Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಸರ್ಕಾರಕ್ಕೆ ಇಂಧನ, ಮದ್ಯದ ಕಿಕ್ ದುಬಾರಿ

Friday, 06.07.2018, 3:04 AM       No Comments

ದೊಡ್ಡ ಪ್ರಮಾಣದ ಸಂಪನ್ಮೂಲ ಕ್ರೋಡೀಕರಣದ ಅನಿವಾರ್ಯತೆಗೆ ಸಿಲುಕಿರುವ ಸರ್ಕಾರ ವಿವಿಧ ತೆರಿಗೆಗಳನ್ನು ಏರಿಕೆ ಮಾಡಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ. ರಾಜ್ಯದ ಜನರು ಪೆಟ್ರೋಲ್, ಡೀಸೆಲ್, ವಿದ್ಯುತ್, ಮದ್ಯ ಹಾಗೂ ಖಾಸಗಿ ಸೇವಾ ವಾಹನ ನೋಂದಣಿಗೆ ಜುಲೈ ಮಧ್ಯಭಾಗದಿಂದಲೇ ಹೆಚ್ಚಿನ ಹಣ ತೆರಬೇಕಾಗುವ ಸಾಧ್ಯತೆಯಿದೆ.

ಜಾಗತಿಕ ಮಾರುಕಟ್ಟೆ ಪ್ರಭಾವದಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯು ಸಾಮಾನ್ಯರಿಗೆ ತಲೆನೋವಾಗಿದೆ. ಈ ವಿಚಾರ ರಾಷ್ಟ್ರಮಟ್ಟದಲ್ಲಿ ರಾಜಕೀಯ ವಾಗ್ವಾದಕ್ಕೂ ವೇದಿಕೆಯಾಗಿತ್ತು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸುಂಕ ಇಳಿಸಿ ದರ ನಿಯಂತ್ರಿಸಬೇಕು ಎಂಬ ಆಗ್ರಹಗಳೂ ಕೇಳಿಬಂದಿದ್ದವು. ಇದಕ್ಕೆ ವ್ಯತಿರಿಕ್ತವಾಗಿ ರಾಜ್ಯದಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ತೆರಿಗೆಯನ್ನು ಶೇ. 30ರಿಂದ 32ಕ್ಕೆ ಹಾಗೂ ಡೀಸೆಲ್ ತೆರಿಗೆಯನ್ನು ಶೇ.19ರಿಂದ 21ಕ್ಕೆ ಏರಿಸಲು ಪ್ರಸ್ತಾಪಿಸಲಾಗಿದೆ. ಇದರಿಂದ ಪ್ರವೇಶ ತೆರಿಗೆ ಸೇರಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಒಟ್ಟಾರೆ ತೆರಿಗೆಯು ಕ್ರಮವಾಗಿ ಶೇ.51.48 ಹಾಗೂ ಶೇ. 36.33ಕ್ಕೆ ಹೆಚ್ಚಳವಾದಂತಾಗಿದೆ. ಇದರಿಂದ ಪೆಟ್ರೋಲ್ 1.14 ರೂ. ಹಾಗೂ ಡೀಸೆಲ್ 1.12 ರೂ. ಏರಿಕೆಯಾಗಲಿದೆ. ಇದಕ್ಕೆ ಪ್ರವೇಶ ತೆರಿಗೆ ಕೂಡ ಹೆಚ್ಚುವರಿಯಾಗಿ ಸೇರುತ್ತದೆ.

ಕಿಕ್ಕೇರಿದ ಮದ್ಯ: ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್​ನಲ್ಲಿ ಅಬಕಾರಿ ಇಲಾಖೆಗೆ 18,750 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ನೀಡಲಾಗಿತ್ತು. ಇದನ್ನು ಪರಿಷ್ಕರಿಸಿ 19,750 ಕೋಟಿ ರೂ.ಗಳಿಗೆ ಏರಿಸಲಾಗಿದೆ. ಹೀಗಾಗಿ ಹಾಲಿ ದರಗಳ ಮೇಲೆ ಶೇ. 4ರ ಹೆಚ್ಚುವರಿ ಅಬಕಾರಿ ಸುಂಕಕ್ಕೆ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಇದರಿಂದ 18 ಘೋಷಿತ ಮದ್ಯದ ಸ್ಲಾಬ್​ಗಳ ದರದಲ್ಲಿ ಏರಿಕೆಯಾಗಲಿದೆ.

