ಭಿನ್ನರ ಓಲೈಕೆ ಸಿಎಂ ಕಣಕ್ಕೆ: ಪರಮೇಶ್ವರ್​, ಡಿಕೆಶಿ ಜತೆ ಎರಡು ತಾಸು ಗುಪ್ತ ಸಭೆ

ಬೆಂಗಳೂರು: ಲೋಕಸಭಾ ಚುನಾವಣೆಗೆ ಮತದಾನ ಮುಗಿದ ಬೆನ್ನಲ್ಲೇ ಮತ್ತೆ ಆಪರೇಷನ್ ಕಮಲದ ಸುಳಿವು ನೀಡಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ನಿಗೂಢ ನಡೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಂಪುಟದ ಕೆಲ ಸಹೋದ್ಯೋಗಿಗಳ ಜತೆ ಎರಡು ತಾಸುಗಳ ಕಾಲ ಗುಪ್ತಸಭೆ ನಡೆಸಿದ್ದಾರೆ.

ಕೆಲವು ಸಮಾನ ಮನಸ್ಕ ಶಾಸಕರ ಜತೆ ರ್ಚಚಿಸಿದ ಬಳಿಕ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ಬೆನ್ನಲ್ಲೇ ಗುರುವಾರ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ಜೆಪಿ ನಗರದ ನಿವಾಸದಲ್ಲಿ ಕುಮಾರಸ್ವಾಮಿ ಚರ್ಚೆ ನಡೆಸಿದರು.

ಒಂದೊಮ್ಮೆ ರಮೇಶ್ ರಾಜೀನಾಮೆ ನೀಡಿದರೆ ಅವರೊಂದಿಗೆ ಎಷ್ಟು ಶಾಸಕರು ಕೈಜೋಡಿಸಬಹುದು ಹಾಗೂ ಸಂಭವನೀಯ ಅತೃಪ್ತ ಶಾಸಕರನ್ನು ಸಮಾಧಾನಪಡಿಸುವುದು ಹೇಗೆ ಎಂಬ ಕುರಿತು ಚರ್ಚೆ ನಡೆಯಿತು ಎನ್ನಲಾಗಿದೆ. ರಮೇಶ್ ಜತೆ ಗುರುತಿಸಿಕೊಂಡಿದ್ದ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಕೂಡ ಕುಮಾರಸ್ವಾಮಿ ಅವರನ್ನು ಇದೇ ವೇಳೆ ಭೇಟಿ ಮಾಡಿದ್ದರು. ‘ಯಾವುದೇ ಕಾರಣಕ್ಕೂ ಪಕ್ಷ ತ್ಯಜಿಸುವುದಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಹೀಗಾಗಿ ರಮೇಶ್ ಸಂಪರ್ಕದಲ್ಲಿ ಇರಬಹುದಾದ ಇತರ ಶಾಸಕರ್ಯಾರು ಎಂಬ ಬಗ್ಗೆ ಸಿಎಂ ನೇತೃತ್ವದ ಸಭೆಯಲ್ಲಿ ರ್ಚಚಿಸಲಾಯಿತು. ಅಂತಹ ಅತೃಪ್ತ ಶಾಸಕರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುವಂತೆ ಡಿಕೆಶಿಗೆ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಮತದಾನ ಪೂರ್ಣಗೊಂಡಿದ್ದರಿಂದ ಚುನಾವಣಾ ನೀತಿ ಸಂಹಿತೆ ಸಡಿಲಗೊಂಡಿದ್ದು, ನಿಯಮಾನುಸಾರ ಸರ್ಕಾರ ತನ್ನ ಚಟುವಟಿಕೆಗಳನ್ನು ನಡೆಸಲು ಅನುವಾಗುವಂತೆ ಬರ ಪರಿಹಾರ, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಸಭೆಗಳಿಗೆ ಮರು ಚಾಲನೆ ನೀಡುವ ಕುರಿತಂತೆಯೂ ಇದೇ ವೇಳೆ ಸಭೆಯಲ್ಲಿ ರ್ಚಚಿಸಲಾಗಿದೆ.

