಸಿದ್ದರಾಮಯ್ಯ ಒಟ್ಟಾಗಿ ಚುನಾವಣಾ ಪ್ರಚಾರ ಕೈಗೊಳ್ಳುತ್ತೇವೆ. ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ – ಜೆಡಿಎಸ್ ಒಂದಾರೆ ಮೈತ್ರಿ ಅಭ್ಯರ್ಥಿ ಗೆಲುವು ಸಾಧ್ಯವೇ ಎಂಬ ಪ್ರಶ್ನೆ ಬೇಡ ಎಂದರು.

ಕೆ.ಆರ್. ನಗರ ತಾಲೂಕಿನಲ್ಲಿ ಮೈತ್ರಿ ಅಭ್ಯರ್ಥಿ ವಿರುದ್ಧವಾಗಿ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಪ್ರಚಾರ ನಡೆಸುತ್ತಿದ್ದು, ಈಗಾಗಲೇ ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಕ್ಷೇತ್ರದಲ್ಲಿ ಇದೀಗ ವಾತಾವರಣ ಸಾಕಷ್ಟು ತಿಳಿಯಾಗಿದೆ ಎಂದು ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ಕಾಫಿ, ಕರಿಮೆಣಸಿನ ದರ ಕುಸಿದು ಕೊಡಗಿನ ಜನರು ಸಂಕಷ್ಟದಲ್ಲಿರಲು ಸಂಸದ ಪ್ರತಾಪ್ ಸಿಂಹ ಕಾರಣ. ಕಾಂಗ್ರೆಸ್ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯವನ್ನು ತಾನು ಮಾಡಿದ್ದೇನೆಂದು ಮುದ್ರಿಸಿಕೊಂಡು ಪ್ರತಾಪ್ ಸಿಂಹ ತಿರುಗಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಕಿಡಿ ಕಾರಿದರು.
ಚುನಾವಣೆ ಸಂದರ್ಭದಲ್ಲಿ ಗೊಂದಲ ಸಹಜ, ಗೊಂದಲವನ್ನು ಬಗೆಹರಿಸಿಕೊಂಡು ಮುಂದೆ ಹೋಗುವ ವಿಶ್ವಾಸವಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ತಿಳಿಸಿದರು.

ಏ.12 ರಂದು ಮೈಸೂರು, ಪಿರಿಯಾಪಟ್ಟಣ, ಹುಣಸೂರಿನಲ್ಲಿ ಎಚ್.ಡಿ. ದೇವೇಗೌಡ ಮತ್ತು ಸಿದ್ದರಾಮಯ್ಯ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಏ.13 ರಂದು ಕೆ.ಆರ್. ನಗರದಲ್ಲಿ ಎಚ್.ಡಿ. ದೇವೇಗೌಡ ಮತ್ತು ರಾಹುಲ್ ಗಾಂಧಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಮುಖಂಡರು ತಿಳಿಸಿದರು.

Leave a Reply

Your email address will not be published. Required fields are marked *