ಸಾರಿಗೆ: 6,656 ಕೋಟಿ ರೂ. ಮೋಟಾರು ವಾಹನ ತೆರಿಗೆ ಗುರಿ ನೀಡಲಾಗಿದೆ. ಹೀಗಾಗಿ ಖಾಸಗಿ ವಾಹನ ತೆರಿಗೆ ಪ್ರತಿ ಚ. ಮೀಟರ್​ಗೆ ಶೇ.50ರಂತೆ ಹೆಚ್ಚಳವಾಗಲಿದೆ.

ಇಂಧನ: ವಿದ್ಯುತ್ ಬಳಕೆ ಮೇಲಿನ ತೆರಿಗೆ ಶೇ.6ರಿಂದ 9ಕ್ಕೆ ಏರಿಕೆಯಾಗಲಿದೆ. ಹೀಗಾಗಿ ಪ್ರತಿ ಯೂನಿಟ್ ವಿದ್ಯುತ್ ಮೇಲೆ 20 ಪೈಸೆ ತೆರಿಗೆ ಕಟ್ಟಬೇಕಾಗುತ್ತದೆ. ಈ ಹಿಂದೆ ಇದು 10 ಪೈಸೆಯಿತ್ತು.

ಪೆಟ್ರೋಲ್ ಬೆಲೆ ಏರಿಕೆ

ಸುಮಾರು ಎರಡು ವಾರದಿಂದ ಯಥಾಸ್ಥಿತಿಯಲ್ಲಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಗುರುವಾರ ಏರಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್​ಗೆ 16 ಪೈಸೆ ಮತ್ತು ಡೀಸೆಲ್​ಗೆ 12 ಪೈಸೆ ಹೆಚ್ಚಳವಾಗಿದೆ. ಈ ದರ ಏರಿಕೆಯಿಂದ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್​ಗೆ -ಠಿ; 75.71 ಮತ್ತು ಡೀಸೆಲ್ ದರ -ಠಿ; 67.50ಕ್ಕೆ ತಲುಪಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರ ಏರಿಕೆಯನ್ನು ತಗ್ಗಿಸಲು ನಿತ್ಯ 10 ಲಕ್ಷ ಬ್ಯಾರಲ್ ತೈಲ ಉತ್ಪಾದನೆ ಹೆಚ್ಚಳ ಮಾಡುವುದಾಗಿ ಪೆಟ್ರೋಲ್ ರಫ್ತು ಮಾಡುವ ರಾಷ್ಟ್ರಗಳ ಒಕ್ಕೂಟ (ಒಪೆಕ್) ಹೇಳಿತ್ತು. ಈ ಹಿನ್ನೆಲೆಯಲ್ಲಿ ಎಂಟು ದಿನಗಳಿಂದ ದರ ಪರಿಷ್ಕರಣೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತಡೆಹಿಡಿದಿದ್ದವು.

ಸಿಎಂ ವಿಡಿಯೋ ಸಂವಹನ

ಇ-ಆಡಳಿತ ವ್ಯವಸ್ಥೆಯಲ್ಲಿ ಕೆಲ ಹೊಸ ಯೋಜನೆಯನ್ನು ರೂಪಿಸಲಾಗಿದ್ದು, ಜನ ಸಾಮಾನ್ಯರು ತಮ್ಮ ಊರಿನಿಂದಲೇ ಮುಖ್ಯಮಂತ್ರಿಗಳ ಜತೆ ವಿಡಿಯೋ ಸಂವಹನ ನಡೆಸಬಹುದು. ರಾಜ್ಯದ ಪ್ರತಿ ಗ್ರಾಮ ಪಂಚಾಯತ್ ಮಟ್ಟದವರೆಗೆ ವಿಡಿಯೋ ಸಂವಹನ ಸೌಲಭ್ಯ ವಿಸ್ತರಿಸಲು ನಿರ್ಧರಿಸಲಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಸೌಲಭ್ಯಗಳನ್ನು ಬಳಸಿಕೊಳ್ಳಬಹುದಾಗಿದೆ. ಇದರಿಂದಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸರ್ಕಾರ ತ್ವರಿತಗತಿಯಲ್ಲಿ ಸ್ಪಂದಿಸಲು ಸಹಕಾರಿಯಾಗಲಿದೆ.