ಚುನಾವಣೆ ಹಿನ್ನೆಲೆಯಲ್ಲಿ ಆಡಳಿತದ ಬಗ್ಗೆ ಹೆಚ್ಚು ಗಮನ ಕೊಡಲು ಆಗಿರಲಿಲ್ಲ. ಹೀಗಾಗಿ ಆಡಳಿತ ಯಂತ್ರ ಚುರುಕುಗೊಳಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ. ನೀತಿ ಸಂಹಿತೆ ಸಡಿಲಗೊಳಿಸಿ ಆಡಳಿತ ಮಾಡಲು ಅವಕಾಶ ಕೊಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇವೆ. ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ನಮಗೆ ಯಾವ ಆತಂಕವೂ ಇಲ್ಲ.

| ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ

ಏಕಾಂಗಿಯಾದರೇ ರಮೇಶ್ ಜಾರಕಿಹೊಳಿ?

ಬೆಂಗಳೂರು: ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸಿ ‘ಗುಂಪಾಗಿ ರಾಜೀನಾಮೆ ನೀಡುತ್ತೇವೆ’ ಎಂದು ಹೇಳಿಕೆ ನೀಡಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಈಗ ಅಕ್ಷರಶಃ ಏಕಾಂಗಿ. ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಶಾಸಕರ ನಿರೀಕ್ಷೆಯಲ್ಲಿ ರಮೇಶ್ ದಿನವಿಡೀ ಕಾದಿದ್ದರು, ಯಾವೊಬ್ಬ ಶಾಸಕ ಅವರ ಭೇಟಿಗೆ ಬಂದಿಲ್ಲ, ದೂರವಾಣಿಯಲ್ಲಿಯೂ ಸಂಪರ್ಕಕ್ಕೆ ಸಿಕ್ಕಿಲ್ಲ. ಈ ನಡುವೆ, ಆತ್ಮೀಯ ಮುಖಂಡರ ಜತೆ ಚರ್ಚೆ ನಡೆಸಿದರೆಂದು ತಿಳಿದುಬಂದಿದೆ.

ಜಾರಕಿಹೊಳಿ ಕುಟುಂಬದಲ್ಲಿನ ಜಗಳಕ್ಕೆ ನಮ್ಮನ್ನು ಬಳಸಿಕೊಳ್ಳಲು ರಮೇಶ್ ಮುಂದಾಗಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಯಾವುದೇ ಶಾಸಕರು ಅವರೊಂದಿಗೆ ಗುರುತಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆಂದು ಮೂಲಗಳು ಹೇಳಿವೆ. ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್, ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ, ಅಥಣಿ ಶಾಸಕ ಮಹೇಶ್ ಕುಮಠಳ್ಳಿ, ಹರಪ್ಪನಹಳ್ಳಿಯ ಭೀಮಾನಾಯ್್ಕ ಗುರುವಾರ ರಮೇಶ್ ಜತೆ ಸಭೆ ನಡೆಸಬಹುದೆಂದು ರಾಜಕೀಯ ವಲಯದಲ್ಲಿ ಮಾತಿತ್ತು. ಆದರೆ, ಇವರೆಲ್ಲ ತಾವಿದ್ದ ಕಡೆಗಳಿಂದಲೇ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಕಾಂಗ್ರೆಸ್​ನಲ್ಲಿ ಇದ್ದೇವೆಂದು ಖಚಿತಪಡಿಸಿದ್ದಾರೆ. ಅಲ್ಲದೆ, ರಮೇಶ್ ಜತೆ ಹೋಗುವ ಪ್ರಮೇಯವಿಲ್ಲ, ಅವರು ರಾಜೀನಾಮೆ ನೀಡಿದರೆ ಅದಕ್ಕೂ ನಮಗೂ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ರಮೇಶ್ ಜತೆಗೆ ಹೆಸರು ಕೇಳಿಬರುತ್ತಿರುವ ಶಾಸಕರ ಸಂಪರ್ಕ ಸಾಧಿಸಿ, ಅವರ ಅಭಿಪ್ರಾಯ ಪಡೆದುಕೊಂಡು ಮನವೊಲಿಸುವ ಕಾರ್ಯಕ್ಕೆ ಕಾಂಗ್ರೆಸ್ ನಾಯಕರು ಕೈ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಮೇಶ್ ಜತೆ ಯಾವುದೇ ಶಾಸಕರಿಲ್ಲ, ಅವರೊಬ್ಬ ಏಕಾಂಗಿ. ಅವರ ಮನವೊಲಿಸುವ ಎಲ್ಲ ಪ್ರಯತ್ನ ಮಾಡಲಾಗಿದೆ. ಅವರೊಬ್ಬರು ರಾಜೀನಾಮೆ ಕೊಟ್ಟರೆ ಏನೂ ಆಗುವುದಿಲ್ಲ ಎಂಬುದು ಅವರಿಗೂ ಅರಿವಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ‘ವಿಜಯವಾಣಿ’ಗೆ ತಿಳಿಸಿದರು. ರಮೇಶ್ ಜತೆ ಕಾಂಗ್ರೆಸ್ ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲವೆಂಬ ಮಾಹಿತಿ ಹಿನ್ನೆಲೆಯಲ್ಲಿ ಬಿಜೆಪಿ ಕೋರ್ ಕಮಿಟಿ ಯಲ್ಲಿ ಉಪಚುನಾವಣೆ ಹಾಗೂ ಲೋಕಸಭಾ ಚುನಾವಣೆ ಮತದಾನ ಕುರಿತು ಚರ್ಚೆ ನಡೆಸಿತು. ರಮೇಶ್ ಜಾರಕಿಹೊಳಿ ಬಂಡಾಯ ಹಾಗೂ ಅದರಿಂದ ಸರ್ಕಾರ ರಚನೆಗೆ ಆಗುವ ಪ್ರಯೋಜನದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ.

ರಮೇಶ್ ಎರಡು ಏಟು ಹೊಡೆಯಲಿ

ನಾನು ರಮೇಶ್ ಜಾರಕಿಹೊಳಿ ಅವರಿಗೆ ಸರಿಸಮನಾದ ನಾಯಕನಲ್ಲ. ಅವರು ಎರಡು ಏಟು ಹೊಡೆದು ಬಿಡಲಿ. ನನಗೇನೂ ಬೇಸರವಿಲ್ಲ. ನಾವೆಲ್ಲರೂ ಒಂದೇ ಕುಟುಂಬದವರು ಎಂದು ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದರು. ಸರ್ಕಾರ ಬೀಳುತ್ತದೆ ಎಂದು ಯಾವ ಕಾಂಗ್ರೆಸ್ ಶಾಸಕರೂ ಹೇಳಿಲ್ಲ. ಮಾಧ್ಯಮದವರಿಗೆ ಸುದ್ದಿ ಬೇಕು ಎಂಬ ಕಾರಣಕ್ಕಾಗಿ ಹೀಗೆ ಮಾತನಾಡಿದ್ದಾರಷ್ಟೇ ಎಂದರು.

ರಮೇಶ್​ಗೆ ಬದ್ಧತೆ ಇಲ್ಲ

ಉತ್ತರ ಕರ್ನಾಟಕ ಭಾಗದ ಹಾಗೂ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಮಧ್ಯಪ್ರವೇಶಿಸುತ್ತಿದ್ದರಿಂದ ಅಂದು ನಾವೆಲ್ಲ ಒಗ್ಗಟ್ಟಾಗಿ ಬಂಡಾಯ ಎದ್ದಿದ್ದೆವು. ಆಗ ಸಿಎಂ ಕುಮಾರಸ್ವಾಮಿ ಪರಿಹರಿಸಿದ್ದರಿಂದ ಬಂಡಾಯ ಕೈಬಿಟ್ಟಿದ್ದೆವು. ಆದರೆ, ರಮೇಶ್ ಜಾರಕಿಹೊಳಿ ಬಂಡಾಯ ಮುಂದುವರಿಸಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಹೇಳಿದ್ದಾರೆ. ಅವರೊಬ್ಬ ಬದ್ಧತೆ ಇಲ್ಲದ ರಾಜಕಾರಣಿ. ಅಳಿಯನ ಹಿತಾಸಕ್ತಿಗಾಗಿ ಬಿಜೆಪಿ ಸೇರುತ್ತಿದ್ದಾರೆ. ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದ್ದು, ಅವರು ಪಕ್ಷ ಬಿಡುವುದಿಲ್ಲ ಎಂದರು.