ಫ್ಯಾಮಿಲಿ ಐಡಿ ವಿತರಣೆಗೆ ನಿರ್ಧಾರ

ವಿವಿಧ ಬಗೆಯ ಸೌಲಭ್ಯ ಒದಗಿಸಲು ಕುಟುಂಬ ಗುರುತು (ಫ್ಯಾಮಿಲಿ ಐಡಿ) ವಿತರಣೆಗೆ ನಿರ್ಧರಿಸಲಾಗಿದೆ. ಇದು ಕಾರ್ಯ ರೂಪಕ್ಕೆ ಬಂದರೆ ವಸತಿ ಸೌಲಭ್ಯ, ಆರೋಗ್ಯ ವಿಮೆ, ವಿದ್ಯಾರ್ಥಿ ವೇತನ, ವಿವಿಧ ಇಲಾಖೆಗಳ ಕಾರ್ಯಕ್ರಮಗಳು, ವಿಧವಾ ವೇತನ ಮುಂತಾದ ಯೋಜನೆಗಳ ಸಮರ್ಪಕ ಜಾರಿಗೆ ಅನುಕೂಲವಾಗಲಿದೆ. ಅರ್ಜಿ ಸಲ್ಲಿಸದೆ ಸ್ವಯಂ ಚಾಲಿತವಾಗಿ ಸಬ್ಸಿಡಿಗಳನ್ನು ಪಡೆದುಕೊಳ್ಳಬಹುದು.

ಕುಂದುಕೊರತೆ ನಿವಾರಣೆ

ರಾಜ್ಯದ ಎಲ್ಲ ಉಪ ವ್ಯವಸ್ಥೆಗಳನ್ನು ಜೋಡಿಸಿ, ಕ್ರೋಡೀಕೃತ ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ರೂಪಿಸಲು ನಿರ್ಧರಿಸಲಾಗಿದೆ. ಎಲ್ಲ ಇಲಾಖೆಗಳನ್ನು ಒಳಗೊಳ್ಳುವ ಏಕೀಕೃತ ವ್ಯವಸ್ಥೆ ಜನ ಸಾಮಾನ್ಯರಿಗೆ ಸಹಕಾರಿಯಾಗಲಿದೆ. ನಾಗರಿಕರು ಮೊಬೈಲ್, ಕಾಲ್ ಸೆಂಟರ್, ವೆಬ್​ಸೈಟ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಕುಂದು ಕೊರತೆಗಳನ್ನು ನೋಂದಾಯಿಸಬಹುದು. ಕ್ರೋಡೀಕೃತ ಕುಂದುಕೊರತೆ ನಿವಾರಣಾ ವ್ಯವಸ್ಥೆಯಲ್ಲಿ ಲೋಪದೋಷ ಕಂಡು ಬಂದರೆ ಆಯಾ ಇಲಾಖೆ ಸಂಬಂಧಿಸಿದ ಸಿಬ್ಬಂದಿ ಹೊಣೆಗಾರರು.

 


ಬಜೆಟ್ ಔಚಿತ್ಯವೇ ಅರ್ಥವಾಗ್ತಿಲ್ಲ

|ಡಾ.ಸಿ.ಕೆ. ರೇಣುಕಾರ್ಯ, ಆರ್ಥಿಕ ತಜ್ಞರು

ಸಮ್ಮಿಶ್ರ ಸರ್ಕಾರದ 2018-19 ರ ಬಜೆಟ್ ತುಂಬ ನಿರಾಶಾದಾಯಕವಾಗಿದೆ. ರೈತರ ಪೂರ್ಣ ಸಾಲ ಮನ್ನಾ ಆಗುವುದೆಂಬ ಭರವಸೆ ಸುಳ್ಳಾಗಿದೆ. ಕೇವಲ 2 ಲಕ್ಷ ರೂ.ವರೆಗಿನ ಸಾಲ ಮಾತ್ರ ಮನ್ನಾ ಆಗಿದೆ. ಇನ್ನೂ ದೊಡ್ಡ ಪ್ರಮಾಣದ ಸಾಲ ಮನ್ನಾ ನಿರೀಕ್ಷೆ ಇತ್ತು. ಜತೆಗೆ ಅಗತ್ಯ ವಸ್ತುಗಳಾದ ಪೆಟ್ರೋಲಿಯಂ ಮತ್ತು ಡೀಸೆಲ್ ಬೆಲೆಗಳನ್ನು ಏರಿಸಲಾಗಿದೆ. ಸಾಲದೆಂಬಂತೆ ವಿದ್ಯುತ್ ಬೆಲೆಯನ್ನೂ ಏರಿಸಲಾಗಿದೆ. ಇಂಧನ ಬೆಲೆ ಜಾಸ್ತಿಯಾದರೆ ಅದು ಬಹುತೇಕ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ. ವಿದ್ಯುತ್ ಬೆಲೆ ಏರಿಕೆ ಹಲವು ಉತ್ಪನ್ನಗಳ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಹಣ ಉಳಿತಾಯ ಮಾಡುವುದಾಗಿ ಮುಖ್ಯಮಂತ್ರಿ ಹೇಳುತ್ತ ಬಂದಿದ್ದರು. ಆದರೆ ಅಂಥ ಸಾಧ್ಯತೆಗಳನ್ನು ಬಜೆಟ್​ನಲ್ಲಿ ಸ್ಪಷ್ಟವಾಗಿ ಹೇಳಿರದ ಕಾರಣ ಆ ಭರವಸೆ ಕೂಡ ಸುಳ್ಳಾಗಿದೆ.

ಹಿಂದಿನ ಸರ್ಕಾರ ಘೊಷಿಸಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ ಯೋಜನೆಗಳು ಮುಂದುವರಿದಿದ್ದರೂ ಅವುಗಳಿಗೆ ಯಾವುದೇ ಹೊಸ ರೀತಿಯ ತಿರುವನ್ನು ಕೊಡಲಾಗಿಲ್ಲ. ಅಬಕಾರಿ ಸುಂಕ ಶೇ.4 ಹೆಚ್ಚಳವಾಗಿದೆ. ಈಗ ಇರುವ ವಿಶ್ವವಿದ್ಯಾಲಯಗಳೇ ತೀರಾ ಕಷ್ಟದಲ್ಲಿದ್ದರೂ ಹೊಸ ವಿಶ್ವವಿದ್ಯಾಲಯ ಸ್ಥಾಪನೆಯ ಕುರಿತು ಘೊಷಣೆಯಾಗಿದೆ. ಚಲನಚಿತ್ರ ವಿಶ್ವವಿದ್ಯಾಲಯದ ಸ್ಥಾಪನೆ, ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ. ಇಸ್ರೇಲ್ ಮಾದರಿ ಕೃಷಿಯನ್ನು ಸೂಚಿಸಲಾಗಿದ್ದರೂ ಅದು ನಮ್ಮ ರಾಜ್ಯದಲ್ಲಿ ಹೇಗೆ ಜಾರಿಯಾಗಬಹುದು ಎನ್ನುವುದರ ಬಗ್ಗೆ ಸಂಶಯವಿದೆ. ಬಿಎಂಟಿಸಿಗೆ ಮೂರು ಕೋಟಿ ಸಹಾಯಧನ ಯಾವ ಕಾರಣಕ್ಕಾಗಿ ಆಗಿದೆ ಎನ್ನುವುದು ತಿಳಿಯುತ್ತಿಲ್ಲ.

ಜತೆಗೆ ಅತ್ಯಂತ ಮುಖ್ಯವಾದ ಅಂಶವೆಂದರೆ, ಪ್ರಾದೇಶಿಕ ಅಸಮಾನತೆ. ಉತ್ತರ ಕರ್ನಾಟಕ, ಕರಾವಳಿ ಭಾಗವನ್ನು ನಿರ್ಲಕ್ಷಿಸಲಾಗಿದೆ. ಒಟ್ಟಾರೆ ಈ ಬಜೆಟ್​ನ ಔಚಿತ್ಯವೇ ಅರ್ಥ ಆಗುತ್ತಿಲ್ಲ. ಬಂಡವಾಳ ಕ್ರೋಡೀಕರಣಕ್ಕಾಗಲಿ, ಉದ್ಯೋಗ ಸೃಷ್ಟಿಗಾಗಲಿ ಯಾವುದೇ ಒತ್ತು ನೀಡದಿರುವುದು ನಿರಾಶಾದಾಯಕ ಸಂಗತಿ. ಹಾಗೆ ನೋಡಿದರೆ ಈ ಆಯವ್ಯಯದ ಅವಶ್ಯಕತೆಯೇ ಇರಲಿಲ್ಲ.

 

 


ಹೆಚ್ಚುವರಿ 8 ಸಾವಿರ ಕೋಟಿ ರೂ. ಸಾಲ

ವೇತನ ಆಯೋಗದ ಶಿಫಾರಸು ಜಾರಿ ಹಾಗೂ ರೈತರ ಬೆಳೆ ಸಾಲಮನ್ನಾದ ಹೊರತಾಗಿಯೂ ಆರ್ಥಿಕ ಶಿಸ್ತು ಪಾಲನೆ ಮಾಡುತ್ತೇವೆ. ಜಿಎಸ್​ಡಿಪಿ ಏರಿಕೆ, ಆರ್ಥಿಕ ಶಿಸ್ತಿನಿಂದ ರಾಜ್ಯದ ಆರ್ಥಿಕ ಸ್ಥಿತಿ ಹದಗೆಡುವುದಿಲ್ಲ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಕೃಷಿ ಸಾಲಮನ್ನಾ ಹಾಗೂ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯ ಆರ್ಥಿಕ ಹೊರೆಯ ಹೊರತಾಗಿಯೂ ರಾಜ್ಯದ ಅಭಿವೃದ್ಧಿ ಯೋಜನೆಗೆ ಸಂಪನ್ಮೂಲ ಕೊರತೆಯಾಗದಂತೆ ನೋಡಿಕೊಳ್ಳುವುದಾಗಿ ಬಜೆಟ್ ಭಾಷಣದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಮಧ್ಯಮಾವಧಿ ಆರ್ಥಿಕ ವರದಿಯಲ್ಲಿ ಉಲ್ಲೇಖಿಸಿರುವ ಪ್ರಕಾರ ಈ ಹಣ ಹೊಂದಿಕೆಗೆ ಕೆಲ ಇಲಾಖೆಗಳ ಅನುದಾನ ಕಡಿತ ಅನಿವಾರ್ಯ ಎಂದು ಹೇಳಲಾಗಿದ್ದು, ಉಳಿದ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಮಾಗೋಪಾಯ ಹುಡುಕಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.

ಈ ಕಾರಣಗಳಿಂದ 2018-19ನೇ ಸಾಲಿನ ಒಟ್ಟು ಬಜೆಟ್ ಗಾತ್ರವು 2,18,488 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್ ಗಾತ್ರ 2,09,181 ಕೋಟಿ ರೂ.ಗಳಷ್ಟಿತ್ತು. ಹಾಗೆಯೇ ಸಾಲದ ಪ್ರಮಾಣ ಕೂಡ 39,382 ಕೋಟಿ ರೂ.ಗಳಿಂದ 47,134 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. 106 ಕೋಟಿ ರೂ.ಗಳ ರಾಜಸ್ವ ಹೆಚ್ಚಳದೊಂದಿಗೆ 40,753 ಕೋಟಿ ರೂ. ವಿತ್ತೀಯ ಕೊರತೆ ನಿರೀಕ್ಷಿಸಲಾಗಿದೆ. ಇದು ರಾಜ್ಯದ ಆಂತರಿಕ ಉತ್ಪನ್ನದ ಶೇ.2.89ರಷ್ಟಾಗುತ್ತದೆ. ಇನ್ನು 2018-19ರ ಆರ್ಥಿಕ ವರ್ಷದ ಕೊನೆಯಲ್ಲಿ ರಾಜ್ಯದ ಒಟ್ಟಾರೆ ಹೊಣೆಗಾರಿಕೆಯು 2,92,220 ಕೋಟಿ ರೂ.ಗಳಿಗೆ ತಲುಪಲಿದ್ದು, ಇದು ಕೂಡ ಜಿಎಸ್​ಡಿಪಿಯ ಶೇ.20.75 ಆಗುತ್ತದೆ.

ಆಯೋಗದ ಶಿಫಾರಸಿಗೆ ಸಮ್ಮತಿ

ತೆರಿಗೆ ವರ್ಧನೆಗೆ ಸಂಬಂಧಿಸಿ 4ನೇ ರಾಜ್ಯ ಹಣಕಾಸು ಆಯೋಗದ ಶಿಫಾರಸಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ರಾಜ್ಯ ಸ್ವಂತ ತೆರಿಗೆಯಲ್ಲಿ ಸ್ಥಳೀಯ ಸಂಸ್ಥೆಗಳ ಪಾಲನ್ನು, ರಾಜ್ಯದ ಸಾಲ ರಹಿತ ಸ್ವಂತ ರಾಜಸ್ವ ಸ್ವೀಕೃತಿ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಅದರಂತೆ ಸ್ಥಳೀಯ ಸಂಸ್ಥೆಗಳ ತೆರಿಗೆ ಪಾಲನ್ನು ಶೇ.42ರಿಂದ 48ಕ್ಕೆ ಏರಿಸಲು ನಿರ್ಧರಿಸಿದೆ. 2018-19ರಿಂದ 2022-23ರವರೆಗೆ ಹಂತಹಂತವಾಗಿ ಇದು ಅನುಷ್ಠಾನಗೊಳ್ಳಲಿದೆ.

ಅಭಿವೃದ್ಧಿ ನಿರೀಕ್ಷೆ: ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನವು 2016-17ರಲ್ಲಿದ್ದ ಶೇ.7.5ಕ್ಕೆ ಪ್ರತಿಯಾಗಿ 2017-18ರಲ್ಲಿ ಶೇ.8.5ರ ಬೆಳವಣಿಗೆ ಕಂಡಿದೆ. ಕೃಷಿ ಹಾಗೂ ಕೈಗಾರಿಕೆ ವಲಯವು ಶೇ.4.9, ಸೇವಾ ವಲಯವು ಶೇ.10.4ರ ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ.

ಸಂಪನ್ಮೂಲ ಕ್ರೋಡೀಕರಣ: ರಾಜ್ಯದ ಒಟ್ಟು ಸ್ವಂತ ತೆರಿಗೆಯಲ್ಲಿ ರಾಜಸ್ವವನ್ನು ಜಿಎಸ್​ಟಿ ನಷ್ಟ ಪರಿಹಾರ ಹಾಗೂ 2017-18ನೇ ಪರಿಷ್ಕೃತ ಅಂದಾಜಿಗೆ ಶೇ.16.25ರ ಹೆಚ್ಚಳ ಸೇರಿಸಿದರೆ 1,06,621 ಕೋಟಿ ರೂ. ಆಗುವ ನಿರೀಕ್ಷೆಯಿದೆ. ತೆರಿಗೆಯೇತರ ರಾಜಸ್ವಗಳಿಂದ 8,181 ಕೋಟಿ ರೂ, ಕೇಂದ್ರದ ತೆರಿಗೆ ಪಾಲಿನಿಂದ 36,215 ಕೋಟಿ ರೂ. ಹಾಗೂ 15,379 ಕೋಟಿ ರೂ. ಕೇಂದ್ರದ ಅನುದಾನದ ಅಂದಾಜು ಮಾಡಲಾಗಿದೆ. ಇದರ ಜತೆಗೆ ರಾಜ್ಯ ಸರ್ಕಾರಿ ಸ್ವಾಮ್ಯದ ನಿಗಮ, ಮಂಡಳಿ, ಸ್ಥಳೀಯ ಸಂಸ್ಥೆಗಳ ಸಂಪನ್ಮೂಲ ಕ್ರೋಡೀಕರಣದಿಂದ 16,760 ಕೋಟಿ ರೂ. ದೊರೆಯುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *

Back To Top